ರಾಯಚೂರು

ಕೆರೆಗೆ ಚರಂಡಿ ನೀರು : ಪುರಸಭೆ ಮುಖ್ಯಾಧಿಕಾರಿಗೆ ನೋಟೀಸ್

ಲಿಂಗಸುಗೂರು : ಪಟ್ಟಣದಲ್ಲಿರುವ ಕೆರೆಗೆ ಚರಂಡಿ ನೀರು ಸೇರಿಕೊಳ್ಳುತ್ತಿರುವ ಬಗ್ಗೆ ದೂರು ಬಂದ ಹಿನ್ನೆಲೆಯಲ್ಲಿ, ಸ್ಥಳ ಪರಿಶೀಲನೆ ಮಾಡಿದಾಗ ವಾಸ್ತವಾಂಶ ಬೆಳಕಿಗೆ ಬಂದ ಪರಿಣಾಮ ಪುರಸಭೆ ಮುಖ್ಯಾಧಿಕಾರಿಗೆ ಕರ್ನಾಟಕ ರಾಜ್ಯ ಮಾಲಿನ್ಯ ನಿಯಂತ್ರಣ ಮಂಡಳಿಯ ಪ್ರಾದೇಶಿಕ ಕಚೇರಿಯ ಪರಿಸರ ಅಧಿಕಾರಿ ನೋಟೀಸ್ ಜಾರಿ ಮಾಡಿದ್ದಾರೆ.


ಜನಜಾಗೃತಿ ಸೇವಾ ಸಂಸ್ಥೆಯ ಎನ್.ಬಸವರಾಜ ಅವರು ಕಚೇರಿಗೆ ದೂರು ಸಲ್ಲಿಸಿದ್ದರು. ದೂರಿನನ್ವಯ ಸ್ಥಳ ಪರಿಶೀಲನೆ ವೇಳೆ ಲಿಂಗಸುಗೂರು ಪಟ್ಟಣದಲ್ಲಿರುವ ದೊಡ್ಡ ಕೆರೆಯ ಪೂರ್ವಭಾಗದಲ್ಲಿ ಚರಂಡಿ, ಒಳಚರಂಡಿಯ ಕಾಮಗಾರಿ ನಡೆಯುತ್ತಿದ್ದು, ತೆರೆದ ಚರಂಡಿಯ ಮಧ್ಯದಲ್ಲಿ ತಡೆಯಾಗಿದ್ದು ನೀರು ತುಂಬಿ ಹರಿಯುತ್ತಿದೆ. ಹತ್ತಿರದಲ್ಲೇ ಇರುವ ಕೆರೆಗೆ ಕೊಳಚೆ ನೀರು ಸೇರುತ್ತಿದೆ. ಪಟ್ಟಣದಲ್ಲಿ ತ್ಯಾಜ್ಯ ನೀರನ್ನು ಸಂಸ್ಕರಿಸುವುದಕ್ಕಾಗಿ ಕೊಳಚೆ ನೀರಿನ ಸಂಸ್ಕರಣೆ ಘಟಕವನ್ನು ಪುರಸಭೆಯಿಂದ ಸ್ಥಾಪಿಸದೇ ಇರುವ ಬಗ್ಗೆ ಗಮನಕ್ಕೆ ಬಂದಿದೆ. ಈಗಾಗಲೇ ಜಲ ಕಾಯ್ದೆ 1974 ಹಾಗೂ ಘನತ್ಯಾಜ್ಯ ನಿರ್ವಹಣಾ ನಿಯಮ 2016ರ ಅಡಿಯಲ್ಲಿ ವಿಧಿಸಿದ ಷರತ್ತುಗಳನ್ನು ಅನುಷ್ಠಾನಗೊಳಿಸುವುದರ ಬಗ್ಗೆ ಹಾಗೂ ಜಲ ಕಾಯ್ದೆ ಸಮ್ಮತಿ ಮತ್ತು ಸಿಂಧುತ್ವ ಪ್ರಮಾಣ ಪತ್ರವನ್ನು ನವೀಕರಿಸುವ ಕುರಿತು ಜ.17, 2020ರಂದೇ ಕಾರಣ ಕೇಳಿ ನೋಟೀಸ್ ನೀಡಲಾಗಿತ್ತು. ಇದುವರೆಗೂ ಯಾವುದೇ ಕ್ರಮ ಕೈಗೊಂಡಿದ್ದರ ಬಗ್ಗೆ ಮಾಹಿತಿ ಲಭ್ಯವಿಲ್ಲ.


ಸ್ಥಳೀಯ ಸಂಸ್ಥೆಗೆ ಘನತ್ಯಾಜ್ಯ ವಸ್ತುಗಳ (ವ್ಯವಸ್ಥಾಪನೆ ಮತ್ತು ನಿರ್ವಹಣೆ) ನಿಯಮಗಳ 2000 ರಡಿಯಲ್ಲಿ ನೀಡಿದ ಸಿಂಧುತ್ವ ಪತ್ರದ ಅವಧಿಯು 31 ಡಿಸೆಂಬರ್ 2019ಕ್ಕೆ ಮುಕ್ತಾಯವಾಗಿದೆ. ಇದಕ್ಕೆ ಈಗಾಗಲೇ ನೋಟಿಸ್ ನೀಡಿದ್ದರೂ ಪುರಸಭೆಯಿಂದ ಇದುವರೆಗೂ ಸಿಂಧುತ್ವ ಪತ್ರದ ನವೀಕರಣಕ್ಕೆ ಅರ್ಜಿ ಸಲ್ಲಿಸಿಲ್ಲ. ಜಲ (ಮಾಲಿನ್ಯ ನಿಯಂತ್ರಣ ಮತ್ತು ನಿವಾರಣೆ) ಕಾಯ್ದೆ 1974 ಸೆಕ್ಷನ್ 24ರ ಅಡಿಯಲ್ಲಿ ನೀರಿನ ಮೂಲಗಳಿಗೆ ತ್ಯಾಜ್ಯ ನೀರನ್ನು ಹರಿಬಿಡುವುದು ಉಲ್ಲಂಘಟನೆಯಾಗಿರುತ್ತದೆ. ಈ ನೋಟೀಸ್ ತಲುಪಿದ 7 ದಿನಗಳಲ್ಲಿ ತಮ್ಮ ಮೇಲೆ ಕಾನೂನು ಕ್ರಮ ಕೈಗೊಳ್ಳಲು ಕೇಂದ್ರ ಕಚೇರಿಗೆ ಏಕೆ ಶಿಫಾರಸ್ಸು ಮಾಡಬಾರದೆಂದು ಈ ಮೂಲಕ ಕಾರಣ ಕೇಳುವ ನೋಟೀಸ್ ನೀಡಲಾಗಿದೆ ಎಂದು ವಿವರಿಸಲಾಗಿದೆ.

Leave a Reply

Your email address will not be published. Required fields are marked *

error: Content is protected !!