ಇಂಧನ ಬೆಲೆ ಹೆಚ್ಚಳಕ್ಕೆ ಕರವೇ ಪ್ರತಿಭಟನೆ : ಕಡಿತಕ್ಕೆ ಆಗ್ರಹ
ಲಿಂಗಸುಗೂರು : ಪೆಟ್ರೋಲ್, ಡೀಸೆಲ್, ಅಡುಗೆ ಅನಿಲ ಸೇರಿ ಇಂಧನ ಹಾಗೂ ಅಗತ್ಯ ವಸ್ತುಗಳ ಬೆಲೆ ಹೆಚ್ಚಳ ಆಗುತ್ತಿರುವುದು ಸಾರ್ವಜನಿಕರ ಮೇಲೆ ಬರೆ ಎಳೆದಂತಾಗುತ್ತಿದೆ. ಕೂಡಲೇ ಕೇಂದ್ರ ಸರಕಾರ ಮರು ಪರಿಶೀಲನೆ ಮಾಡಿ ಇಂಧನ ಬೆಲೆಯನ್ನು ಕಡಿತಗೊಳಿಸಲು ಸೂಚನೆ ನೀಡಬೇಕೆಂದು ಆಗ್ರಹಿಸಿ ಕರ್ನಾಟಕ ರಕ್ಷಣಾ ವೇದಿಕೆ ಕಾರ್ಯಕರ್ತರು ಪ್ರತಿಭಟನೆ ಮಾಡಿದರು.
ಶಿರಸ್ತೆದಾರರ ಮೂಲಕ ರಾಷ್ಟ್ರಪತಿಗಳಿಗೆ ಮನವಿ ಸಲ್ಲಿಸಿದ ಅವರು, ಭಾರತ ದೇಶದಲ್ಲಿ ದಿನದಿಂದ ದಿನಕ್ಕೆ ಜನಸಾಮಾನ್ಯರ ದಿನಬಳಕೆ ವಸ್ತುಗಳು ಗಗನಕ್ಕೇರುತ್ತಲೇ ಇವೆ. ಅವುಗಳಲ್ಲಿ ಜೀವನಾವಶ್ಯಕ ಎನಿಸುವಷ್ಟರ ಮಟ್ಟಿಗೆ ಪ್ರತಿಯೊಬ್ಬರಿಗೂ ಅಗತ್ಯವಾಗಿರುವ ಪೆಟ್ರೋಲ್, ಡಿಸೇಲ್, ಅಡುಗೆ ಅನಿಲದ ಬೆಲೆಗಳು ಈ ಬಾರಿಯ ಕೇಂದ್ರ ಸರಕಾರದ ಬಜೆಟ್‍ನಲ್ಲಿ ಏರಿಕೆಯಾಗಿವೆ. ಅಷ್ಟೇ ಅಲ್ಲದೇ, ಆನ್‍ಲೈನ್ ಆದಾಗಿನಿಂದ ಆಗಾಗ್ಗೆ ಇಂಧನ ಬೆಲೆ ಹೆಚ್ಚಾಗುತ್ತಲೇ ಇದೆ. ಇದರಿಂದ ಸಾರಿಗೆ ಬಸ್‍ಗಳ ಟಿಕೇಟ್ ದರ, ಖಾಸಗಿ ವಾಹನಗಳ ಬಾಡಿಗೆ ದರ ಸೇರಿ ಜನಸಾಮಾನ್ಯರಿಗೆ ಓಡಾಡಲಿಕ್ಕೆ ತೀವ್ರ ಬಾಧೆಗಳು ಕಾಡುತ್ತವೆ.
ಬಡವರಿಗೆ ವರದಾನವಾಗುವಂಥಹ ಯೋಜನೆಗಳನ್ನು ಸರಕಾರ ರೂಪಿಸಬೇಕೇ ಹೊರತು, ಬಡವರಿಗೆ ಹೊರೆಯಾಗುವಂಥಹ ಕಾರ್ಯಕ್ಕೆ ಮುಂದಾಗುವುದು ದುರಂತವೇ ಸರಿ. ಗಗನಕ್ಕೇರಿದ ದರವನ್ನು ಕಡಿಮೆಗೊಳಿಸಲು ಕೇಂದ್ರ ಸರಕಾರಕ್ಕೆ ಸೂಚನೆ ನೀಡಬೇಕು. ಬಡವರ ಪರವಾಗಿ ಯೋಜನೆಗಳನ್ನು ರೂಪಿಸಲು ಸರಕಾರ ಮುಂದಾಗಬೇಕೆಂದು ಮಾಗದರ್ಶನ ನೀಡಬೇಕೆಂದು ಆಗ್ರಹಿಸಿದರು.
ಕರವೇ ಅಧ್ಯಕ್ಷ ಜಿಲಾನಿಪಾಪಾ, ಪ್ರಧಾನ ಕಾರ್ಯದರ್ಶಿ ಶಿವರಾಜ ನಾಯಕ, ಖಜಾಂಚಿ ಅಜೀಜ್ ಪಾಷ, ಚಂದ್ರು ನಾಯಕ, ರವಿಕುಮಾರ ಬರಗುಡಿ, ಹನುಮಂತ ನಾಯಕ, ಜಮೀರ್‍ಖಾನ್, ಅಲ್ಲಾವುದ್ದಿನ್ ಬಾಬ, ಅಮರೇಶ, ಇರ್ಫಾನ್ ಚೌದರಿ, ಹನುಮಂತ ಭಜಂತ್ರಿ, ರುದ್ರಯ್ಯ ಸ್ವಾಮಿ, ಬಸವರಾಜ, ಮಹ್ಮದ್ ಪ್ರಭು ಕಾಳಾಪೂರ ಸೇರಿದಂತೆ ಇತರರು ಈ ಪ್ರತಿಭಟನೆಯಲ್ಲಿ ಇದ್ದರು.

