ನಾನಾ ಬೇಡಿಕೆಗಳ ಈಡೇರಿಕೆಗೆ ರೈತರ ಒತ್ತಾಯ
ಲಿಂಗಸುಗೂರು : ರೈತರ ನಾನಾ ಬೇಡಿಕೆಗಳನ್ನು ಈಡೇರಿಸುವಂತೆ ಒತ್ತಾಯಿಸಿ ಕರ್ನಾಟಕ ರಾಜ್ಯ ರೈತ ಸಂಘದ ಪದಾಧಿಕಾರಿಗಳು ಮನವಿ ಸಲ್ಲಿಸಿದರು.
ಶಿರಸ್ತೆದಾರರ ಮೂಲಕ ಕೃಷಿ ಸಚಿವರಿಗೆ ಮನವಿ ಸಲ್ಲಿಸಿದ ರೈತರು, 2020ರಲ್ಲಿ ಅತಿವೃಷ್ಠಿಯಿಂದ ಬೆಳೆ ನಷಚ್ಟವಾಗಿದ್ದಕ್ಕೆ ರಾಯಚೂರು ಜಿಲ್ಲೆಯ ಎಲ್ಲಾ ರೈತರಿಗೆ ಬೆಳೆ ಪರಿಹಾರ ಕೊಡಬೇಕು. 2018-19, 2019-20ರ ಬೆಳೆ ವಿಮೆ ಹಣವನ್ನು ತಕ್ಷಣವೇ ರೈತರ ಖಾತೆಗೆ ಜಮಾ ಮಾಡಬೇಕು. ಜಿಲ್ಲೆಯ ರೈತರ ಪಂಪ್‍ಸೆಟ್‍ಗಳಿಗೆ ಹಗಲು 10 ಗಂಟೆ ನಿರಂತರವಾಗಿ ವಿದ್ಯುತ್ ಪೂರೈಕೆ ಮಾಡಬೇಕು. ಕೃಷಿ ಉತ್ಪನ್ನ ಮಾರುಕಟ್ಟೆ ಮುದಗಲ್, ಲಿಂಗಸುಗೂರುನಲ್ಲಿ ಶೇ.2ರಷ್ಟು ಕಮಿಷನ್ ತೆಗೆಯುವುದು ಮತ್ತು ಹಗುರವಾದ ಚೀಲಗಳಲ್ಲಿ ತೂಕ ಮಾಡುವುದು ಅರ್ಧ ಕೆಜಿ ಹೆಚ್ಚುವರಿಯಾಗಿ ಬಾದ ತೆಗೆಯುವದು ನಿರಂತರವಾಗಿ ರೈತರ ಮೇಲೆ ಮಾರುಕಟ್ಟೆಯಲ್ಲಿ ದಾಳಿ ನಡೆಯುತ್ತಿದೆ. ಇದನ್ನು ತಪ್ಪಿಸಿ ರೈತರ ರಕ್ಷಣೆ ಮಾಡಬೇಕು.
ಉಪನೋಂದಣಾಧಿಕಾರಿ ಕಚೇರಿಯಲ್ಲಿ ಇ.ಸಿ. ಪಡೆಯಲು ರೈತರು ರೂ.400 ರಿಂದ ರೂ.500 ಖರ್ಚು ಮಾಡಬೇಕಾಗುತ್ತದೆ. ಆನ್‍ಲೈನ್ ವ್ಯವಸ್ಥೆಯಿಂದ ರೈತರಿಗೆ ತೊಂದರೆಯಾಗುತ್ತದೆ. ನೇರವಾಗಿ ನೋಂದಣಾಧಿಕಾರಿಗಳ ಕಚೇರಿಯಲ್ಲಿ ಹಣ ತುಂಬಿಸಿಕೊಂಡು ಇ.ಸಿ.ಕೊಡುವ ವ್ಯವಸ್ಥೆ ಮಾಡಬೇಕು. ಬಗರ್‍ಹುಕುಂ ಸಾಗುವಳಿದಾರರಿಗೆ ಹಾಗೂ ಅರಣ್ಯ ಭೂಮಿಯಲ್ಲಿ ಸಾಗುವಳಿ ಮಾಡಿ ರೈತರಿಗೆ ಪಟ್ಟಾ ಕೊಡುವ ವ್ಯವಸ್ಥೆ ಮಾಡಬೇಕು ಸೇರಿ ಇತರೆ ಬೇಡಿಕೆಗಳ ಈಡೇರಿಕೆಗೆ ಒತ್ತಾಯಿಸಿದರು.
ಸಂಘದ ರಾಜ್ಯ ಮುಖಂಡ ಅಮರಣ್ಣ ಗುಡಿಹಾಳ, ತಾಲೂಕಾಧ್ಯಕ್ಷ ವೀರನಗೌಡ, ಮಲ್ಲಣ್ಣ ಗೌಡೂರ, ಹುಚ್ಚರಡ್ಡಿ ಅಮೀನಗಡ, ಶಿವರಾಜ ಕುಮಾರ ಗುಡಿಹಾಳ, ಕುಪ್ಪಣ್ಣ ಗೋನವಾಟ್ಲ, ಚಂದಾವಲಿ ಮುದಗಲ್, ಹುಸೇನ ನಾಯಕ, ಖಾಸಿಂಸಾಬ, ಬಸವನಗೌಡ ಮಟ್ಟೂರ, ದೇವಪ್ಪ ಕಾಳಾಪೂರ, ಶಂಕರಗೌಡ ಸೇರಿ ಇತರರು ಈ ಸಂದರ್ಭದಲ್ಲಿ ಇದ್ದರು.

