ಮೈ ಕೊರೆವ ಚಳಿಯಲ್ಲಿ.. ಬಸ್ಟಾಂಡ್ ನೆಲದಲ್ಲಿ.. ಬದುಕು ಮೂರಾಬಟ್ಟೆ..!
ವರದಿ: ಖಾಜಾಹುಸೇನ್
ಲಿಂಗಸುಗೂರು : ರೈತರೇ ದೇಶದ ಬೆನ್ನೆಲುಬು, ರೈತರೇ ದೇಶದ ಜೀವಾಳ ಎನ್ನುವ ಮಾತುಗಳು ಕೇವಲ ಬದನೇಕಾಯಿ ಶಾಸ್ತ್ರ ಎನ್ನುವಷ್ಟರ ಮಟ್ಟಿಗೆ ಈಗ ರೈತ ಕೂಲಿಕಾರ್ಮಿಕರ ಪಾಡಾಗಿರುವುದು ಸೋಜಿಗ. ಬದುಕಿನ ಬಂಡಿ ದೂಡಲು ದೂರದ ನಗರ ಪ್ರದೇಶಗಳಿಗೆ ತೆರಳುವ ಕೂಲಿಕಾರರ ಪಾಡು ಆ ದೇವರಿಗೇ ಪ್ರೀತಿ. ಬಸ್‍ಗಳು ಇಲ್ಲದ ಕಾರಣ ಮೈ ಕೊರೆವ ಚಳಿಯಲ್ಲಿ ಎಳೆಮಕ್ಕಳು, ಹಸುಗೂಸುಗಳನ್ನು ನೆಲದ ಮೇಲೆ ಮಲಗಿಸಿ ತಂದೆ-ತಾಯಿಗಳು ಅಸಹಾಯಕರಾಗಿ ಕುಳಿತ ನೋಟ ಮಾತ್ರ ಕರುಳು ಚುರುಕ್ ಎನ್ನುವಷ್ಟು ಭೀಬತ್ಸ.
ತಾಲೂಕಿನ ಗುಂತಗೋಳ, ಸರ್ಜಾಪೂರ, ಊಟಿ, ವಂದಲಿ, ಕಡದರಗಡ್ಡಿ, ಗೋನವಾಟ್ಲಾ ಸೇರಿ ಹತ್ತಾರು ಗ್ರಾಮಗಳಲ್ಲಿನ ಕೂಲಿ ಕಾರ್ಮಿಕರು ನರೇಗಾ ಕೆಲಸ ಇಲ್ಲದ ಪರಿಣಾಮ ಬದುಕಿನ ಬಂಡಿ ದೂಡಲು ದೂರದೂರಿಗೆ ಹೋಗುವುದು ವಾಡಿಕೆಯಾಗಿ ಪರಿಣಮಿಸಿದೆ. ಗುಳೆ ತಪ್ಪಿಸಲು ಸರಕಾರ ಸಾಕಷ್ಟು ಕ್ರಮಗಳನ್ನು ಕೈಗೊಳ್ಳುವ ಭರವಸೆ ನೀಡುತ್ತಲೇ ಇದೆ. ಇತ್ತ ಜನಪ್ರತಿನಿಧಿಗಳು, ಅಧಿಕಾರಿಗಳು ಯೋಜನೆಗಳ ಬಗ್ಗೆ ಹೇಳುತ್ತಲೇ ಇರುತ್ತಾರೆಯೇ ವಿನಃ ವಾಸ್ತವಿಕ ನೆಲೆಗಟ್ಟಿನಲ್ಲಿ ಕಾರ್ಮಿಕರ ಬವಣೆಗಳಿಗೆ ಸ್ಪಂಧಿಸಲು ಯಾರೊಬ್ಬರೂ ಮುಂದಾಗದೇ ಇರುವುದು ವಿಪರ್ಯಾಸವೇ ಸರಿ.
ಜಿಲ್ಲೆಯಲ್ಲಿ ಕೆಲ ತಾಂತ್ರಿಕ ಸಮಸ್ಯೆಯಿಂದ ರಾಷ್ಟ್ರೀಯ ಉದ್ಯೋಗ ಖಾತ್ರಿ ಕಾಮಗಾರಿಗಳು ಸ್ಥಗಿತಗೊಂಡಿವೆ ಎಂದು ಜಿ.ಪಂ. ಮುಖ್ಯಕಾರ್ಯನಿರ್ವಾಹಕ ಅಧಿಕಾರಿಗಳು ಹೇಳುತ್ತಾರೆ. ಆದರೆ, ಹಳ್ಳಿಗಳಲ್ಲಿ ಕೆಲಸವಿಲ್ಲದೇ ಒಪ್ಪತ್ತೂಟಕ್ಕೂ ಕಷ್ಟಪಡುವ ಕಾರ್ಮಿಕರ ಬದುಕು ಮಾತ್ರ ಮೂರಾಬಟ್ಟೆ ಆಗುತ್ತಿರುವುದನ್ನು ತಪ್ಪಿಸಲಾಗುತ್ತಿಲ್ಲ ಎನ್ನುವ ಮಾತುಗಳೀಗ ಜನರಲ್ಲಿ ಕೇಳಿ ಬರುತ್ತಿದೆ.
ಬೆಂಗಳೂರಿಗೆ ಗಾರೆ ಕೆಲಸಕ್ಕೆಂದು ತೆರಳುವ ಕಾರ್ಮಿಕರು ಲಿಂಗಸುಗೂರು ಪಟ್ಟಣದಲ್ಲಿ ಬಸ್ ವ್ಯವಸ್ಥೆ ಇಲ್ಲದ ಪರಿಣಾಮ ಶನಿವಾರ ರಾತ್ರಿ ಗುಂಪಾಗಿ ಸೇರಿದ್ದರು. ಕಾರ್ಮಿಕರು ಮಕ್ಕಳು ಮರಿಗಳೊಂದಿಗೆ ಕುಟುಂಬ ಸಮೇತರಾಗಿ ತೆರಳುವುದು ಇಲ್ಲಿ ಸಾಮಾನ್ಯವಾಗಿದ್ದರೂ, ಸಕಾಲಕ್ಕೆ ಬಸ್ ವ್ಯವಸ್ಥೆ ಇಲ್ಲದ್ದರಿಂದ ಕೆಲಹೊತ್ತು ಬಸ್ಟಾಂಡ್‍ನಲ್ಲಿ ಪ್ರತಿಭಟನೆಯ ವಾತಾವರಣ ಸೃಷ್ಠಿಯಾಯಿತು. ಅಷ್ಟೊತ್ತಿಗಾಗಲೇ ಮಾಹಿತಿ ತಿಳಿದ ಪಿಎಸ್‍ಐ ಪ್ರಕಾಶರೆಡ್ಡಿ, ಕರವೇ ಅದ್ಯಕ್ಷ ಜಿಲಾನಿಪಾಷಾ ಸ್ಥಳಕ್ಕೆ ಧಾವಿಸಿ ಕಾರ್ಮಿಕರ ಪರವಾಗಿ ಸಾರಿಗೆ ಘಟಕ ವ್ಯವಸ್ಥಾಪಕರಿಗೆ ಪೋನಾಯಿಸಿ ಬಸ್ ವ್ಯವಸ್ಥೆ ಮಾಡಿಕೊಟ್ಟಿದ್ದಾರೆ.
ನೂರಾರು ಜನ ಬಸ್ಟಾಂಡ್‍ನಲ್ಲಿ ಜಮಾಯಿದ್ದರಿಂದ ಬಸ್ ತುಂಬಿಯೂ ಮತ್ತಷ್ಟು ಜನರು ಹೆಚ್ಚುವರಿಯಾಗಿ ಉಳಿದುಕೊಂಡಿದ್ದಾರೆ. ಅನಿವಾರ್ಯ ಬಸ್‍ಗಳಿಲ್ಲದ್ದರಿಂದ ಬಸ್ಟಾಂಡ್‍ನಲ್ಲಿಯೇ ರಾತ್ರಿ ಕಳೆದು ಬೆಳಗ್ಗೆ ಬೆಂಗಳೂರಿಗೆ ತೆರಳಿದ್ದಾರೆ. ಕೂಲಿ ಕಾರ್ಮಿಕರು ಗುಳೆ ಹೋಗುವುದನ್ನು ತಪ್ಪಿಸುವಲ್ಲಿ ಜಿಲ್ಲಾಡಳಿತ ಕೂಡಲೇ ಕ್ರಮಕ್ಕೆ ಮುಂದಾಗಬೇಕು ಎನ್ನುವ ಒತ್ತಾಯಗಳು ಸಾರ್ವಜನಿಕವಾಗಿ ಕೇಳಿ ಬರುತ್ತಿವೆ.

