ಮೊದಲ ದಿನದ ಲಾಕ್‍ಡೌನ್‍ಗೆ ಲಿಂಗಸುಗೂರು ಶಟ್‍ಡೌನ್..!
ವರದಿ : ಖಾಜಾಹುಸೇನ್
ಲಿಂಗಸುಗೂರು : ರಾಯಚೂರು ಜಿಲ್ಲೆಯಲ್ಲಿ ಕೊರೊನಾ
ಎರಡನೇ ಅಲೆಯ ಆರ್ಭಟವನ್ನು ಎಡೆಮುರಿ ಕಟ್ಟಲು ಜಿಲ್ಲಾಧಿಕಾರಿಗಳು ವಿಶೇಷವಾಗಿ ಮೂರು ದಿನಗಳ ಕಾಲ ಲಾಕ್‍ಡೌನ್ ಘೋಷಿಸಿದ ಹಿನ್ನೆಲೆಯಲ್ಲಿ ಲಿಂಗಸುಗೂರು ಪಟ್ಟಣ ಸಂಪೂರ್ಣವಾಗಿ ಸ್ತಬ್ಧಗೊಳ್ಳುವ ಮೂಲಕ ಶೆಟ್‍ಡೌನ್ ಆಗಿತ್ತು.
ಹಾಲಿನ ಅಂಗಡಿ, ಪೆಟ್ರೋಲ್ ಬಂಕ್‍ಗಳು, ಆಸ್ಪತ್ರೆಗಳು,
ಔಷಧ ಅಂಗಡಿಗಳು ಹೊರತುಪಡಿಸಿ ಉಳಿದೆಲ್ಲಾ ಚಟುವಟಿಕೆಗಳ ಅಂಗಡಿ ಮುಗ್ಗಟ್ಟುಗಳನ್ನು ಬೆಳಗಿನಿಂದಲೇ ಅಧಿಕಾರಿಗಳು ಬೆನ್ನತ್ತಿ ಬಂದ್ ಮಾಡಿಸಿದರು. ಲಾಕ್‍ಡೌನ್ ಆದೇಶದ ಬಗ್ಗೆ ಮಾಹಿತಿಇಲ್ಲದವರು ಎಂದಿನಂತೆ ಬೆಳಗ್ಗೆ ತರಕಾರಿ ಕೊಳ್ಳಲು ಹಾಗೂ ವ್ಯಾಪಾರಿಗಳು ವ್ಯಾಪಾರಕ್ಕೆಂದು ಮಾರುಕಟ್ಟೆಗೆ ಬಂದಿದ್ದರು.ಆದರೆ, ಮಾರುಕಟ್ಟೆಯಲ್ಲಿ ವ್ಯಾಪಾರಕ್ಕೆ ಅವಕಾಶ ಕೊಡದೇ ಅವರಿಗೆ ಪರಿಸ್ಥಿತಿಯ ಭೇಕರತೆಯ ಬಗ್ಗೆ ಮನವರಿಕೆ ಮಾಡುವ ಮೂಲಕ ಪೋಲಿಸರು ಹಾಗೂ ಪುರಸಭೆ ಸಿಬ್ಬಂಧಿಗಳು ಮನೆಗೆ
ಕಳುಹಿಸಿದರು.
ಭಾನುವಾರ ಬೆಳಗ್ಗೆ 6 ಗಂಟೆಯಿಂದ ಬುಧವಾರ ಬೆಳಗ್ಗೆ 6
ಗಂಟೆವರೆಗೆ ಲಾಕ್‍ಡೌನ್ ಜಾರಿಯಲ್ಲಿರುತ್ತದೆ. ಕೊರೊನಾ ಎರಡನೇ ಅಲೆಯು ಜಿಲ್ಲೆಯಲ್ಲಿ ಸಾಕಷ್ಟು ಅವಾಂತರಗಳನ್ನು
ಸೃಷ್ಠಿಸಿರುವುದನ್ನು ಮನಗಂಡ ಜಿಲ್ಲಾಧಿಕಾರಿಗಳು ಈ ಆದೇಶ
ಮಾಡಿರುವ ಪರಿ ಸಾರ್ವಜನಿಕ ವಲಯದಲ್ಲಿ ಸ್ವಾಗತಾರ್ಹವಾಗಿದೆ.
ಭಾನುವಾರ ಮಾರುಕಟ್ಟೆಯಲ್ಲಿ ಬಹುತೇಕ ಅಂಗಡಿ
ಮುಗ್ಗಟ್ಟುಗಳು ಬಂದ್ ಆಗಿರುವ ಪರಿಣಾಮ ಅನಾವಶ್ಯಕವಾಗಿ ರಸ್ತೆಗೆ ಬರುವವರ ಸಂಖ್ಯೆಯೂ ಕ್ಷೀಣಿಸಿತ್ತು. ಬೆಳಗ್ಗೆ ಕೆಲವರು ರಸ್ತೆಗೆ ಬಂದರಾದರೂ, ಅಲ್ಲಲ್ಲಿ ಕೋವಿಡ್ ಚೆಕ್‍ಪೋಸ್ಟ್ ನಿರ್ಮಾಣ ಮಾಡಿ ದಂಡ ಹಾಕುತ್ತಿರುವುದನ್ನು ಕಂಡು ಮನೆ ಸೇರಿಕೊಂಡಿದ್ದಾರೆ.
ಆರೋಗ್ಯ ಇಲಾಖೆ ಸಿಬ್ಬಂಧಿಗಳು ಹೆಚ್ಚಿನ ಶ್ರಮ ವಹಿಸಿ ಸೇವೆ
ಸಲ್ಲಿಸುತ್ತಿರುವುದು ಸಧ್ಯಕ್ಕೆ ಶ್ಲಾಘನೀಯ ಕಾರ್ಯವಾಗಿದೆ.
ಆಸ್ಪತ್ರೆಯ ಒಳಗಡೆ ಸೊಂಕಿತರಿಗೆ ಆರೋಗ್ಯ ಇಲಾಖೆಯವರು ಆರೈಕೆ ಮಾಡುತ್ತಿದ್ದರೆ, ಹೊರಗಡೆ ಜನರನ್ನು ನಿಯಂತ್ರಿಸುವಲ್ಲಿ ಪೋಲಿಸ್ ಇಲಾಖೆ ಕಾರ್ಯವೂ ಪ್ರಶಂಸನೀಯವಾಗಿದೆ. ಇವರಿಗೆ ಪುರಸಭೆ ಅಧಿಕಾರಿ, ಆಡಳಿತ ಮಂಡಳಿ, ಸಿಬ್ಬಂಧಿಗಳು ಹಾಗೂ ಇತ್ತೀಚೆಗೆ ಶಿಕ್ಷಕರೂ ಸಾಥ್ ನೀಡುತ್ತಿರುವ ಪರಿಣಾಮ ಪಟ್ಟಣದಲ್ಲಿ ಅನಗತ್ಯ ಓಡಾಟಕ್ಕೆ ಭಾಗಶಃ ಕಡಿವಾಣ ಬಿದ್ದಂತಾಗಿದೆ.
ಪ್ರತಿನಿತ್ಯ ನೂರಾರು ಪ್ರಕರಣಗಳು ಬೆಳಕಿಗೆ
ಬರುತ್ತಿದ್ದು, ನಿಯಂತ್ರಣಕ್ಕೆ ಸಂಪೂರ್ಣ ಲಾಕ್‍ಡೌನ್ ಒಂದೇ ಮಾರ್ಗ ಎಂದು ಅರಿತ ಜಿಲ್ಲಾಡಳಿತ ಈ ಕ್ರಮಕ್ಕೆ ಮುಂದಾದ ಪರಿಣಾಮ,ತಾಲೂಕಾಡಳಿತವೂ ಇದನ್ನು ಗಂಭೀರವಾಗಿ ಪರಿಗಣಿಸಿ ಆಯಕಟ್ಟಿನ ಸ್ಥಳಗಳಲ್ಲಿ ಅಧಿಕಾರಿಗಳನ್ನು ನೇಮಕ ಮಾಡಿ ಜನರ ಓಡಾಟಕ್ಕೆ ಬ್ರೇಕ್ ಹಾಕುವಲ್ಲಿ ಸಫಲವಾಗಿದೆ ಎನ್ನಬಹುದಾಗಿದೆ.
ಸದಾ ಜನನಿಭೀಡವಾಗಿರುವ ಬಸ್ಟಾಂಡ್, ಗಡಿಯಾರ ಚೌಕ್,
ಬಸವಸಾಗರ ವೃತ್ತ, ಹಳೆಯ ಬಸ್ಟಾಂಡ್, ಅಂಚೆ ಕಚೇರಿ ವೃತ್ತ ಸೇರಿ ಜನರು ಸೇರುವ ಸ್ಥಳಗಳೀಗ ಲಾಕ್‍ಡೌನ್ ಪರಿಣಾಮ ಬಿಕೋ ಎನ್ನುತ್ತಿವೆ. ಈ ಕ್ರಮದಿಂದಾದರೂ ತಾಲೂಕು ಹಾಗೂ ಜಿಲ್ಲೆಯಲ್ಲಿ ಕೋವಿಡ್ ನಿಯಂತ್ರಣಕ್ಕೆ ಬಂದು ಜನಸಾಮಾನ್ಯರ ಜೀವನ ಮೊದಲಿನಂತೆ ಸಾಮಾನ್ಯ ಸ್ಥಿತಿಗೆ ಮರಳಬೇಕೆನ್ನುವುದೇ ಎಲ್ಲರ ಆಶಯವಾಗಿದೆ.

