ಕುಸಿದ ಈರುಳ್ಳಿ ಬೆಲೆಗೆ ಕಂಗಾಲಾದ ರೈತರು : ನೆರವಿಗೆ ಬರುವುದೇ ಸರಕಾರ..?
ವರದಿ : ಖಾಜಾಹುಸೇನ್
ಲಿಂಗಸುಗೂರು : ತರಕಾರಿ ಬೆಲೆಯೇನೋ ದಿನಕ್ಕಿಷ್ಟು ಹೆಚ್ಚಾಗುತ್ತಲೇ ಇದೆ. ಆದರೆ, ಮೂಲ ಬೆಳೆ ಬೆಳೆದ ರೈತರಿಗೆ ಮಾತ್ರ ವೈಜ್ಞಾನಿಕ ಬೆಲೆ ದೊರೆಯದೇ ಇರುವ ಪರಿಣಾಮ ಸಗಟಾಗಿ ಖರೀದಿಸುವ ಬೆಲೆ ಪಾತಾಳಕ್ಕೆ ಕುಸಿಯುತ್ತಿದೆ ಎನ್ನುವುದಕ್ಕೆ ಸ್ಥಳೀಯ ಎಪಿಎಂಸಿ ಪ್ರಾಂಗಣದಲ್ಲಿ ನಡೆಯುವ ತರಕಾರಿ ಸಗಟು ವ್ಯಾಪಾರ ಮಾರುಕಟ್ಟೆಯೇ ಸಾಕ್ಷಿಯಾಗಿದೆ.
ಸಗಟು ತರಕಾರಿ ಮಾರುಕಟ್ಟೆಯಲ್ಲಿ 44-46 ಕೆ.ಜಿ. ತೂಕದ ಈರುಳ್ಳಿ ಚೀಲ ಕೇವಲ 130-150 ರೂಪಾಯಿಗಳಿಗೆ ಮಾರಾಟವಾಗುತ್ತಿದೆ. ಎಕರೆಗೆ ಸಾವಿರಾರು ರೂಪಾತಿ ಸುರಿದ ರೈತರು, ರಾಶಿ ಮಾಡಿ ಹೊಲದಿಂದ ವಾಹನದಲ್ಲಿ ಚೀಲಗಳನ್ನು ಎತ್ತಾಕೊಕೊಂಡು ಮಾರುಕಟ್ಟೆಗೆ ಬಂದು ವ್ಯಾಪಾರ ಮಾಡಿದರೆ ಹಾಕಿದ ದುಡ್ಡೂ ಬಾರದೇ ಇರುವ ಪರಿಣಾಮ ಕಂಗಾಲಾಗುತ್ತಿದ್ದಾರೆ. ಕೊರೊನಾ ಸಂಕಷ್ಟದ ಕಾಲದಲ್ಲಿ ಬೆಳೆದ ಬೆಳೆಯಿಂದ ನೆಮ್ಮದಿಯ ಬದುಕು ಸಾಗಿಸೋಣ ಎನ್ನುವ ಹಾಗೂ ಇಲ್ಲದೇ ರೈತರು ಸಂಘರ್ಷದ ಬದುಕು ದೂಡುತ್ತಿದ್ದಾರೆ.
ತಿಂಗಳು-ವರ್ಷಗಟ್ಟಲೇ ಜಮೀನಿನಲ್ಲಿ ಹಗಲಿರುಳೂ ಶ್ರಮಿಸಿದಾಗ ಬರುವ ಬೆಳೆಯು ಕೈಗೆಟುಕುವ ದರದಲ್ಲಿ ಮಾರಾಟವಾಗದೇ ನೆಲಕಚ್ಚಿದರೆ ಹೇಗೆ ತಾನೇ ಬಡ ರೈತರು ಸುಧಾರಿಸಿಕೊಳ್ಳಲು ಸಾಧ್ಯವಾದೀತು. ಒನ್ ಪಾಯಿಂಟ್ ಪ್ರೋಗ್ರಾಂ ಎನ್ನುವಂತೆ ಸರಕಾರ ಕೇವಲ ಕೊರೊನಾ ಸೊಂಕು, ಲಾಕ್‍ಡೌನ್, ಜನತಾ ಕಫ್ರ್ಯೂ ಎನ್ನುತ್ತಲೇ ಇದೆ. ಆದರೆ, ಬಡ ರೈತರು ಮಾತ್ರ ತಾವು ಬೆಳೆದ ಬೆಳೆಗೆ ಸರಿಯಾದ ಬೆಲೆ ಸಿಗದೇ ಇರುವ ಪರಿಣಾಮ ಚಿಲ್ಲರೇ ಕಾಸಿನಲ್ಲೇ ಒಲ್ಲದ ಮನಸ್ಸಿನಿಂದ ಮಾರುಕಟ್ಟೆಗೆ ತಂದ ಬೆಳೆಯನ್ನು ಮಾರಾಟ ಮಾಡುವ ದೃಶ್ಯಗಳು ಸಾಮಾನ್ಯವಾಗಿವೆ.
ರೈತರ ಸಂಕಷ್ಟಕ್ಕೆ ಸರಕಾರ ನೆರವಾಗಬೇಕು. ನೆರೆ ಹೊರೆಯ ರಾಜ್ಯಗಳಲ್ಲಿ ಅಲ್ಲಿನ ಸರಕಾರಗಳು ಬಡವರ, ರೈತರ ಸಹಾಯಕ್ಕೆ ಮುಂದೆ ಬಂದಂತೆ ನಮ್ಮ ರಾಜ್ಯದಲ್ಲೂ ಜನಪರ ಅಭಿವೃದ್ಧಿಯ ಕಾಳಜಿ ಇರುವ ಯಡಿಯೂರಪ್ಪನವರ ಸರಕಾರ ಬಡ ರೈತಾಪಿ ವರ್ಗದ ಸಹಾಯಕ್ಕೆ ಮುಂದೆ ಬಂದು ಸಂಕಷ್ಟದ ಕಾಲದಲ್ಲಿ ಜೀವನ ನಡೆಸಲು ಆರ್ಥಿಕ ಸಹಾಯ ಮಾಡಬೇಕೆನ್ನುವ ಒತ್ತಾಯಗಳು ಕೇಳಿ ಬರುತ್ತಿವೆ.
‘ರೈತರು ಬೆಳೆದ ಬೆಳೆಗೆ ಲಾಭ ಒತ್ತಟ್ಟಿಗಿರಲಿ, ಹಾಕಿದ ಬಂಡವಾಳವೂ ಬಾರದಂಥಹ ಪರಿಸ್ಥಿತಿ ಬಂದಿದೆ. ತರಕಾರಿ ಬೆಳೆ ಬೆಳೆಯುವ ರೈತರಿಗೆ ಲಾಭವಿಲ್ಲ. ರೈತರಿಂದ ಕಡಿಮೆ ಬೆಲೆಗೆ ಖರೀದಿಸಿ ಹೆಚ್ಚಿನ ಬೆಲೆಗೆ ವ್ಯಾಪಾರಿಗಳು ಮಾರಾಟ ಮಾಡಿಕೊಂಡು ಲಾಭ ಮಾಡಿಕೊಳ್ಳುತ್ತಿದ್ದಾರೆ. ಕೂಡಲೇ ಸರಕಾರ ಬಡ ರೈತರ ಸಮಸ್ಯೆಗಳತ್ತ ಗಮನ ಹರಿಸಿ, ರೈತರಿಗೆ ಆರ್ಥಿಕ ಪ್ಯಾಕೇಜ್ ಘೋಷಣೆ ಮಾಡಬೇಕು. ಬಡವರು ನೆಮ್ಮದಿಯಾಗಿ ಎರಡೊತ್ತು ಊಟ ಮಾಡಲು ಸಹಾಯ ಮಾಡಬೇಕು.’ – ಮಹ್ಮದ್ ಹಾಜಿಬಾಬಾ ಕರಡಕಲ್, ರೈತ ಮುಖಂಡ.

