ರಾಯಚೂರು

ಲಿಂಗಸುಗೂರು : ಪೌರಕಾರ್ಮಿಕರಿಗೆ ಸುರಕ್ಷಾ ಕಿಟ್‍ಗಳ ವಿತರಣೆ

ಲಿಂಗಸುಗೂರು : ಸ್ಥಳೀಯ ಪೌರ ಕಾರ್ಮಿಕರಿಗೆ ಪುರಸಭೆ ವತಿಯಿಂದ ಸುರಕ್ಷಾ ಕಿಟ್‍ಗಳನ್ನು ವಿತರಣೆ ಮಾಡಲಾಯಿತು.
ಮುಖ್ಯಾಧಿಕಾರಿ ವಿಜಯಲಕ್ಷ್ಮಿ ನೇತೃತ್ವದಲ್ಲಿ ಪುರಸಭೆಯ ನೈರ್ಮಲ್ಯ ವಿಭಾಗದಲ್ಲಿ ಕಸ ಗುಡಿಸುವ, ಚರಂಡಿ ತೆಗೆಯವ, ಡ್ರೈವರ್ ಸೇರಿದಂತೆ 19 ಜನ ಮಹಿಳೆಯರು, 36 ಜನ ಪುರುಷರು ಒಟ್ಟು 55 ಜನ ಪೌರಕಾರ್ಮಿಕರಿಗೆ ತಲಾ ಒಂದು ಜೊತೆ ಸಮವಸ್ತ್ರ, ಮಾಸ್ಕ್, ಗಮ್‍ಬೂಟ್, ಸ್ಯಾನಿಟೈಜರ್, ಹ್ಯಾಂಡ್‍ಗ್ಲೋಸ್, ಸಾಬೂನು, ಹ್ಯಾಂಡ್‍ವಾಶ್, ಪಿಪಿ ಕಿಟ್ ಸೇರಿ ಸುರಕ್ಷತೆಯ ಸಾಮಗ್ರಿಗಳ ಕಿಟ್‍ಗಳನ್ನು ವಿತರಣೆ ಮಾಡಲಾಯಿತು.


ದಿನಬೆಳಗಾದರೆ ಪುರಸಭೆಯ ಎಲ್ಲಾ 23 ವಾರ್ಡ್‍ಗಳ ಪ್ರಮುಖ ರಸ್ತೆ ಹಾಗೂ ಬೀದಿಗಳಲ್ಲಿ ಕಸ ಗುಡಿಸುವುದು, ಚರಂಡಿ ಸ್ವಚ್ಛಗೊಳಿಸುವುದು ಸೇರಿ ಪಟ್ಟಣದ ಸ್ವಚ್ಛತೆಯಲ್ಲಿ ನಿರತರಾಗಿರುವ ಪೌರಕಾರ್ಮಿಕರ ಆರೋಗ್ಯ ಕಾಪಾಡುವುದು ನಮ್ಮ ಕರ್ತವ್ಯವಾಗಿದೆ. ಪೌರಕಾರ್ಮಿಕರು ಆರೋಗ್ಯದಿಂದ ಇದ್ದರೆ ಪಟ್ಟಣವೂ ಸ್ವಚ್ಛವಾಗಿರುತ್ತದೆ. ಈ ನಿಟ್ಟಿನಲ್ಲಿ ಸುಮಾರು ಒಂದು ಲಕ್ಷ ರೂಪಾಯಿ ಮೌಲ್ಯದ ವಸ್ತುಗಳನ್ನು ಕಾರ್ಮಿಕರಿಗೆ ವಿತರಣೆ ಮಾಡಲಾಗಿದೆ ಎಂದು ಮುಖ್ಯಾಧಿಕಾರಿ ವಿಜಯಲಕ್ಷ್ಮಿ ಹೇಳಿದರು.


ಸಧ್ಯಕ್ಕೆ ಪುರಸಭೆಯಲ್ಲಿ 3 ಅಟೋ, 3 ಟ್ರಾಕ್ಟರ್, ಒಂದು ಜೆಸಿಬಿ ಯಂತ್ರ ಕಸ ವಿಲೇವಾರಿಗೆಂದು ಇವೆ. ನಾಲ್ಕು ಅಟೋಗಳು ದುರಸ್ತಿಯಲ್ಲಿವೆ. ವಾಹನಗಳ ನಿರ್ವಹಣೆಗೆಂದು 11 ಲಕ್ಷ ರೂಪಾಯಿ ಅನುದಾನವಿದೆ. ಶೀಘ್ರ ಟೆಂಡರ್ ಮೂಲಕ ದುರಸ್ತಿಗೆ ಕ್ರಮ ಕೈಗೊಳ್ಳಲಾಗುವುದು. ತರಕಾರಿ ವ್ಯಾಪಾರಕ್ಕೆಂದು ಪಟ್ಟಣದ ಸರಕಾರಿ ಜ್ಯೂನಿಯರ್ ಕಾಲೇಜು, ಹಳೆಯ ತರಕಾರಿ ಮಾರುಕಟ್ಟೆ, ಬೆಂಗಳೂರು ಬೈಪಾಸ್ ರಸ್ತೆಯಲ್ಲಿರುವ ಉಮಾಮಹೇಶ್ವರಿ ಕಾಲೇಜು ಮೈದಾನ ಹಾಗೂ ಗುಲಬರ್ಗಾ ರಸ್ತೆಯಲ್ಲಿರುವ ವಿಶ್ವೇಶ್ವರಯ್ಯ ಶಾಲೆ ಆವರಣ ಸೇರಿ ನಾಲ್ಕು ಕಡೆಗಳಲ್ಲಿ ಮಾರುಕಟ್ಟೆಯ ವ್ಯವಸ್ಥೆ ಮಾಡಲಾಗಿದೆ. ಬೆಳಗ್ಗೆ 6 ಗಂಟೆಯಿಂದ 10 ಗಂಟೆವರೆಗೆ ವ್ಯಾಪಾರಕ್ಕೆ ಅವಕಾಶವಿದೆ. ನಾಳೆ(ಸೋಮವಾರ)ಯಿಂದ ಆಯಾ ಪ್ರದೇಶದ ಜನರು ನಿಗದಿತ ಸ್ಥಳಗಳಲ್ಲಿ ತರಕಾರಿ ಕೊಳ್ಳಬೇಕು. ತಳ್ಳುಬಂಡಿ ವ್ಯಾಪಾರಕ್ಕೆ ಬೆಳಗ್ಗೆ 6 ಗಂಟೆಯಿಂದ ಸಂಜೆ 6 ಗಂಟೆವರೆಗೆ ಅವಕಾಶವಿದ್ದು ಸಾರ್ವಜನಿಕರು ಸಹಕಾರ ನೀಡಬೇಕೆಂದು ಮುಖ್ಯಾಧಿಕಾರಿಗಳು ಇದೇ ಸಂದರ್ಭದಲ್ಲಿ ಮನವಿ ಮಾಡಿದರು.


ನೈರ್ಮಲ್ಯ ಅಧಿಕಾರಿ ಶಾನವಾಜ್, ಸಿಬ್ಬಂಧಿಗಳಾದ ರಾಘವೇಂದ್ರ, ಕುಬೇರಪ್ಪ, ಮಮ್ಮಾಯಿ ಸೇರಿ ಇತರರು ಇದ್ದರು.

Leave a Reply

Your email address will not be published. Required fields are marked *

error: Content is protected !!