ಕೊರೊನಾ ಗೆದ್ದು ಫೀಲ್ಡಿಗಳಿದ ಪಿಎಸ್‍ಐ ಡಂಬಳ್..!
ವರದಿ : ಖಾಜಾಹುಸೇನ್
ಲಿಂಗಸುಗೂರು : ಮಹಾಮಾರಿ ಕೊರೊನಾ ಸೊಂಕು ದೃಢಪಟ್ಟಾಗ್ಯೂ ದೃತಿಗೆಡದೇ ಬೇಕಾದ ಚಿಕಿತ್ಸೆಯನ್ನು ಪಡೆದು, ಮೇಲಧಿಕಾರಿಗಳು ವಿಶ್ರಾಂತಿಗೆ ಸೂಚಿಸಿದ್ದರೂ ಕರ್ತವ್ಯ ಪ್ರಜ್ಞೆ ಹಾಗೂ ಸಾರ್ವಜನಿಕರ ಆರೋಗ್ಯ ಹಿತದೃಷ್ಠಿಯಿಂದ ಫೀಲ್ಡಿಗಿಳಿದು ಕೆಲಸಕ್ಕೆ ಹಾಜರಾಗುವ ಮೂಲಕ ಸ್ಥಳೀಯ ಪಿಎಸ್‍ಐ ಪ್ರಕಾಶರೆಡ್ಡಿ ಡಂಬಳ್ ತಮ್ಮ ಕರ್ತವ್ಯಪ್ರಜ್ಞೆ ಮೆರೆದಿದ್ದಾರೆ.
ಸೋಂಕು ಇರುವವರು ಅಕ್ಕ ಪಕ್ಕ ಇದ್ದರೆ ಸಾಕು ಅವರಿಂದ ದೂರ ಓಡುವ ಮತ್ತು ಅವರನ್ನು ಹೀನಾಯವಾಗಿ ಕಾಣುವಂಥಹ ವ್ಯವಸ್ಥೆಯ ಮಧ್ಯೆ, ಖುದ್ದು ಸೊಂಕಿಗೊಳಪಟ್ಟು, ಅದರ ವಿರುದ್ಧ ಜಯಿಸಿ ಯಶಸ್ವಿಯಾಗಿ ಬಂದು ಸಾರ್ವಜನಿಕ ಸೇವೆಗೆ ಹಾಜರಾಗಿರುವ ಪಿಎಸ್‍ಐ ಕಾರ್ಯ ಪ್ರಶಂಸನೀಯವಾಗಿದೆ.
ಮಹಾಮಾರಿಯ ಬಗ್ಗೆ ಭಯ ಬೇಡ, ಎಚ್ಚರಿಕೆಯಿಂದ ಇದ್ದರೆ ಸಾಕು ಸೊಂಕಿನ ಆಕ್ರಮಣದಿಂದ ನಾವು ಯಶಸ್ವಿಯಾಗಿ ಜಯಿಸಬಹುದು. ಯುವಕರೇ ಹೆಚ್ಚಾಗಿ ನಿರ್ಲಕ್ಷ್ಯ ತೋರುತ್ತಿರುವ ಪರಿಣಾಮ ಸಮಾಜದಲ್ಲಿ ಸೊಂಕು ವ್ಯಾಪಕವಾಗಿ ಪಸರಿಸಲು ಕಾರಣವಾಗುತ್ತಿದೆ ಎನ್ನುವ ಪಿಎಸ್‍ಐ ಸರಕಾರ ಆದೇಶದಂತೆ ಸೋಮವಾರದಿಂದ ಯಾರೂ ಅಗತ್ಯ ಕೆಲಸದ ಹೊರತಾಗಿ ಸುಖಾಸುಮ್ಮನೆ ಹೊರಗಡೆ ಓಡಾಡುವುದು ಕಂಡು ಬಂದರೆ ಕಠಿಣ ಕ್ರಮ ಕೈಗೊಳ್ಳುವ ಎಚ್ಚರಿಕೆಯನ್ನೂ ನೀಡಿದ್ದಾರೆ.
ಭಾನುವಾರ ಬೆಳ್ಳಂಬೆಳಿಗ್ಗೆ ನೈಟ್ ಡ್ರೆಸ್ ಮೇಲೆಯೇ ಬೈಕ್ ಸವಾರರ ಬೆನ್ನತ್ತಿದ ಪಿಎಸ್‍ಐ ಹಲವರಿಗೆ ಹಂಡ ಹಾಕಿದರು. ಕೆಲವರಿಗೆ ಬೆತ್ತದ ರುಚಿಯನ್ನೂ ತೋರಿಸಿದರು. ಕಟ್ಟುನಿಟ್ಟಾಗಿ ಸರಕಾರದ ಆದೇಶ ಪಾಲನೆ ಮಾಡದ ಹೊರತು ಸೊಂಕು ಹೆಚ್ಚಾಗುವುದನ್ನು ತಡೆಯಲು ಅನ್ಯ ಮಾರ್ಗವಿಲ್ಲ ಎನ್ನುವ ಈ ಅಧಿಕಾರಿ ಇಲಾಖೆಯಲ್ಲಿ ಇತರರಿಗೂ ಮಾದರಿಯಾಗಿದ್ದಾರೆ.

