ರಾಯಚೂರು

ಲಾಕ್‍ಡೌನ್ ವಿಶೇಷ ಪ್ಯಾಕೇಜ್ ಘೋಷಣೆಗೆ ಆಲ್ಕೋಡ್ ಒತ್ತಾಯ

ಲಿಂಗಸುಗೂರು : ಮಹಾಮಾರಿ ಕೊರೊನಾ ಸಂಕ್ರಮಿತ ಕಾಲದಲ್ಲಿ ಸರಕಾರ ಲಾಕ್‍ಡೌನ್ ಮಾಡಿರುವುದು ಸರಿಯಷ್ಟೆ. ಆದರೆ, ಬಡವರ, ಮಧ್ಯಮ ವರ್ಗದ ಜೀವನ ದುಡಿಮೆ ಇಲ್ಲದೇ ನಡೆಸುವುದು ಕಷ್ಟಕರವಾಗಿದೆ. ತೀವ್ರ ಸಂಕಷ್ಟದಲ್ಲಿ ಬದುಕುತ್ತಿರುವ ಬಡ-ಮಧ್ಯಮ ವರ್ಗಕ್ಕೆ ಸರಕಾರ ಕೂಡಲೇ ವಿಶೇಷ ಪ್ಯಾಕೇಜ್‍ಅನ್ನು ಘೋಷಣೆ ಮಾಡಬೇಕು ಎಂದು ಮಾಜಿ ಸಚಿವ ಹಾಗೂ ಕೆಪಿಸಿಸಿ ವಕ್ತಾರ ಹನುಮಂತಪ್ಪ ಆಲ್ಕೋಡ್ ಒತ್ತಾಯಿಸಿದ್ದಾರೆ.


ಈ ಬಗ್ಗೆ ಪ್ರಕಟಣೆ ನೀಡಿರುವ ಅವರು, ರಾಜ್ಯದಲ್ಲಿ ಕೋವಿಡ್-19ರ ಎರಡನೇ ಅಲೆ ಆರಂಭವಾಗಿದ್ದು, ರಾಯಚೂರು ಜಿಲ್ಲೆಯಲ್ಲಿಯೂ ರೋಗಿಗಳ ಸಂಖ್ಯೆ ಉಲ್ಬಣಿಸುತ್ತಿದೆ. ಕೂಡಲೇ ಸರಕಾರ ಜಿಲ್ಲೆಯ ಎಲ್ಲಾ ಆಸ್ಪತ್ರೆಗಳಿಗೆ ಆಕ್ಸಿಜನ್, ಬೆಡ್‍ಗಳು ಹಾಗೂ ರೆಮ್ಡಿಸಿವರ್ ಔಷಧಿಯ ವ್ಯವಸ್ಥೆ ಮಾಡಬೇಕು. ಸತತ ಲಾಕ್‍ಡೌನ್‍ನಿಂದ ಕೂಲಿ ಕಾರ್ಮಿಕರು, ರೈತರು, ಕುಶಲಕರ್ಮಿಗಳ, ಕ್ಷೌರಿಕರು, ಕಟ್ಟಡ ಕಾರ್ಮಿಕರು, ಟೈಲರ್, ಅಟೋ, ಟ್ಯಾಕ್ಸಿ ಚಾಲಕರು, ಬೀದಿ ಬದಿ ವ್ಯಾಪಾರಿಗಳು, ಮಡಿವಾಳರು, ಅಂಬಿಗರು, ಅಲೆಮಾರಿ ಸಮುದಾಯದವರು, ದಲಿತರು, ಹಿಂದುಳಿದವರು, ಅಲ್ಪಸಂಖ್ಯಾತ ಸಮುದಾಯದವರು ತಮ್ಮ ವೃತ್ತಿಯನ್ನೇ ನೆಚ್ಚಿಕೊಂಡು ಬದುಕು ಸಾಗಿಸುವವರಿಗೆ ಜೀವನ ನಡೆಸುವುದು ಕಷ್ಟಕರವಾಗಿದೆ.


ಕೂಡಲೇ ಸರಕಾರ ಪ್ರತಿಯೊಂದು ಕುಟುಂಬದ ವ್ಯಕ್ತಿಗೆ 10 ಕೆಜಿ ಅಕ್ಕಿ, ರೇಷನ್ ಕಿಟ್ ಹಾಗೂ 10 ಸಾವಿರ ರೂಪಾಯಿ ಆರ್ಥಿಕ ಸಹಾಯ ಮಾಡಬೇಕು. ಕೋವಿಡ್-19 ಬಂದ ರೋಗಿಗೆ ಉಚಿತವಾಗಿ ಚಿಕಿತ್ಸೆ ಕೊಡಬೇಕು. ಸರಕಾರಿ ಆಸ್ಪತ್ರೆಗಳಲ್ಲಿ ವ್ಯಾಕ್ಸಿನ್ ಮತ್ತು ಆಕ್ಸಿಜನ್, ಬೆಡ್, ರೆಮ್ಡಿಸಿವರ್ ಔಷಧಿಯ ವ್ಯವಸ್ಥೆ ಮಾಡಬೇಕು. ವಿದ್ಯುತ್ ಬಿಲ್, ಫೈನಾನ್ಸ್ ಹಾಗೂ ಬ್ಯಾಂಕ್‍ಗಳಲ್ಲಿ ಬಡ್ಡಿ ವಿನಾಯಿತಿ ಮಾಡಬೇಕು ಎಂದು ಆಲ್ಕೋಡ್ ಒತ್ತಾಯಿಸಿದರು.

Leave a Reply

Your email address will not be published. Required fields are marked *

error: Content is protected !!