ಹಟ್ಟಿ ಚಿನ್ನದ ಗಣಿ ಕಾರ್ಮಿಕರಿಗಾಗಿ ಸುವರ್ಣ ಆರೋಗ್ಯ ಯೋಜನೆ ಜಾರಿ
ಲಿಂಗಸುಗೂರು : ಹಟ್ಟಿ ಚಿನ್ನದಗಣಿ ಕಾರ್ಮಿಕರ ಸ್ವಸ್ಥ ಆರೋಗ್ಯಕ್ಕಾಗಿ ಸುವರ್ಣ ಆರೋಗ್ಯ ಯೋಜನೆಯನ್ನು ಜಾರಿಗೆ ತರಲಾಗಿದೆ. ಇದರ ಸದುಪಯೋಗವನ್ನು ಕಾರ್ಮಿಕರು ಪಡೆದುಕೊಳ್ಳಬೇಕು ಎಂದು ಚಿನ್ನದ ಗಣಿಯ ಅಧ್ಯಕ್ಷ ಮಾನಪ್ಪ ವಜ್ಜಲ್ ಕರೆ ನೀಡಿದರು.

ಹಟ್ಟಿ ಚಿನ್ನದ ಗಣಿಯಲ್ಲಿ ಗಣರಾಜ್ಯೋತ್ಸವ ದಿನಾಚರಣೆಯಂದು ಆಯೋಜಿಸಿದ್ದ ಸಮಾರಂಭದಲ್ಲಿ ಧ್ವಜಾರೋಹಣ ನೆರವೇರಿಸಿದ ಬಳಿಕ ನೂತನ ಆರೋಗ್ಯ ಯೋಜನೆಗೆ ಚಾಲನೆ ನೀಡಿದ ವಜ್ಜಲ್, ಕಾರ್ಮಿಕರ ಹಿತ ರಕ್ಷಣೆ ಕಾಯ್ದುಕೊಳ್ಳುವುದು ಕಂಪನಿಯ ಕರ್ತವ್ಯವಾಗಿದೆ. ಸರಕಾರ ಚಿನ್ನದ ಗಣಿಗೆ ಆಧುನಿಕತೆಯ ಸ್ಪರ್ಶ ನೀಡುವ ಜೊತೆಗೆ ಕಾರ್ಮಿಕರ ಸಮಸ್ಯೆಗಳನ್ನು ಪರಿಹರಿಸುವ ನಿಟ್ಟಿನತ್ತ ಮುಂದಾಗುತ್ತಿದೆ. ಬರುವ ದಿನಗಳಲ್ಲಿ ಗಣಿ ಪ್ರದೇಶದ ಸುತ್ತಮುತ್ತಲಿನ ಗ್ರಾಮಗಳ ಅಭಿವೃದ್ಧಿಗೆ ಆದ್ಯತೆ ನೀಡಲಾಗುವುದು ಎಂದು ಮಾನಪ್ಪ ವಜ್ಜಲ್ ಹೇಳಿದರು.
ಹಟ್ಟಿ ಚಿನ್ನದ ಗಣಿ ಕಂಪನಿ ನಿಯಮಿತ ಹಾಗೂ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆ, ಸುವರ್ಣ ಆರೋಗ್ಯ ಸುರಕ್ಷಾ ಟ್ರಸ್ಟ್ ವತಿಯಿಂದ ನೂತನ ಹಟ್ಟಿ ಸುವರ್ಣ ಆರೋಗ್ಯ ಯೋಜನೆಯನ್ನು ಗಣರಾಜ್ಯೋತ್ಸವದ ಕೊಡುಗೆಯಾಗಿ ಕಾರ್ಮಿಕರಿಗಾಗಿ ಜಾರಿಗೆ ತಂದಿರುವ ಬಗ್ಗೆ ಕಾರ್ಮಿಕ ವಲಯದಲ್ಲಿ ಹರ್ಷ ವ್ಯಕ್ತವಾಗಿದೆ.
ಚಿನ್ನದ ಗಣಿಯ ಹಿರಿಯ ಅಧಿಕಾರಿಗಳು, ಕಾರ್ಮಿಕ ಸಂಘಟನೆಯ ಮುಖಂಡರುಗಳು, ಜನಪ್ರತಿನಿಧಿಗಳು ಸಿಬ್ಬಂದಿವರ್ಗ, ಕಾರ್ಮಿಕರು ಈ ಸಂದರ್ಭದಲ್ಲಿ ಹಾಜರಿದ್ದರು.

