ರಾಯಚೂರು

ಸುದ್ದಿ ವಾಹಿನಿ ಮೇಲೆ ದಾಳಿ : ಕ್ರಮಕ್ಕೆ ಆಗ್ರಹ

ಲಿಂಗಸುಗೂರು : ನ್ಯೂಸ್ 14 ಚಾನಲ್ ಮೇಲಿನ ದಾಳಿ ಮಾಡಿದ ದುಷ್ಕರ್ಮಿಗಳನ್ನು ಕೂಡಲೇ ಬಂಧಿಸಿ, ಸುದ್ದಿ ವಾಹಿನಿ ಸ್ಟೂಡಿಯೋಕ್ಕೆ ಮತ್ತು ಪ್ರಧಾನ ಸಂಪಾದಕ ಬಿ.ಆರ್.ಭಾಸ್ಕರ್‍ಪ್ರದಾಸ್‍ರಿಗೆ ಭದ್ರತಾ ಪಡೆಯ ರಕ್ಷಣೆ ನೀಡಬೇಕೆಂದು ಅಂಬೇಡ್ಕರ್ ಸೇನೆಯ ಕಾರ್ಯಕರ್ತರು ಆಗ್ರಹಿಸಿದರು.


ಶಿರಸ್ತೆದಾರರ ಮೂಲಕ ಗೃಹ ಸಚಿವರಿಗೆ ಮನವಿ ಸಲ್ಲಿಸಿದ ಅವರು, ಬಿ.ಆರ್. ಭಾಸ್ಕರ್ ಪ್ರಸಾದ್ ಅವರು ಓರ್ವ ದಲಿತ ನಾಯಕನಾಗಿದ್ದು, ಜೊತೆಗೆ ನ್ಯೂಸ್ 14 ಚಾನಲ್ ಮೂಲಕ ಸಮಾಜ ಘಾತುಕ ಕೋಮುವಾದಿಗಳು, ಜಾತಿವಾದಿಗಳು, ಭಷ್ಟ ರಾಜಕಾರಣಿಗಳ ವಿರುದ್ಧ ಧ್ವನಿ ಎತ್ತಿದ್ದಾರೆ. ಅಲ್ಲದೇ, ಅನ್ಯಾಯಕ್ಕೊಳಗಾದವರು, ನ್ಯಾಯ ನಿರಾಕರಿಸಲ್ಪಟ್ಟವರು ಹಾಗೂ ದೀನ ದಲಿತರ ಪರವಾಗಿ ನಿಂತಿರುತ್ತಾರೆ. ಇದ್ದನ್ನು ಸಹಿಸದ ಕೆಲವು ಸಮಾಜ ಘಾತುಕ ಶಕ್ತಿಗಳು ನ್ಯೂಸ್ ಸ್ಟೂಡಿಯೋದ ಮೇಲೆ ಜನೆವರಿ 13, 2021ರ ರಾತ್ರಿ ದಾಳಿ ಮಾಡಿ ಭಾಸ್ಕರಪ್ರಸಾದರ ಕೊಲೆಗೆ ಯತ್ನಿಸಿದ್ದಾರೆ. ಈ ಬಗ್ಗೆ ದೂರು ನೀಡಿದಾಗ್ಯೂ ಯಾವುದೇ ಕ್ರಮಕ್ಕೆ ಮುಂದಾಗದೇ ಇರುವುದು ಆತಂಕಕ್ಕೆ ಎಡೆ ಮಾಡಿಕೊಟ್ಟಿದೆ.


ಭಾಸ್ಕರ್‍ಪ್ರಸಾದ್ ಅವರು ಕರ್ನಾಟಕ ರಾಜ್ಯ ಮಟ್ಟದ ದಲಿತ ನಾಯಕರಾಗಿದ್ದು ಹಲವು ಜನಪರ ಹೋರಾಟಗಳನ್ನು, ಚಳುವಳಿಗಳನ್ನು ನಡೆಸಿಕೊಂಡು ಬರುತ್ತಿದ್ದಾರೆ. ಇವರ ಜೀವಕ್ಕೇದಾರೂ ಹಾನಿಯಾದಲ್ಲಿ ಅದಕ್ಕೆ ಸರಕಾರದ ನಿರ್ಲಕ್ಷ್ಯವೇ ಕಾರಣವಾಗುತ್ತದೆ. ಈಗಾಗಲೇ ನಾವು ನಮ್ಮ ಕರ್ನಾಟಕದ ಮಹನೀಯರಾದ ಡಾ.ಎಂ.ಎಂ. ಕಲಬುರಗಿ ಮತ್ತು ಗೌರಿ ಲಂಕೇಶರನ್ನ ಕಳೆದುಕೊಂಡಿದ್ದೇವೆ. ಇವರ ಹತ್ಯೆ ಮಾಡಿದವರನ್ನು ಬಂಧಿಸದೇ ಕಾರಣಕ್ಕಾಗಿ ಮತ್ತು ಇವರಿಗೆ ಕಠಿಣ ಶಿಕ್ಷೆ ಕೊಡುವುದೇ ಇರುವ ಕಾರಣಕ್ಕಾಗಿ ಇಂಥಹವರನ್ನು ಸರಕಾರ ಪ್ರೋತ್ಸಾಹಿಸಿದಂತಾಗಿದೆ. ಇನ್ನುಮುಂದೆ ಇಂಥಹ ಅವಘಡಗಳು ಜರುಗದಂತೆ ಸರಕಾರ ಎಚ್ಚೆತ್ತುಕೊಂಡು ದಾಳಿಕೋರರಿಗೆ ಕಠಿಣ ಶಿಕ್ಷೆ ವಿಧಿಸಬೇಕೆಂದು ಒತ್ತಾಯಿಸಿದರು.

ಇಲ್ಲವಾದಲ್ಲಿ ರಾಜ್ಯಾದ್ಯಂತ ಉಗ್ರ ಹೋರಾಟಕ್ಕೆ ಮುಂದಾಗುವುದಾಗಿ ಎಚ್ಚರಿಕೆ ನೀಡಿದ್ದಾರೆ.
ಸಂಘಟನೆ ಅದ್ಯಕ್ಷ ಮಲ್ಲಿಕಾರ್ಜುನ ಕಡೆಚೂರು, ಅಮರೇಶ ಆನೆಹೊಸೂರು, ಗದ್ದೆಪ್ಪ ಚಿತಾಪೂರ, ಅಂಬರೀಶ ಛಲವಾದಿ, ಹುಸೇನಪ್ಪ ಬೆಂಡೋಣಿ, ಸಂತೋಷ, ಹೊನ್ನಪ್ಪ ಪಲಗಲದಿನ್ನಿ, ಅನಿಲ್‍ಕುಮಾರ, ಮಂಜುನಾಥ ಬೆಂಡೋಣಿ, ಅಲ್ಪಸಂಖ್ಯಾತ ಘಟಕದ ಖಯ್ಯುಂ ಸೇರಿ ಇತರರು ಈ ಸಂದರ್ಭದಲ್ಲಿ ಇದ್ದರು.

Leave a Reply

Your email address will not be published. Required fields are marked *

error: Content is protected !!