ರಾಯಚೂರು

ಸೇವೆಗೆ ನಿಯೋಜಿಸಲು ಅತಿಥಿ ಉಪನ್ಯಾಸಕರ ಒತ್ತಾಯ

ಲಿಂಗಸುಗೂರು : ಪದವಿ ಕಾಲೇಜುಗಳು ತಡವಾಗಿ ಆರಂಭವಾಗಿದ್ದರೂ, ಇದುವರೆಗೂ ಅತಿಥಿ ಉಪನ್ಯಾಸಕರನ್ನು ಸೇವೆಗೆ ನಿಯೋಜಿಸಿಲ್ಲ. ಕೂಡಲೇ ಶಿಕ್ಷಣ ಇಲಾಖೆ ಹಲವು ತಿಂಗಳುಗಳಿಂದ ನಿರುದ್ಯೋಗಿಗಳಾಗಿರುವ ಅತಿಥಿ ಉಪನ್ಯಾಸಕರನ್ನು ಸೇವೆಗೆ ನಿಯೋಜನೆ ಮಾಡಿಕೊಳ್ಳಬೇಕೆಂದು ಕರ್ನಾಟಕ ರಾಜ್ಯ ಅತಿಥಿ ಉಪನ್ಯಾಸಕರ ಹೋರಾಟ ಸಮಿತಿ ಪದಾಧಿಕಾರಿಗಳು ಒತ್ತಾಯಿಸಿದರು.


ಶಿರಸ್ತೆದಾರರ ಮೂಲಕ ಉನ್ನತ ಶಿಕ್ಷಣ ಸಚಿವರು ಮತ್ತು ಆಯುಕ್ತರಿಗೆ ಮನವಿ ಸಲ್ಲಿಸಿದ ಅವರು, ನಾಲ್ಕುವರೆ ತಿಂಗಳುಗಳ ಕಾಲ ತಡವಾಗಿ ಕಾಲೇಜುಗಳು ಆರಂಭವಾಗಿವೆ. ಆದಾಗ್ಯೂ ಇದುವರೆಗೂ ಪ್ರತಿಶತ ವಿದ್ಯಾರ್ಥಿಗಳು ಹಾಜರಾಗುತ್ತಿಲ್ಲದ ಹಿನ್ನೆಲೆಯಲ್ಲಿ ಈಗಾಗಲೇ ಕಾಲೇಜುಗಳು ಪ್ರಾರಂಭವಾಗಿವೆ ಎನ್ನುವ ತರ್ಕ ಮತ್ತು ಅತಿಥಿ ಉಪನ್ಯಾಸಕರನ್ನು ಮಾರ್ಚ್ 2021ರ ವರೆಗೆ ಮಾತ್ರ ನೇಮಕ ಮಾಡಿಕೊಳ್ಳತಕ್ಕದ್ದು ಎನ್ನುವ ನಿರ್ದೇಶನಗಳು ಅವೈಜ್ಞಾನಿಕ, ಅಮಾನವೀಯ ಮತ್ತು ಅಸಮರ್ಥನೀಯ.

ಈ ಕ್ರಮದಿಂದ ಸಮಯಾವಕಾಶದ ಅಲಭ್ಯತೆಯ ಒತ್ತಡಕ್ಕೆ ಸಿಲುಕಿ ಪಾಠ ಪ್ರವಚನಗಳು ಸರಿಯಾಗಿ ನಡೆಯದೇ, ಒಂದೆಡೆ ಅತಿಥಿ ಉಪನ್ಯಾಸಕರು ನಿರುದ್ಯೋಗದ ಕೂಪಕ್ಕೆ ತಳ್ಳಲ್ಪಟ್ಟಿವೆ. ಇನ್ನೊಂದೆಡೆ ಲಕ್ಷಾಂತರ ವಿದ್ಯಾರ್ಥಿಗಳ ಭವಿಷ್ಯಕ್ಕೆ ಅದು ಕಂಕಟವಾಗಿ ಪರಿಣಮಿಸಿದೆ.


ಸರಕಾರ ಜನೆವರಿ 19, 2021ರ ಸುತ್ತೋಲೆಯನ್ನು ಹಿಂಪಡೆದು, ಈ ಹಿಂದೆ ತಾವುಗಳು ನೀಡಿದ್ದ ಮಾತಿನಂತೆ 2019-20ನೇ ಶೈಕ್ಷಣಿಕ ವರ್ಷದಲ್ಲಿ ಕಾರ್ಯನಿರ್ವಹಿಸಿದ್ದ ಎಲ್ಲಾ ಅತಿಥಿ ಉಪನ್ಯಾಸಕರನ್ನು 2020-21ನೇ ಸಾಲಿನ ಸೇವೆಗೆ ಕೂಡಲೇ ನೇಮಿಸಿಕೊಳ್ಳಬೇಕು ಎಂದು ಅತಿಥಿ ಉಪನ್ಯಾಸಕರು ಒತ್ತಾಯಿಸಿದರು.


ಸಂಘಟನೆಯ ಪ್ರೊ.ಬಸವರಾಜ ವೈ., ಡಾ.ಮಹಾದೇವಪ್ಪ ನಾಗರಹಾಳ, ಶರಣಪ್ಪ ಉದ್ಬಾಳ, ಡಾ.ಕೆ.ಶಶಿಕಾಂತ, ಸಿದ್ದಪ್ಪ ಭಾವಿಮನಿ, ಅಮರೇಶ ವೆಂಕಟಾಪೂರ, ಡಾ.ಪಂಪಾಪತಿ ನಾಯಕ, ಗಂಗಾಧರ, ಅಮರಪ್ಪ ನಾಯ್ಕ್, ಸತೀಶ, ಯಲಪ್ಪ ಪೂಜಾರಿ, ಅನುಪಮಾ ಪಾಟೀಲ್, ಶಿವಲೀಲಾ ಪಾಟೀಲ್, ಸವಿತಾ, ರಾಧಿಕಾ, ಡಾ.ದಾವಲಸಾಬ, ಪ್ರಹ್ಲಾದ್ ಲಮಾಣಿ ಸೇರಿ ಇತರರು ಈ ಸಂದರ್ಭದಲ್ಲಿ ಇದ್ದರು.

Leave a Reply

Your email address will not be published. Required fields are marked *

error: Content is protected !!