ಪದೇ ಪದೇ ಕೆಣಕಬೇಡಿ : ಪತ್ರಕರ್ತರ ಪ್ರಶ್ನೆಗೆ ಸಚಿವ ಮಾದುಸ್ವಾಮಿ ಸಿಡಿಮಿಡಿ ‘ತಾಲೂಕಿನ ಕೆರೆಗಳ ಬಗ್ಗೆ ಮಾಹಿತಿ ಇಲ್ಲಾ, ಪರಿಶೀಲನೆ ಮಾಡಿ ಹೆಚ್ಚಿನ ಅನುದಾನಕ್ಕೆ ಆಧ್ಯತೆ’
ಲಿಂಗಸುಗೂರು : ಸಣ್ಣ ನೀರಾವರಿ ಯೋಜನೆ ವ್ಯಾಪ್ತಿಗೊಳಪಡುವ ತಾಲೂಕಿನ ಕೆರೆಗಳ ಬಗ್ಗೆ ಮಾಹಿತಿ ಇಲ್ಲಾ. ಅಧಿಕಾರಿಗಳಿಂದ ಪಡೆದು ಅಭಿವೃದ್ಧಿಗೆ ಬೇಕಾದ ಕ್ರಮಗಳ ಜೊತೆಗೆ ಬೇಡಿಕೆ ಅನುಸಾರ ಹೆಚ್ಚಿನ ಅನುದಾನ ನೀಡಲು ಆಧ್ಯತೆ ನೀಡುವುದಾಗಿ ಸಣ್ಣ ನೀರಾವರಿ ಸಚಿವ
ಜೆ.ಸಿ.ಮಾದುಸ್ವಾಮಿ ಹೇಳಿದರು.
ಸ್ಥಳೀಯ ಪ್ರವಾಸಿ ಮಂದಿರದಲ್ಲಿ ಸೋಮವಾರ ನಡೆದ
ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ರಾಜ್ಯದಲ್ಲಿ ಸಣ್ಣ ನೀರಾವರಿ ಇಲಾಖೆ ಅಭಿವೃದ್ಧಿಗೆ ಹೆಚ್ಚಿನ ಅನುದಾನವನ್ನು ನೀಡಲಾಗಿದೆ. ಲಿಂಗಸುಗೂರು ತಾಲೂಕಿನ ಗುಂತಗೋಳ, ಕಡದರಗಡ್ಡಿ, ಅಂಕನಾಳ, ಉಪನಾಳ,ಯಕ್ರನಾಳ, ಜಲದುರ್ಗ ಏತ ನೀರಾವರಿ ಯೋಜನೆಗಳ ಬಗ್ಗೆ ಹೆಚ್ಚಿನ
ಮಾಹಿತಿ ತಿಳಿದುಕೊಂಡಿಲ್ಲಾ ಕ್ಷಮೆ ಇರಲಿ, ಕೂಡಲೇ ಅಧಿಕಾರಿಗಳಿಂದ ಮಾಹಿತಿ ಪಡೆದು ಬೇಕಾದ ಅಗತ್ಯ ಕ್ರಮ ಕೈಗೊಳ್ಳುತ್ತೇನೆಂದು ಹೇಳಿದರು.
ರಾಜಕೀಯ ಲಾಭಿಗಾಗಿ ಮಸ್ಕಿ ಕ್ಷೇತ್ರದಲ್ಲಿ ಉಪಚುನಾವಣೆ ಇರುವ ಪ್ರಯುಕ್ತ ಸರಕಾರ ಹೆಚ್ಚಿನ ಅನುದಾನ ನೀಡುತ್ತಿರುವ ಮತ್ತು ತಾಲೂಕಿನ ಅಭಿವೃದ್ಧಿಯಲ್ಲಿ ತಾರತಮ್ಯ ಮಾಡಲಾಗುತ್ತಿದೆ ಎನ್ನುವ ಬಗ್ಗೆ ಸಚಿವರನ್ನು ಪ್ರಶ್ನಿಸಿದ ಪತ್ರಕರ್ತರ ಮೇಲೆ ಸಿಡಿಮಿಡಿಗೊಂಡು, ನಾನೆಷ್ಟು ಒಳ್ಳೆಯವನೋ ಅಷ್ಟೇ ಒರಟನಾಗಿದ್ದೇನೆ. ಸುಮ್ಮನೇ ಪದೇ ಪದೇ ಕೆಣಕಬೇಡಿ ಎಂದು ಮುನಿಸು ತೋರಿದರು.
ಶಾಸಕರಾದ ಅಮರೇಗೌಡ ಪಾಟೀಲ್ ಬಯ್ಯಾಪೂರ, ಡಿ.ಎಸ್.ಹೂಲಗೇರಿ,ವಿಧಾನ ಪರಿಷತ್ ಸದಸ್ಯ ಬಸವರಾಜ ಪಾಟೀಲ್ ಇಟಗಿ ಸೇರಿ ಇತರರು ಇದ್ದರು.

