ಮಹಾವಿದ್ಯಾಲಯ ಉದ್ಘಾಟನೆ/ಉತ್ತರ ಕರ್ನಾಟಕದ ಶೈಕ್ಷಣಿಕ ಕ್ಷೇತ್ರಕ್ಕೆ ವೀರಶೈವರ ಕೊಡುಗೆ ಅಪಾರ ಶಿಕ್ಷಕರು ಕೃಷಿ ಮಾಡಿ ಮಕ್ಕಳಿಗೆ ಅಭ್ಯಾಸ ಕಲಿಸಲು ಸಚಿವ ಮಾದುಸ್ವಾಮಿ ಸಲಹೆ
ಲಿಂಗಸುಗೂರು : ಕಲಿಕೆ ಎನ್ನುವುದು ನಿರಂತರವಾದದ್ದು, ಶಾಲಾ-ಕಾಲೇಜುಗಳಲ್ಲಿ ಪಾಠ ಮಾಡುವುದಕ್ಕೂ ಮುನ್ನ ಶಿಕ್ಷಕ-ಉಪನ್ಯಾಸಕರು ಸಂಬಂಧಿಸಿದ ವಿಷಯದ ಬಗ್ಗೆ ಅಧ್ಯಯನ ಮಾಡುವ ಮೂಲಕ ಬೇಕಾದ ತಯ್ಯಾರಿ ಮಾಡಿಕೊಂಡು ಬರಬೇಕು. ಕಾಟಾಚಾರಕ್ಕೆ ಹಿಂದೆ ತಮ್ಮ ಗುರುಗಳಿಂದ ಕಲಿತ ನೋಟ್ಸ್‍ಗಳನ್ನೇ ತಂದು ವರ್ಗ
ಕೋಣೆಯಲ್ಲಿ ಹೇಳಬಾರದು. ಉತ್ತಮ ಶಿಕ್ಷಕ ಓದುವ ಜೊತೆಗೆ ಕಲಿಕೆಯಲ್ಲಿ ತೊಡಗುವ ತನ್ಮಯತೆಯನ್ನು
ಮೈಗೂಡಿಸಿಕೊಳ್ಳಬೇಕೆಂದು ಸಣ್ಣ ನೀರಾವರಿ ಸಚಿವ ಜೆ.ಸಿ.ಮದುಸ್ವಾಮಿ ಶಿಕ್ಷಕರಿಗೆ ಸಲಹೆ ನೀಡಿದರು.
ಸ್ಥಳೀಯ ವೀರಶೈವ ವಿದ್ಯಾವರ್ಧಕ ಸಂಘದ ಸಂಚಾಲಿತ ಶ್ರೀಮತಿ ಮಹಾಂತಮ್ಮ ಲಿಂಗನಗೌಡ ಬಯ್ಯಾಪೂರ ಕಲಾ, ವಾಣಿಜ್ಯ ಹಾಗೂ ವಿಜ್ಞಾನ ಮಹಾವಿದ್ಯಾಲಯವನ್ನು ಉದ್ಘಾಟಿಸಿ ಮಾತನಾಡಿದ ಅವರು, ಓದುವುದಕ್ಕಿಂತ ಅದನ್ನು ಅರ್ಥೈಸಿಕೊಂಡು ಮನನ ಮಾಡಿಕೊಳ್ಳುವುದು ಮುಖ್ಯ.ಉತ್ತರ ಕರ್ನಾಟಕ ಶೈಕ್ಷಣಿಕ ಕ್ಷೇತ್ರದಲ್ಲಿ ವೀರಶೈವ ಲಿಂಗಾಯತರ ಕೊಡುಗೆ ಅಪಾರವಾಗಿದೆ. ಆಸ್ತಿ, ಹಣ, ಸಂಪತ್ತು, ಅಧಿಕಾರವೇ ಶಕ್ತಿ ಎನ್ನುವಮಾತುಗಳು ಈಗ ಉಳಿದಿಲ್ಲ. ಕಾಲಮಾನಕ್ಕೆ ತಕ್ಕಂತೆ ಶಿಕ್ಷಣವೇ ಇಂದು
ಶಕ್ತಿಯಾಗಿ ಮಾರ್ಪಟ್ಟಿದೆ. ಇಂಥಹ ಶಕ್ತಿಯನ್ನು ಗುರುಗಳಾದವರು ವಿದ್ಯಾರ್ಥಿಗಳಿಗೆ ಧಾರೆ ಎರೆಯುವ ಮೂಲಕ ಉತ್ತಮ ಭವಿಷ್ಯವನ್ನುರೂಪಿಸಬೇಕೆಂದು ಹೇಳಿದರು.
ನಿಜಾಮರ ಆಳ್ವಿಕೆಯಿಂದ ಹೈದ್ರಾಬಾದ್-ಕರ್ನಾಟಕ ಭಾಗ
ಶೈಕ್ಷಣಿಕವಾಗಿ ಹಿಂದುಳಿದಿದೆ. ಶಿಕ್ಷಣದ ಜೊತೆಗೆ ಸಾಮಾಜಿಕ
ಚಟುವಟಿಕೆಗಳಲ್ಲೂ ವೀರಶೈವ ಸಂಸ್ಥೆಗಳು ಮುಂದೆ ಬರಬೇಕು.ಸಧ್ಯ ನಮ್ಮ ಶಿಕ್ಷಣ ಸಂಸ್ಥೆಯಲ್ಲಿ 3,500 ವಿದ್ಯಾರ್ಥಿಗಳು ವಿದ್ಯಾರ್ಜನೆ ಮಾಡುತ್ತಿದ್ದಾರೆ. ಪರಿಶಿಷ್ಟ ಜಾತಿ ಮತ್ತು ಪಂಡಗ ಹಾಗೂ ಹಿಂದುಳಿದ ವರ್ಗ ಸೇರಿ 1500ಕ್ಕೂ ಹೆಚ್ಚು ವಿದ್ಯಾರ್ಥಿಗಳು ಕಲಿಯುತ್ತಿದ್ದಾರೆ. ಇಲ್ಲಿ ಶೈಕ್ಷಣಿಕವಾಗಿ ಯಾವುದೇ ಜಾತಿ, ಮತ, ಪಂಥಗಳ ತಾರತಮ್ಯವಿಲ್ಲ.
ಸಮಾನ ಶಿಕ್ಷಣಕ್ಕೆ ಆಧ್ಯತೆ ನೀಡಲಾಗುತ್ತಿದೆ. ಅಂತೆಯೇ ವಿದ್ಯಾರ್ಥಿಗಳೂ ಇದರ ಸದುಪಯೋಗವನ್ನು ಪಡೆದುಕೊಳ್ಳುತ್ತಿದ್ದಾರೆ.ಸರಕಾರದಿಂದ ಬರುವ ಶಿಷ್ಯವೇತನ ಸೇರಿ ನಾನಾ ಸವಲತ್ತುಗಳ ಸದ್ವಿನಿಯೋಗ ಮಾಡಿಕೊಳ್ಳಬೇಕೆಂದು ವಿವಿ ಸಂಘದ ಅದ್ಯಕ್ಷರೂ
ಆಗಿರುವ ಶಾಸಕ ಅಮರೇಗೌಡ ಪಾಟೀಲ್ ಬಯ್ಯಾಪೂರ ಮಾತನಾಡಿದರು.ಶಾಸಕ ಡಿ.ಎಸ್.ಮಾತನಾಡುತ್ತಾ, ಶೈಕ್ಷಣಿಕವಾಗಿ ಹೆಚ್ಚಿನ ಗಮನ ಕೊಡುತ್ತಿರುವ ಈ ಶಿಕ್ಷಣ ಸಂಸ್ಥೆಯ ಅಭಿವೃದ್ಧಿಗೆ ಬರುವ ದಿನಗಳಲ್ಲಿ
ತಮ್ಮ ಅನುದಾನವನ್ನು ನೀಡುವುದಾಗಿ ಹೇಳಿದರು.
ವಿಧಾನ ಪರಿಷತ್ ಸದಸ್ಯ ಬಸವರಾಜ ಪಾಟೀಲ್ ಇಟಗಿ ಮಾತನಾಡುತ್ತಾ, ಕೇವಲ ದೊಡ್ಡ ಕಟ್ಟಡ ಕಟ್ಟಿಸಿದರೆ ಸಾಲದು, ಅದಕ್ಕೆ ಪೂರಕವಾಗಿ ಶಿಕ್ಷಣವನ್ನೂ ನೀಡುವ ನಿಟ್ಟಿನತ್ತ ಮುಂದಾಗಬೇಕು. ಕಾಲೇಜಿನಲ್ಲಿ ಕೃಷಿಗೆ
ಸಂಬಂಧಿಸಿದ ವಿಷಯವನ್ನು ಸೇರಿಸಿಕೊಳ್ಳಬೇಕೆಂದು ಹೇಳಿದರು.
ವಿವಿ ಸಂಘದ ಉಪಾದ್ಯಕ್ಷ ಮಲ್ಲೇಶಗೌಡ ಮಟ್ಟೂರು, ಕಾರ್ಯದರ್ಶಿ ಭೂಪನಗೌಡ ಕರಡಕಲ್, ಸಹಕಾರ್ಯದರ್ಶಿ ಶರಣಬಸಪ್ಪ ಗುಡದನಾಳ, ಆಡಳಿತಾಧಿಕಾರಿ ಬಸವಂತರಾಯ ಕುರಿ, ಆಡಳಿತ ಮಂಡಳಿ
ಸದಸ್ಯರಾದ ಶರಣಪ್ಪ ಮೇಟಿ ಈಚನಾಳ, ಡಾ.ಶರಣಗೌಡ ಪಾಟೀಲ್, ಸಿದ್ದನಗೌಡ ಪಾಟೀಲ್ ಯರಡೋಣ, ಭೀಮನಗೌಡ ಪಾಟೀಲ್ ಮಾಕಾಪೂರ,ಮಲ್ಲಯ್ಯಸ್ವಾಮಿ ಹಿರೇಮಠ ಸೇರಿ ಕಾಲೇಜು ಪ್ರಾಚಾರ್ಯರು, ಉಪನ್ಯಾಸಕರು, ಸಿಬ್ಬಂಧಿ ವರ್ಗ ಹಾಗೂ ವಿದ್ಯಾರ್ಥಿಗಳು ಸಮಾರಂಭದಲ್ಲಿ
ಇದ್ದರು.

