ಎಎಸ್‍ಐ ಚಿನ್ನಾರೆಡ್ಡಿಗೆ ಹೃದಯಾಘಾತ : ಬಾರದ ಲೋಕಕ್ಕೆ ಪಯಣ
ಲಿಂಗಸುಗೂರು : ಸ್ಥಳೀಯ ಠಾಣೆಯಲ್ಲಿ ಎ.ಎಸ್.ಐ. ಆಗಿ ಕರ್ತವ್ಯ ನಿರ್ವಹಿಸುತ್ತಿದ್ದ ಕಡಕ್ ಅಧಿಕಾರಿ ಚಿನ್ನಾರೆಡ್ಡಿ ಅವರಿಗೆ ಹೃದಯಾಘಾತವಾದ ಪರಿಣಾಮ ಬಾರದ ಲೋಕಕ್ಕೆ ಪಯಾಣ ಬೆಳೆಸಿದ್ದಾರೆ. ರೋಡಲಬಂಡಾ (ಯುಕೆಪಿ)ದಲ್ಲಿ ನಡೆಯುತ್ತಿರುವ ರೈತರ ಪ್ರತಿಭಟನೆಗೆ ಬಂದೋಬಸ್ತ್ ನೀಡಲು ತೆರಳುತ್ತಿರುವಾಗ ಹೃದಯಾಘಾತಕ್ಕೆ ಒಳಗಾಗಿದ್ದಾರೆ. ಕೂಡಲೇ ಆಸ್ಪತ್ರೆಗೆ ಕರೆದೊಯ್ದರೂ ಚಿಕಿತ್ಸಗೆ ಫಲಿಸದ ರೆಡ್ಡಿ ಕೊನೆಯುಸಿರು ಎಳೆದಿದ್ದಾರೆ ಎನ್ನಲಾಗುತ್ತಿದೆ.
1989ರಲ್ಲಿ ಪೋಲಿಸ್ ಕರ್ತವ್ಯಕ್ಕೆ ನೇಮಕವಾದ ಇವರು, ದೇವದುರ್ಗ ತಾಲೂಕಿನ ಸುಣ್ಣದಕಲ್ ಗ್ರಾಮದವರು. ತುರ್ವಿಹಾಳ, ಇಡಪನೂರು, ರಾಯಚೂರು ಸಂಚಾರ, ಲಿಂಗಸುಗೂರು, ಮಸ್ಕಿ, ಲಿಂಗಸುಗೂರು ಪೋಲಿಸ್ ಠಾಣೆಗಳಲ್ಲಿ ಕರ್ತವ್ಯ ನಿರ್ವಹಿಸಿದ್ದರು. 2017ರಿಂದ ಲಿಂಗಸುಗೂರು ಠಾಣೆಯಲ್ಲಿ ಎಎಸ್‍ಐ ಆಗಿ ಭಡ್ತಿ ಹೊಂದಿ ಸೇವೆ ಸಲ್ಲಿಸುತ್ತಿದ್ದರು. ಮೃತರು ಮೂವರು ಮಕ್ಕಳು, ಪತ್ನಿ ಹಾಗೂ ಅಪಾರ ಬಂಧು-ಮಿತ್ರರನ್ನು ಬಿಟ್ಟು ಅಗಲಿದ್ದಾರೆ.
ಇವರ ನಿಧನದಿಂದ ಇಲಾಖೆಗೆ ತುಂಬದ ನಷ್ಟವಾಗಿದೆ ಎಂದು ಠಾಣೆಯ ಅಧಿಕಾರಿಗಳು ಹಾಗೂ ಸಿಬ್ಬಂಧಿಗಳು ಮೃತರ ಆತ್ಮಕ್ಕೆ ಶಾಂತಿಕೋರಿ ಸಂತಾಪ ಸೂಚಿಸಿದರು. ಮೃತರ ಅಂತ್ಯಕ್ರಿಯೆ ಅವರ ಸ್ವಗ್ರಾಮದಲ್ಲಿ ಶನಿವಾರ ಸಂಜೆ ಜರುಗಲಿದೆ ಎಂದು ಕುಟುಂಬ ಮೂಲಗಳು ತಿಳಿಸಿವೆ. ಮೃತರ ಅಗಲಿಕೆಯ ನೋವು ಭರಿಸುವ ಶಕ್ತಿಯನ್ನು ಭಗವಂತ ಕುಟುಂಬ ವರ್ಗಕ್ಕೆ ಕರುಣಿಸಲೆಂದು ಇಲಾಖೆಯ ಹಿರಿಯ ಅಧಿಕಾರಿಗಳು ಹಾಗೂ ಸಿಬ್ಬಂಧಿಗಳು ಪ್ರಾರ್ಥಿಸಿದ್ದಾರೆ.

