ಬಿಜೆಪಿ ಅದ್ಯಕ್ಷರು ಬಾಲಿಶತನ ಬಿಟ್ಟು, ಪ್ರಭುದ್ಧರಾಗಬೇಕು : ಪಾಟೀಲ್
ಲಿಂಗಸುಗೂರು : ಪಿಡಿಓ ಮೇಲಿನ ಹಲ್ಲೆ ಪ್ರಕರಣಕ್ಕೆ ಸಂಬಂಧಿಸಿದಂತೆ ಶಾಸಕರ ಮೇಲೆ ವಿನಾಕಾರಣ ನಿಂದನಾತ್ಮಕ ಹೇಳಿಕೆಗಳನ್ನು ಸಾಮಾಜಿಕ ಜಾಲತಾಣದಲ್ಲಿ ನೀಡಿರುವುದು ಬಿಜೆಪಿ ಅದ್ಯಕ್ಷ ವೀರನಗೌಡ ಪಾಟೀಲ್‍ರ ಬಾಲಿಶತನಕ್ಕೆ ಸಾಕ್ಷಿಯಾಗಿದೆ. ಓರ್ವ ಶಾಸಕರ ವಿರುದ್ಧ ಆರೋಪ ಮಾಡುವ ಇಮೇಜ್ ಆದರೂ ಅವರು ಬೆಳೆಸಿಕೊಳ್ಳಬೇಕು. ಸುಖಾಸುಮ್ಮನೇ ಶಾಸಕರ ಬಗ್ಗೆ ಆರೋಪ ಮಾಡುವುದರಿಂದ ಅವರು ಬಿಟ್ಟಿ ಪ್ರಚಾರ ಗಿಟ್ಟಿಸಿಕೊಳ್ಳುತ್ತಾರೆಯೇ ಹೊರತು ಇದರಿಂದ ಯಾವುದೇ ಪ್ರಯೋಜನ ಆಗುವುದಿಲ್ಲ. ವೀರನಗೌಡರು ಬಾಲಿಶತನದ ಹೇಳಿಕೆ ನೀಡುವುದನ್ನು ಬಿಟ್ಟು ಪ್ರಭುದ್ಧರಾಗಬೇಕೆಂದು ಬ್ಲಾಕ್ ಕಾಂಗ್ರೆಸ್ ಅದ್ಯಕ್ಷ ಭೂಪನಗೌಡ ಪಾಟೀಲ್ ಕಿಚಾಯಿಸಿದರು.
ಸ್ಥಳೀಯ ಪತ್ರಿಕಾ ಭವನದಲ್ಲಿ ಭಾನುವಾರ ಸುದ್ದಿಗೋಷ್ಠಿಯನ್ನು ಉದ್ದೇಶಿಸಿ ಮಾತನಾಡಿದ ಅವರು, ತಾಲೂಕಿನ ಉಪ್ಪಾರನಂದಿನಾಳ ಪಿಡಿಒ ಮೇಲೆ ಹಲ್ಲೆ ಮಾಡಿದ ಗ್ರಾ.ಪಂ. ಅಧ್ಯಕ್ಷೆಯ ಪತಿ ಹಾಗೂ ಅವರ ಬೆಂಬಲಿಗರ ಬೆಂಬಲಕ್ಕೆ ಶಾಸಕ ಡಿ.ಎಸ್.ಹೂಲಗೇರಿ ನಿಂತಿದ್ದು, ಗೂಂಡಾ ಪ್ರವೃತ್ತಿಗೆ ಪ್ರೋತ್ಸಾಹಿಸುತ್ತಿದ್ದಾರೆಂದು ಬಿಜೆಪಿ ಮಂಡಲ ಅಧ್ಯಕ್ಷ ವೀರನಗೌಡ ಲೆಕ್ಕಿಹಾಳ ಸಾಮಾಜಿಕ ಜಾಲತಾಣದಲ್ಲಿ ಮಾಡಿದ ಆರೋಪ ಸತ್ಯಕ್ಕೆ ದೂರವಾಗಿದೆ. ಚುನಾಯಿತ ಪ್ರತಿನಿಧಿಗಳು ಮತ್ತು ಅಧಿಕಾರಿಗಳ ಮಧ್ಯೆ ಪರಸ್ಪರ ಹೊಂದಾಣಿಕೆ ಇರಬೇಕು. ಅಂದಾಗ ಅಭಿವೃದ್ಧಿ ಸಾಧ್ಯವಾಗಲಿದೆ ಎಂದು ಶಾಸಕರು ಎರಡೂ ಕಡೆಯವರಿಗೆ ಬುದ್ಧಿವಾದ ಹೇಳಿರುವುದು ನಿಜ. ಆದರೆ, ಈ ಗಲಾಟೆಯಲ್ಲಿ ಶಾಸಕರ ವಿರುದ್ಧ ವಿನಾಕಾರಣ ಆರೋಪಿಸಿರುವುದು ವೀರನಗೌಡರ ಘನತೆಗೆ ಗೌರವ ತರುವಂತಹದ್ದಲ್ಲ.
ಗ್ರಾಪಂ ಕಂಪ್ಯೂಟರ್ ಆಪರೇಟರ್‍ಗೆ ವೀರನಗೌಡರ ವಾಹನ ಚಾಲಕ ಅವಾಚ್ಯ ಶಬ್ದಗಳಿಂದ ನಿಂದಿರುವುದು ಅವರೇ ಗೂಂಡಾಗಿರಿಗೆ ಪ್ರಚೋದನೆ ನೀಡಿದಂತಿದೆ. ವೀರನಗೌಡರು ಚುನಾಯಿತ ಪ್ರತಿನಿಧಿಗಳಾಗಿದ್ದರೆ ಅನುಭವ ಇರುತ್ತಿತ್ತು. ಅವರಿನ್ನೂ ರಾಜಕೀಯದಲ್ಲಿ ಬೆಳೆಯುತ್ತಿದ್ದಾರೆ. ಸ್ವತಃ ತಾವೇ ಗಾಜಿನ ಮನೆಯಲ್ಲಿ ಕುಳಿತು ಮತ್ತೊಬ್ಬರ ಮನೆಗೆ ಕಲ್ಲು ಹೊಡೆಯುವ ಕೆಲಸ ಮಾಡಬಾರದು ಎಂದರು.
ಕೋವಿಡ್ ಎರಡನೇ ಅಲೆ ವೇಗವಾಗಿ ಹರಡುತ್ತಿದ್ದು, ಈಗಾಗಲೇ ಶಾಸಕ ಡಿ.ಎಸ್.ಹೂಲಗೇರಿ ಅವರು ಆರೋಗ್ಯ, ಕಂದಾಯ, ಪೊಲೀಸ್ ಸೇರಿ ವಿವಿಧ ಇಲಾಖೆ ಅಧಿಕಾರಿಗಳ ಸಭೆ ಕರೆದು ಚರ್ಚಿಸಿದ್ದಾರೆ. ಸ್ಥಳೀಯ ಸರಕಾರಿ ಆಸ್ಪತ್ರೆಯಲ್ಲಿ ಕೋವಿಡ್ ಕೇರ್ ಕೇಂದ್ರ ಮತ್ತು ಬಿಸಿಎಂ ವಸತಿ ನಿಲಯದಲ್ಲಿ ಕ್ವಾರಂಟೈನ್ ಕೇಂದ್ರ ತೆರೆಯುವಲ್ಲಿ ಶಾಸಕರು ಸಹಕಾರ ನೀಡಿದ್ದಾರೆ. ಪೂರ್ವಾಪರವಾಗಿ ಯೋಚನೆ ಮಾಡದೇ ಸುಳ್ಳು ಆರೋಪ ಮಾಡುವುದು ಸರಿಯಲ್ಲವೆಂದು ಭೂಪನಗೌಡ ಹೇಳಿದರು.
ಪುರಸಭೆ ಉಪಾಧ್ಯಕ್ಷ ಮಹ್ಮದ್ ರಫಿ, ಮುಖಂಡರಾದ ಗುಂಡಪ್ಪ ಸಾಹುಕಾರ, ಪರಶುರಾಮ ನಗನೂರು ಈ ಸಂದರ್ಭದಲ್ಲಿ ಇದ್ದರು.

