ಕೋವಿಡ್ ಪರಿಹಾರ ಪ್ಯಾಕೇಜ್ ಘೋಷಣೆಗೆ ಆಗ್ರಹ
ಲಿಂಗಸುಗೂರು : ಕೋವಿಡ್ ಲಾಕ್‍ಡೌನ್‍ನಲ್ಲಿ ರಾಜ್ಯದ ಜನರ ಜೀವನ ಸಂಕಷ್ಟಕ್ಕೀಡಾಗಿದೆ. ಬಡವರಿಗೆ, ಜನಸಾಮಾನ್ಯರಿಗೆ ಸರಕಾರ ಕೋವಿಡ್ ಪರಿಹಾರ ಪ್ಯಾಕೇಜನ್ನು ಘೋಷಣೆ ಮಾಡಬೇಕೆಂದು ಎಸ್‍ಎಫ್‍ಐ, ಸಿಪಿಐಎಂ, ಸಿಪಿಐ ಹಾಗೂ ಎಸ್‍ಯುಸಿಐ ಸಂಘಟನೆ ಕಾರ್ಯಕರ್ತರು ಆಗ್ರಹಿಸಿದರು.
ಶಾಸಕ ಡಿ.ಎಸ್.ಹೂಲಗೇರಿಯವರಿಗೆ ಮನವಿ ಸಲ್ಲಿಸಿದ ಅವರು, ಆದಾಯ ತೆರಿಗೆಯಡಿ ಪ್ರತಿ ಕುಟುಂಬಕ್ಕೆ ಆಹಾರ ಧಾನ್ಯ, ಆರೋಗ್ಯ ಸುರಕ್ಷಿತ ಸಾಮಗ್ರಿ ಮತ್ತು 10 ಸಾವಿರ ರೂ. ನೆರವು ನೀಡಬೇಕು. ಬಡವರಿಗೆ ಪೂರ್ಣ ಪ್ರಮಾಣದ ಪಡಿತರ ನೀಡಬೇಕು. ಹೂವು, ಹಣ್ಣು, ತರಕಾರಿ ಬೆಳೆ ನಷ್ಟ ಹೊಂದಿದ ರೈತರಿಗೆ ಪ್ರತಿ ಎಕರೆಗೆ 25 ಸಾವಿರ ರೂ. ಪರಿಹಾರ ನೀಡಬೇಕು.
ಕೂಲಿಕಾರರು, ಕಸುಬುದಾರರು, ಆದಿವಾಸಿಗಳಿಗೆ, ಅಲ್ಪಸಂಖ್ಯಾತರ, ರೈತರ ಸಾಲಮನ್ನಾ ಮಾಡಬೇಕು. ಉದ್ಯೋಗ ಖಾತ್ರಿ ಯೋಜನೆಯಡಿ 200 ದಿನಗಳಿಗೆ ವಿಸ್ತರಿಸಬೇಕು. ಪುರಸಭೆ ಕಾರ್ಮಿಕರಿಗೆ ಸೌಲಭ್ಯ ವಿಸ್ತರಿಸಬೇಕು. ಪ್ರಕೃತಿ ವಿಕೋಪದಿಂದ ತೊಂದರೆಗೊಳಗಾದ ರೈತರಿಗೆ ಕನಿಷ್ಟ ಬೆಂಬಲ ಬೆಲೆ ನೀಡಿ ಋಣಮುಕ್ತ ಕಾಯ್ದೆ ಜಾರಿಗೆ ತರಬೇಕು ದೇಶದಲ್ಲಿ ಉಚಿತ ಹಾಗೂ ಸಾರ್ವತ್ರಿಕ ಲಸಿಕಾಕರಣಕ್ಕೆ ಕ್ರಮವಹಿಸಬೇಕೆಂದು ಆಗ್ರಹಿಸಿದರು.
ಸಂಘಟನೆ ಮುಖಂಡರಾದ ರಮೇಶ ವೀರಾಪುರ, ಮಹ್ಮದ್ ಅನೀಫ್, ಮಾನಪ್ಪ ಲೆಕ್ಕಿಹಾಳ, ಸದ್ದಾಂಹುಸೇನ್, ಶಿವರಾಜ ಕುಸಗಲ್, ಬೆಟ್ಟಪ್ಪ, ಸಿಪಿಐ ಪಕ್ಷದ ವೆಂಕೋಬ ಮೀಯಾಪುರ, ಬಸವರಾಜ ಹಟ್ಟಿ, ಎಸ್‍ಯುಸಿಐ ಸಂಘಟನೆಯ ಶರಣಪ್ಪ ಉದ್ಬಾಳ, ತಿರುಪತಿ, ಬಸಲಿಂಗಪ್ಪ ಸೇರಿ ಇತರರು ಈ ಸಂದರ್ಭದಲ್ಲಿ ಇದ್ದರು.

