ರಾಯಚೂರು

ದುಡಿಮೆ ಇಲ್ಲದೇ ಪರದಾಡುತ್ತಿದ್ದ ಅಲೆಮಾರಿ ಕುಟುಂಬಗಳಿಗೆ ಆಸರೆ ವಾಹನದ ವ್ಯವಸ್ಥೆ ಮಾಡಿ, ಖರ್ಚಿಗೆ ದುಡ್ಡೂ ಕೊಟ್ಟು ಕಳುಹಿಸಿದ ಪಿಎಸ್‍ಐ ಕಾರ್ಯಕ್ಕೆ ಮೆಚ್ಚುಗೆ..!

ಖಾಜಾಹುಸೇನ್
ಲಿಂಗಸುಗೂರು : ಪೋಲಿಸರೆಂದರೆ ಕೇವಲ ಲಾಠಿ ಬೀಸುವ, ಜನರಿಗೆ ಸತಾಯಿಸುವ, ದೌರ್ಜನ್ಯ ನಡೆಸುವ ವ್ಯಕ್ತಿತ್ವ ಎಂದುಕೊಂಡಿರುವವರೇ ಬಹಳ. ಆದರಿಲ್ಲೊಬ್ಬ ಅಧಿಕಾರಿ ಪಟ್ಟಣದಲ್ಲಿ ದುಡಿಮೆ ಇಲ್ಲದೇ ಒಪ್ಪತ್ತಿನ ಊಟಕ್ಕೂ ಅಲೆದಾಡುತ್ತಿದ್ದ ಅಲೆಮಾರಿ ಕುಟುಂಬದ ಸದಸ್ಯರನ್ನು ಅವರ ಸ್ಥಳಕ್ಕೆ ಹೋಗಲು ವಾಹನ ವ್ಯವಸ್ಥೆ ಮಾಡಿಕೊಡುವ ಜೊತೆಗೆ ಖರ್ಚಿಗೆ ಕಾಸನ್ನೂ ಕೊಟ್ಟು ಮಾನವೀಯತೆ ಮೆರೆಯುವ ಕೆಲಸ ಮಾಡಿದ್ದಾರೆ. ಇವರ ಕಾರ್ಯ ಸಾರ್ವಜನಿಕ ವಲಯದಲ್ಲಿ ಮೆಚ್ಚುಗೆಗೆ ಪಾತ್ರವಾಗಿದೆ.

ಪಿಎಸ್‍ಐ ಪ್ರಕಾಶ ಡಂಬಳ್ ಎಂದಿನಂತೆ ನಸುಕಿನಲ್ಲಿ ಕರ್ತವ್ಯಕ್ಕೆ ಹಾಜರಾಗಿದ್ದಾರೆ. ವಿನಾಕಾರಣ ಮನೆಯಿಂದ ಆಚೆ ಬರುವ ಜನರಿಗೆ ಎಚ್ಚರಿಕೆ ನೀಡುವ ಜೊತೆಗೆ ಅನಗತ್ಯವಾಗಿ ಬೈಕ್‍ಗಳ ಓಡಾಟಕ್ಕೆ ಕಡಿವಾಣ ಹಾಕುವ ಕಾರ್ಯದಲ್ಲಿ ತೊಡಗಿಕೊಂಡಿದ್ದಾರೆ. ಅದೇ ಹೊತ್ತಿಗೆ, ಸಾರಿಗೆ ಸಂಸ್ಥೆಯ ವಾಣಿಜ್ಯ ಮಳಿಗೆಗಳ ಮುಂದೆ ಅಲೆಮಾರಿ ಸಮುದಾಯದ ಕುಟುಂಬದ ಸದಸ್ಯರು ಊಟಕ್ಕೆ ಅತ್ತಿಂದಿತ್ತ ಓಡಾಡುತ್ತಿರುವುದು ಕಂಡು ಬಂದಿದೆ. ಅವರನ್ನು ಕರೆದು ವಿಚಾರಿಸಲಾಗಿ, ಮಹಾರಾಷ್ಟ್ರದ ಲಾಥೋರ್ ಮೂಲದವರು ಹೊಟ್ಟೆಪಾಡಿಗಾಗಿ ಡೊಂಬರಾಟ ಆಡುತ್ತಾ ಜೀವನ ಸಾಗಿಸಲು ಇಲ್ಲಿಗೆ ಬಂದಿರುವುದಾಗಿ ತಿಳಿದುಬಂದಿದೆ.


ಸಧ್ಯಕ್ಕೆ ಲಾಕ್‍ಡೌನ್ ಇರುವುದರಿಂದ ದುಡಿಮೆ ಇಲ್ಲದೇ ಜೀವನ ಸಾಗಿಸುವುದು ಕಷ್ಟಕರವಾಗುತ್ತಿದೆ. ಊಟ ಹಂಚುವವರು ಬರುತ್ತಾರೇನೋ ಎಂದುಕೊಂಡು ಕಾಯುತ್ತಿರುವುದಾಗಿ ಅಲೆಮಾರಿ ಕುಟುಂಬದವರು ಪಿಎಸ್‍ಐರಿಗೆ ತಮ್ಮ ವೇದನೆಯನ್ನು ತೋಡಿಕೊಂಡಿದ್ದಾರೆ. 

ಅಲೆಮಾರಿಗಳ ಅಸಹಾಯಕ ರೋಧನ ಕೇಳಿ ಮರುಕ ವ್ಯಕ್ತಪಡಿಸಿದ ಅಧಿಕಾರಿ ಡಂಬಳ್ ಅವರಿರುವ ಕಡೆಗೆ ತೆರಳಲು ಸಾರಿಗೆ ವ್ಯವಸ್ಥೆ ಇಲ್ಲದ್ದರಿಂದ ಪುರಸಭೆಯ ಟ್ರಾಕ್ಟರ್ ಮೂಲಕ ತಾಲೂಕಿನ ಗಡಿಯವರೆಗೆ ಕಳುಹಿಸಿಕೊಡಲು ಮುಂದಾದರು. ಊಟಕ್ಕೆ, ಖರ್ಚಿಗೆ ಕಾಸಿಲ್ಲವೆಂದು ಹೇಳಿಕೊಂಡ ಅಲೆಮಾರಿಗಳಿಗೆ ಜೇಬಿನಲ್ಲಿದ್ದ ದುಡ್ಡೆಲ್ಲವನ್ನೂ ನೀಡಿ ಹಿರಿಯಣ್ಣನಂತೆ ಹೆಣ್ಣುಮಕ್ಕಳಿಗೆ ಶುಭಕೋರಿ ಕಳುಹಿಸಿಕೊಟ್ಟರು. ಅಧಿಕಾರಿಯ ಈ ಕಾರ್ಯಕ್ಕೆ ಸಾರ್ವಜನಿಕ ವಲಯದಲ್ಲಿ ಪ್ರಶಂಸೆ ವ್ಯಕ್ತವಾಗಿದ್ದಂತೂ ಸುಳ್ಳಲ್ಲ..

Leave a Reply

Your email address will not be published. Required fields are marked *

error: Content is protected !!