ರೋಗಿಗಳಿಗಿಲ್ಲ ಆರೈಕೆ : ಕ್ವಾರಂಟೈನ್ ಸೆಂಟರ್‍ನಲ್ಲಿ ಕಳಪೆ ಊಟ ಪೂರೈಕೆ
ಲಿಂಗಸುಗೂರು : ಕೋವಿಡ್ ಸೊಂಕಿನಿಂದ ನರಳುತ್ತಾ ಕ್ವಾರಂಟೈನ್ ಆಗಿರುವ ರೋಗಿಗಳಿಗೆ ಸಕಾಲಕ್ಕೆ ಗುಣಮಟ್ಟದ ಊಟ-ಉಪಹಾರ ಸಿಗದೇ ಪರಿಸ್ಥಿತಿ ಪರದಾಡುವಂತಾಗಿದೆ ಎನ್ನುವ ಮಾಹಿತಿ ಬಂದಿದೆ.

ಪುರಸಭೆ ವ್ಯಾಪ್ತಿಯ ಕರಡಕಲ್ ಹೊರವಲಯದಲ್ಲಿರುವ ಕ್ವಾರಂಟೈನ್ ಕೇಂದ್ರದಲ್ಲಿ ಸುಮಾರು 80ಕ್ಕೂ ಹೆಚ್ಚು ಸೊಂಕಿತರನ್ನು ಐಸೋಲೇಷನ್ ಮಾಡಲಾಗಿದೆ. ಹಟ್ಟಿ, ಲಿಂಗಸುಗೂರು, ಅನ್ವರಿ, ಕಾಳಾಪೂರ, ಗೆಜ್ಜಲಗಟ್ಟಾ ಸೇರಿ ಸುತ್ತಮುತ್ತಲ ಗ್ರಾಮಗಳ ಸೊಂಕಿತರನ್ನು ಕೇಂದ್ರದಲ್ಲಿ ಕ್ವಾರಂಟೈನ್ ಮಾಡಲಾಗಿದೆ. ಆದರೆ, ಊಟ-ಉಪಹಾರ ಮಾತ್ರ ಕಳಪೆಯಾಗಿರುತ್ತದೆ ಎನ್ನುವ ದೂರುಗಳು ಖುದ್ದು ಸೊಂಕಿತರೇ ದೂರವಾಣಿ ಕರೆ ಮಾಡಿ ಪತ್ರಿಕೆಗೆ ಮಾಹಿತಿ ನೀಡಿದ್ದಾರೆ.

ಬೆಳಗ್ಗೆ ಇಡ್ಲಿ ಸಾಂಬಾರ್, ಮಧ್ಯಾಹ್ನ ಇಡ್ಲಿ ಸಾಂಬಾರ್, ರಾತ್ರಿ ಇಡ್ಲಿ ಸಾಂಬಾರ್ ಹೇಗೆ ತಿನ್ನಬೇಕು ಕೊಟ್ಟಿದ್ದೇ ಕೊಟ್ಟಿದ್ದು. ನೀರಿನಂತ ಸಾಂಬಾರ್ ಉಪ್ಪಿಲ್ಲಾ, ಖಾರಾಇಲ್ಲ ಎಂದು ಸೊಂಕಿತರು ಕರೆ ಮಾಡಿ ತಮ್ಮ ಅಳಲನ್ನು ತೋಡಿಕೊಳ್ಳುತ್ತಿದ್ದಾರೆ. ಈ ಬಗ್ಗೆ ಕೇಂದ್ರಕ್ಕೆ ಭೇಟಿ ನೀಡಿದ್ದ ತಹಸೀಲ್ದಾರ್‍ರಿಗೆ ರೋಗಿಗಳು ತಮ್ಮ ವೇದನೆಯನ್ನು ತೋಡಿಕೊಂಡಾಗ, ಸೂಕ್ತ ವ್ಯವಸ್ಥೆ ಕಲ್ಪಿಸುವುದಾಗಿ ಭರವಸೆ ನೀಡಿದ್ದ ಅಧಿಕಾರಿ ಮಾತ್ರ ಯಾವುದೇ ಕ್ರಮಕ್ಕೆ ಮುಂದಾಗಿಲ್ಲ ಎನ್ನುವ ಮಾತುಗಳು ಸೊಂಕಿತರಲ್ಲಿ ಕೇಳಿ ಬರುತ್ತಿವೆ.

ಸೊಂಕು ತಗುಲಿದವರ ಆರೋಗ್ಯದ ಬಗ್ಗೆ ಹೆಚ್ಚಿನ ಕಾಳಜಿ ವಹಿಸಲು ಸರಕಾರ ಎಷ್ಟೆಲ್ಲಾ ಕಷ್ಟಪಟ್ಟು ವ್ಯವಸ್ಥೆ ಕಲ್ಪಿಸುತ್ತಿದೆಯಾದರೂ, ಅಧಿಕಾರಿಗಳ ನಿರ್ಲಕ್ಷ್ಯದಿಂದ ಸೊಂಕಿತರ ಆರೋಗ್ಯ ದಿನೇ ದಿನೇ ಕ್ಷಣಿಸುತ್ತಿದೆ ಎನ್ನುವುದು ಲಿಂಗಸುಗೂರಿನ ಕ್ವಾರಂಟೈನ್ ಕೇಂದ್ರದಲ್ಲಿನ ಪರಿಸ್ಥಿತಿಯೇ ಉದಾಹರಣೆಯಾಗಿದೆ. ವೈದ್ಯರು, ನರ್ಸ್‍ಗಳು ಸೇರಿ ಆರೋಗ್ಯ ಇಲಾಖೆಯ ಸಿಬ್ಬಂಧಿಗಳೂ ಇಲ್ಲಿಗೆ ಬಾರದೇ ಕೇವಲ ಮಾತ್ರೆಗಳನ್ನು ಕಳುಹಿಸಿಕೊಡುತ್ತಾರೆ. ಯಾರು ಎಷ್ಟು ಮಾತ್ರೆ ತೆಗೆದುಕೊಳ್ಳಬೇಕೆಂದೂ ಗೊತ್ತಾಗುತ್ತಿಲ್ಲ. ಕಾಟಾಚಾರಕ್ಕೆ ಕ್ವಾರಂಟೈನ್ ಕೇಂದ್ರವನ್ನು ಮಾಡಲಾಗಿದೆ.

ಮೇಲಧಿಕಾರಿಗಳು ನಮ್ಮ ದುಸ್ಥಿತಿಗೆ ಪರಿಹಾರ ಕಂಡುಕೊಳ್ಳಬೇಕು. ಇಲ್ಲವಾದಲ್ಲಿ ಇಲ್ಲಿಯೇ ನಮ್ಮ ಜೀವಕ್ಕೆ ಆಪತ್ತು ತಪ್ಪಿದ್ದಲ್ಲ ಎನ್ನುವ ಆತಂಕ ಸೊಂಕಿತರಿಂದ ಕೇಳಿ ಬರುತ್ತಿವೆ. ಕೂಡಲೇ ಜಿಲ್ಲಾಧಿಕಾರಿಗಳು ಲಿಂಗಸುಗೂರು ಕ್ವಾರಂಟೈನ್ ಕೇಂದ್ರಕ್ಕೆ ಭೇಟಿ ನೀಡಿ, ಇಲ್ಲಿನ ಪರಿಸ್ಥಿತಿಯನ್ನು ಮನಗಂಡು ಸೂಕ್ತ ಕ್ರಮ ಕೈಗೊಳ್ಳಬೇಕು. ತಪ್ಪಿತಸ್ಥರ ಮೇಲೆ ಕ್ರಮಕ್ಕೆ ಮುಂದಾಗಬೇಕು ಎನ್ನುವ ಒತ್ತಾಯಗಳಿವೆ.

‘ಕಳೆದ ವರ್ಷ ಕೊರೊನಾ ಮೊದಲ ಅಲೆಯಲ್ಲಿ ಕ್ವಾರಂಟೈನ್ ಕೇಂದ್ರದಲ್ಲಿ ಕಳಪೆ ಊಟ-ಉಪಹಾರ ನೀಡಲಾಗುತ್ತಿತ್ತು. ಇದು ಈ ವರ್ಷಕ್ಕೂ ಮುಂದುವರೆದಿದೆ. ಸ್ಥಳೀಯ ಹೊಟೆಲ್‍ಗಳಲ್ಲಿ ಊಟದ ವ್ಯವಸ್ಥೆ ಮಾಡುವ ಬದಲು ಆಡಳಿತ ಕೇರಳ ಮೂಲಕ ಹೊಟೆಲ್‍ನಲ್ಲಿ ಸೊಂಕಿತರಿಗೆ ಊಟದ ವ್ಯವಸ್ಥೆ ಅದೂ ಹೆಚ್ಚಿನ ಬೆಲೆಗೆ ನೀಡುತ್ತಿದ್ದಾರೆ. ಊಟದಲ್ಲೂ ಮೋಸ ಮಾಡಿ ಹಣವನ್ನು ಕೊಳ್ಳೆ ಹೊಡೆಯುವ ಹುನ್ನಾರ ನಡೆದಿದೆ. ಕೂಡಲೇ ಜಿಲ್ಲಾಧಿಕಾರಿಗಳು ಕೇಂದ್ರಕ್ಕೆ ಭೇಟಿ ನೀಡಿ ಸಮಸ್ಯೆ ನಿವಾರಿಸಬೇಕು. ಇಲ್ಲವಾದಲ್ಲಿ ಹೋರಾಟಕ್ಕೆ ಮುಂದಾಗುತ್ತೇವೆ.’ – ಜಿಲಾನಿಪಾಷಾ, ಕರವೇ ಅದ್ಯಕ್ಷ.

