ನಂದವಾಡಗಿ ಏತನೀರಾವರಿ ಯೋಜನೆಯಲ್ಲಿ ಅಕ್ರಮ : ಕ್ರಮಕ್ಕೆ ಆಗ್ರಹ
ಲಿಂಗಸುಗೂರು : ತಾಲೂಕಿನ ಸಾವಿರಾರು ಹೆಕ್ಟೇರ್ ಭೂಪ್ರದೇಶಕ್ಕೆ ನೀರುಣಿಸುವ ಮಹತ್ವದ ನಂದವಾಡಗಿ ಏತನೀರಾವರಿ ಯೋಜನೆ ಕಾಮಗಾರಿಯಲ್ಲಿ ಭಾರಿ ಪ್ರಮಾಣದ ಅಕ್ರಮ ನಡೆದಿದ್ದು, ತಪ್ಪಿತಸ್ಥರ ವಿರುದ್ಧ ಕ್ರಿಮಿನಲ್ ಮೊಕದ್ದಮೆಗೆ ಸಿಪಿಐ(ಎಂಎಲ್) ರೆಡ್‍ಸ್ಟಾರ್ ರಾಜ್ಯಾಧ್ಯಕ್ಷ ಆರ್.ಮಾನಸಯ್ಯ ಆಗ್ರಹಿಸಿದರು.
ಸ್ಥಳೀಯ ಪತ್ರಿಕಾ ಭವನದಲ್ಲಿ ಶುಕ್ರವಾರ ಸುದ್ದಿಗೋಷ್ಠಿ ನಡೆಸಿದ ಅವರು, ಈ ಭಾಗದ ರೈತರ ಬಹುದಿನಗಳ ಬೇಡಿಕೆಯಾದ ಹಾಗೂ ರೈತರ ನಿರಂತರ ಹೋರಾಟದ ಫಲವಾಗಿ ಅನುಷ್ಠಾನಕ್ಕೆ ಬಂದ ಅತ್ಯಂತ ಅಪರೂಪದ ಮಹತ್ವಾಕಾಂಕ್ಷೆಯ ನಂದವಾಡಗಿ ಏತನೀರಾವರಿ ಯೋಜನೆಯು ಬಿಜೆಪಿ ರಾಜಕಾರಣಿಗಳು ಹಾಗೂ ಅಧಿಕಾರಿಗಳ ಜಂಟಿ ಮಸಲತ್ತಿನಿಂದ ಬುಡಮೇಲಾಗಿದೆ.
ಆರಂಭದಲ್ಲಿ 1500 ಕೋಟಿ ರೂಪಾಯಿ ಯೋಜನಾ ವೆಚ್ಚವನ್ನು 300 ಕೋಟಿ ರೂಪಾಯಿಗೆ ಹೆಚ್ಚಿಸಿದ್ದು ಮೊದಲನೇ ಅಕ್ರಮವಾಗಿದೆ. ಬಳಿಕ ಕಾಮಗಾರಿಗೆ ಟೆಂಡರ್ ಕರೆದು ಹಾಕಲಾದ ಷರತ್ತುಗಳ ಪೈಕಿ ಮೇ|| ಎನ್‍ಡಿಡಬ್ಲೂ ಕಂಪನಿಗೆ ಕಾನೂನು ಬಾಹಿರವಾಗಿ ಭಾರಿ ರಿಯಾಯ್ತಿ ನೀಡಿ ಗುತ್ತಿಗೆ ಕೊಡಿಸುವಲ್ಲಿ ಮುಖ್ಯಮಂತ್ರಿಯವರ ಸುಪುತ್ರ ವಿಜಯೇಂದ್ರ ಅವರ ಸಹಾಯಹಸ್ತವಿದೆ.
ಹನಿನೀರಾವರಿ ಮಾಡಿದ ಅನುಭವ ಈ ಕಂಪನಿಗೆ ಇಲ್ಲ. ಆದರೂ, ಈ ಕಂಪನಿಗೆ ಸರಾಸರಿ 600 ಕೋಟಿ ರೂಪಾಯಿ ಗುತ್ತಿಗೆ ಅವಾರ್ಡ್ ಆಗಿದೆ. ಮೊದಲ ಸುತ್ತಿನ ಟೆಂಡರ್‍ನಲ್ಲಿ ತಿರಸ್ಕøತಗೊಂಡ ಈ ಕಂಪನಿಗೆ ನಂತರ ಟೆಂಡರ್ ನೀಡಿರುವುದು ಅಕ್ರಮವಾಗಿದೆ. ಸಾರ್ವಜನಿಕ ಯೋಜನೆಯನ್ನು ಸ್ವಂತಕ್ಕೆ ಬಳಕೆ ಮಾಡಿಕೊಳ್ಳುತ್ತಿರುವ ಬಿಜೆಪಿ ಮುಖಂಡರುಗಳ ಹಾಗೂ ಅಧಿಕಾರಿಗಳ ಶಾಮೀಲಿನಿಂದ ದುರ್ಬಳಕೆ ಆಗುತ್ತಿದೆ. ಭ್ರಷ್ಟಾಚಾರದಿಂದ ಬುಡಮೇಲಾದ ಲಿಂಗಸುಗೂರು ಕೆಳಭಾಗದ ಹನಿನೀರಾವರಿ ಕಾಮಗಾರಿಯನ್ನು ಕೂಡಲೇ ನಿಲ್ಲಿಸಿ ತಪ್ಪಿತಸ್ಥರ ವಿರುದ್ಧ ಕಾನೂನು ಕ್ರಮ ಕೈಗೊಳ್ಳಬೇಕೆಂದು ಮಾನಸಯ್ಯ ಒತ್ತಾಯಿಸಿದರು.
ಸಂಘಟನೆ ಮುಖಂಡರಾದ ಜಿ.ಅಮರೇಶ, ಶಾಂತಕುಮಾರ, ತಿಪ್ಪರಾಜ ಸೇರಿ ಇತರರು ಇದ್ದರು.

