ಕಲ್ಯಾಣ ಕರ್ನಾಟಕ ಅಭಿವೃದ್ಧಿಗೆ ಬಂದ ಅನುದಾನ ನುಂಗಿ ನೀರು ಕುಡಿದರೇ ಅಧಿಕಾರಿಗಳು-ಪ್ರತಿನಿಧಿಗಳು..? 1,06,047 ಕೋಟಿ ರೂಪಾಯಿ ಕೆಕೆಆರ್‍ಡಿಬಿ ಅನುದಾನ ಎಲ್ಲಿ ಸ್ವಾಮಿ..? : ಮಾಜಿ ಮಂತ್ರಿ ಆಲ್ಕೋಡ್ ಗಂಭೀರ ಪ್ರಶ್ನೆ
ಲಿಂಗಸುಗೂರು : ಕಲ್ಯಾಣ ಕರ್ನಾಟಕದ ಅಭಿವೃದ್ಧಿಗಾಗಿ ಪ್ರತಿವರ್ಷ ರಾಯಚೂರು ಜಿಲ್ಲೆಯ ಎಲ್ಲಾ ತಾಲೂಕುಗಳಿಗೂ ಕಳೆದ 2013-14ನೇ ಸಾಲಿನಿಂದ ಬಿಡುಗಡೆಯಾಗಿರುವ 1,06,047.15 ಕೋಟಿ ರೂಪಾಯಿ ಅನುದಾನವನ್ನು ದುರ್ಬಳಕೆ ಮಾಡಿಕೊಳ್ಳುವ ಮೂಲಕ ಅಧಿಕಾರಿಗಳು-ಜನಪ್ರತಿನಿಧಿಗಳು ಒಂದಾಗಿ ಸರಕಾರದ ಕಣ್ಣಿಗೆ ಮಣ್ಣೆರಚಿದ್ದಾರೆ. ಈ ಬಗ್ಗೆ ಕೂಡಲೇ ಸರಕಾರ ಉನ್ನತ ಮಟ್ಟದ ತನಿಖೆಗೆ ಮುಂದಾಗಬೇಕೆಂದು ಮಾಜಿ ಮಂತ್ರಿ ಹನುಮಂತಪ್ಪ ಆಲ್ಕೋಡ್ ಗಂಭೀರವಾಗಿ ಪ್ರಶ್ನಿಸಿದರು.
ಸ್ಥಳೀಯ ಪತ್ರಿಕಾ ಭವನದಲ್ಲಿ ಗುರುವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಕಲ್ಯಾಣ ಕರ್ನಾಟಕ ಪ್ರದೇಶಾಭಿವೃದ್ಧಿ ಮಂಡಳಿ ಆರಂಭವಾದಾಗಿನಿಂದ ರಾಯಚೂರು ಜಿಲ್ಲೆಯ ಎಲ್ಲಾ ತಾಲೂಕುಗಳಿಗೂ 2013-14 ರಿಂದ 2021-22ನೇ ಸಾಲಿನವರೆಗೆ ಕ್ರಿಯಾ ಯೋಜನೆಯಲ್ಲಿ ನಿಗದಿಪಡಿಸಿದ ಅನುದಾನದ ವಿವರದಂತೆ ದೇವದುರ್ಗ ತಾಲೂಕಿಗೆ 32,976.07 ಲಕ್ಷ ರೂಪಾಯಿ, ಲಿಂಗಸುಗೂರು ತಾಲೂಕಿಗೆ 25,454.3 ಲಕ್ಷ ರೂಪಾಯಿ, ಮಾನವಿ ತಾಲೂಕಿಗೆ 21,066.2 ಲಕ್ಷ ರೂಪಾಯಿ, ರಾಯಚೂರು ತಾಲೂಕಿಗೆ 11,697.7 ಲಕ್ಷ ರೂಪಾಯಿ, ಸಿಂಧನೂರು ತಾಲೂಕಿಗೆ 14,852.88 ಲಕ್ಷ ರೂಪಾಯಿ ಸೇರಿ ಒಟ್ಟು 1,06,047.15 ಕೋಟಿ ರೂಪಾಯಿ ಅನುದಾನ ಬಿಡುಗಡೆಯಾಗಿದೆ.
ಬಂದ ಅನುದಾನವನ್ನು ವಾರ್ಷಿಕವಾಗಿ ಖರ್ಚು ಮಾಡಿರುವ ಬಗ್ಗೆ ಮಂಡಳಿಯಲ್ಲಿ ದಾಖಲೆಗಳನ್ನು ಇಡಲಾಗಿದೆ. ಆದರೆ, ವಾಸ್ತವಿಕವಾಗಿ ಎಲ್ಲಿಯೂ ಕೆಲಸವಾಗಿಲ್ಲ. ಕಲ್ಯಾಣ ಕರ್ನಾಟಕದ ಅಭಿವೃದ್ಧಿ ಮಾಡುವ ಹೊಣೆ ಹೊತ್ತ ಅಧಿಕಾರಿಗಳು ಮತ್ತು ಜನಪ್ರತಿನಿಧಿಗಳು ಸೇರಿಕೊಂಡು ವ್ಯವಸ್ಥಿತವಾಗಿ ಹೊಂಚು ಹಾಕಿ ತಮ್ಮ ಕಲ್ಯಾಣ ಮಾಡಿಕೊಂಡಿದ್ದಾರೆಯೇ, ಹೊರತು ಜನಸಾಮಾನ್ಯರ ಸಮಸ್ಯೆಗಳು ಮತ್ತಷ್ಟು ಜಟಿಲವಾಗಿಯೇ ಉಳಿದುಕೊಂಡಿವೆ ಎಂದು ಆಲ್ಕೋಡ್ ಅಂಕಿ-ಅಂಶಗಳ ಸಮೇತ ಆರೋಪಿಸಿದರು.
ಜಲಸಂಪನ್ಮೂಲ(ನೀರಾವರಿ), ಲೋಕೋಪಯೋಗಿ, ಸಾರಿಗೆ, ಅರಣ್ಯ, ಆರೋಗ್ಯ, ಶಿಕ್ಷಣ, ಕೃಷಿ, ಕಂದಾಯ, ತೋಟಗಾರಿಕೆ, ಸಮಾಜಕಲ್ಯಾಣ, ಮೀನುಗಾರಿಕೆ, ಮಹಿಳಾ ಮತ್ತು ಮಕ್ಕಳ ಕಲ್ಯಾಣ, ಅಲ್ಪಸಂಖ್ಯಾತ, ರೇಷ್ಮೆ, ಸಾರಿಗೆ, ಆಹಾರ ಮತ್ತು ನಾಗರಿಕ ಸರಬರಾಜು, ಉಗ್ರಾಣ, ಭೂಸೇನಾ, ಕರ್ನಾಟಕ ಗ್ರಾಮೀಣ ರಸ್ತೆ ಅಭಿವೃದ್ದಿ ನಿಗಮ, ಕಾರ್ಮಿಕ, ಜಿ.ಪಂ. ಇಂಜಿನಿಯರಿಂಗ್, ಅಬಕಾರಿ ಸೇರಿ ಸರಕಾರದಲ್ಲಿ 51 ಇಲಾಖೆಗಳು ಇವೆ. ಪ್ರತಿಯೊಂದು ಇಲಾಖೆಯೂ ಭ್ರಷ್ಟಾಚಾರದ ಕೂಪದಲ್ಲಿ ತಾಂಡವವಾಡುತ್ತಿದೆ. ಬಹುತೇಕ ಎಲ್ಲಾ ಇಲಾಖೆಯ ಮಾಹಿತಿಯನ್ನೂ ಸಂಗ್ರಹಿಸಲಾಗಿದೆ. ಮೊದಲಿಗೆ ಕಲ್ಯಾಣ ಕರ್ನಾಟಕ ಅಭಿವೃದ್ಧಿ ಮಂಡಳಿಯಲ್ಲಿ ಆಗಿರುವ ಬ್ರಹ್ಮಾಂಡ ಭ್ರಷ್ಟಾಚಾರದ ಕೂಪವಾಗಿದೆ.
ಇಲಾಖೆಯ ಹಿರಿಯ ಅಧಿಕಾರಿಗಳಿಂದ ಹಿಡಿದು ಪ್ರತಿಯೊಂದು ಹಂತದಲ್ಲಿಯೂ ಬ್ರಷ್ಟಾಚಾರ ತಾಂಡವವಾಡುತ್ತಿದೆ ಎನ್ನುವ ಮಾತಿಗೆ ಸರಕಾರದಿಂದ ಬಿಡುಗಡೆಯಾಗಿರುವ ಅನುದಾನದ ಅಂಕಿ-ಅಂಶಗಳೇ ಸಾಕ್ಷಿಯಾಗಿವೆ. ಅಭಿವೃದ್ಧಿಯಲ್ಲಿ ಇಷ್ಟೆಲ್ಲಾ ತಾರತಮ್ಯ ನಡೆಯುತ್ತಿದ್ದರೂ ಈ ಭಾಗದ ಶಾಸಕರು, ಸಂಸದರು, ವಿಧಾನಪರಿಷತ್ ಸದಸ್ಯರು ಮೌನಕ್ಕೆ ಶರಣಾಗಿರುವುದು ಹಲವು ಅನುಮಾನಗಳಿಗೆ ಎಡೆಮಾಡಿಕೊಡುತ್ತಿದೆ ಎಂದು ಆರೋಪಿಸಿದರು.
ಲಾಕ್‍ಡೌನ್ ಅವಧಿಯಲ್ಲಿ ನರೇಗಾ ಯೋಜನೆಯಡಿ ಕೆಲಸ ನೀಡಲ್ಲವಾದರೂ, ಬಂದ ಅನುದಾನ ಮಾತ್ರ ಸಂಪೂರ್ಣವಾಗಿ ಖರ್ಚಾಗುತ್ತಿದೆ ಎನ್ನುವ ಮಾಹಿತಿಯನ್ನು ಅಧಿಕಾರಿಗಳು ನೀಡಿದ್ದಾರೆಂದರೆ, ಎಷ್ಟರ ಮಟ್ಟಿಗೆ ಅಧಿಕಾರಿಗಳು ಭ್ರಷ್ಟತೆಯಲ್ಲಿ ವಿಲೀನರಾಗಿದ್ದಾರೆಂದು ಗೋಚರಿಸುತ್ತದೆ. 2013ರಲ್ಲಿ ಜನರನ್ನು ಕತ್ತಲೆಯಲ್ಲಿಟ್ಟು ಕಲ್ಯಾಣ ಕರ್ನಾಟಕದ ಹೆಸರಿನಲ್ಲಿ ಅಭಿವೃದ್ಧಿಗೆ ಮಲತಾಯಿ ಧೋರಣೆ ಅನುಸರಿಸುತ್ತಿರುವುದು ದುರಂತವೇ ಸರಿ ಎಂದ ಮಾಜಿ ಸಚಿವರು, ಕೂಡಲೇ ಸರಕಾರ ಕಲ್ಯಾಣ ಕರ್ನಾಟಕ ಅಭಿವೃದ್ಧಿ ಮಂಡಳಿಯಲ್ಲಿ ನಡೆಯುತ್ತಿರುವ ಅಕ್ರಮಗಳನ್ನು ಬಯಲು ಉನ್ನತ ಮಟ್ಟದ ತನಿಖಾ ತಂಡವನ್ನು ರಚನೆ ಮಾಡಬೇಕು. ಇದರಲ್ಲಿ ಶಾಮೀಲಾಗಿರುವ ಅಧಿಕಾರಿಗಳು ಹಾಗೂ ಜನಪ್ರತಿನಿಧಿಗಳ ಮೇಲೆ ಕಾನೂನು ಕ್ರಮ ಕೈಗೊಳ್ಳಬೇಕು. ನುಂಗಿ ನೀರು ಕುಡಿದಿರುವ ಅನುದಾನವನ್ನು ವಾಪಸ್ ಪಡೆದು ಸಾರ್ವಜನಿಕರ ಹಣ ಪೋಲಾಗದಂತೆ ಕ್ರಮಕ್ಕೆ ಮುಂದಾಗಬೇಕೆಂದು ಆಲ್ಕೋಡ್ ಒತ್ತಾಯಿಸಿದರು.
ಮುಖಂಡರಾದ ಖಾಜಾಹುಸೇನ್ ಪೂಲವಾಲೆ, ಫಯಾಜ್‍ಅಹ್ಮದ್ ಮನಿಯಾರ್, ಅನೀಸ್‍ಪಾಷಾ, ಅಮರೇಶ ವೆಂಕಟಾಪೂರ, ಇಬ್ರಾಹಿಂ ಗ್ಯಾರಂಟಿ ಸೇರಿ ಇತರರು ಇದ್ದರು.

