ತಾ.ಪಂ. ಕೆಡಿಪಿ ಸಭೆಯಲ್ಲಿ ಅಧಿಕಾರಿಗಳನ್ನು ತರಾಟೆಗೆ ತೆಗೆದುಕೊಂಡ ಶಾಸಕ ಹೂಲಗೇರಿ ಕೆಲಸ ಮಾಡಲು ಮನಸ್ಸಿಲ್ಲದೋರು ಕ್ಷೇತ್ರ ಬಿಟ್ಟು ಹೋಗಬಹುದು
ವರದಿ : ಖಾಜಾಹುಸೇನ್
ಲಿಂಗಸುಗೂರು : ಪ್ರತಿ ಸಲಾನೂ ಮೀಟಿಂಗ್‍ಗೆ ಬಂದಾಗ ಏನಾದ್ರೋಂದು ನೆಪ ಹೇಳ್ತಾನೇ ಇರ್ತೀರಲ್ರೀ. ಸರಕಾರದಿಂದ ಅನುದಾನ, ಸಕಾಲಕ್ಕೆ ಔಷಧ ಸಾಮಗ್ರಿ ಬಂದರೂ ಸಾರ್ವಜನಿಕರ ಆರೋಗ್ಯದ ಬಗ್ಗೆ ಕಾಳಜಿ ವಹಿಸುತ್ತಿಲ್ಲವೇಕೆ.? ತಾಲೂಕು ಅಧಿಕಾರಿಯಾಗಿ ಇನ್ನೊಬ್ಬರ ಮೇಲೆ ನೆಪ ಹೇಳುವುದು ಸರಿಯಲ್ಲ. ನಿಮಗೆ ಕೆಲಸ ಮಾಡಲು ಮನಸ್ಸಿಲ್ಲದೋರು ಕ್ಷೇತ್ರ ಬಿಟ್ಟು ಹೋಗಬಹುದು ಎಂದು ಶಾಸಕ ಡಿ.ಎಸ್.ಹೂಲಗೇರಿ ಅಧಿಕಾರಿಗಳನ್ನು ತರಾಟೆಗೆ ತೆಗೆದುಕೊಂಡ ಘಟನೆ ಶುಕ್ರವಾರ ತಾ.ಪಂ. ಸಭಾಂಗಣದಲ್ಲಿ ಜರುಗಿದ ಸಭೆಯಲ್ಲಿ ನಡೆಯಿತು.
ಸರಕಾರಿ ಆಸ್ಪತ್ರೆಗೆ ಬರುವ ರೋಗಿಗಳಿಗೆ ಸಕಾರಾತ್ಮಕವಾಗಿ ಸ್ಪಂಧಿಸದೇ ರೋಗಿಗಳನ್ನು ಖಾಸಗಿ ಆಸ್ಪತ್ರೆಗಳಿಗೆ ಕಳುಹಿಸುತ್ತಿರುವ ಸುದ್ದಿಗಳನ್ನು ಕೇಳಿದ್ದೇನೆ. ಸರಕಾರ ಎಲ್ಲಾ ರೀತಿಯ ಸವಲತ್ತುಗಳನ್ನು ನೀಡಿದರೂ ಯಾಕೆ ಖಾಸಗಿ ಆಸ್ಪತ್ರೆಗಳಿಗೆ ಕಳಿಸುತ್ತೀರಾ.? ನಿನಗೆ ಖಾಸಗಿ ಆಸ್ಪತ್ರೆಯವರು ಎಷ್ಟು ಕಮಿಷನ್ ಕೊಡ್ತಾರೆ.? ಎಂದು ಶಾಸಕ ಡಿ.ಎಸ್.ಹೂಲಗೇರಿ ತಾಲೂಕಾ ಆರೋಗ್ಯಾಧಿಕಾರಿ ಡಾ.ಅಮರೇಶ ಪಾಟೀಲ್‍ರಿಗೆ ಹಿಗ್ಗಾಮುಗ್ಗಾ ತರಾಟೆಗೆ ತೆಗೆದುಕೊಂಡರು.
ಕ್ಷೇತ್ರದ ಅಭಿವೃದ್ಧಿಗೆ ನೂರಾರು ಕೋಟಿ ರೂಪಾಯಿ ಅನುದಾನ ತಂದರೂ ಅಧಿಕಾರಿಗಳ ಬೇಜವಾಬ್ದಾರಿಯಿಂದ ಕಾಮಗಾರಿಗಳು ಕುಂಟಿತಗೊಳ್ಳುತ್ತಿವೆ. ಶಾಲಾ ಕಟ್ಟಡ, ಸಮುದಾಯ ಭವನ, ಸಿಸಿ ರಸ್ತೆಗಳು, ಅಂಗನವಾಡಿ ಕೇಂದ್ರಗಳು ಸೇರಿ ತಾಲೂಕಿನಲ್ಲಿ ಜಿಲ್ಲಾ ಪಂಚಾಯತ್ ಇಂಜಿನಿಯರಿಂಗ್ ವಿಭಾಗದ ಕಾಮಗಾರಿಗಳು ನೆನೆಗುದಿಗೆ ಬಿದ್ದಿವೆ. ನಿಗದಿತ ಅವಧಿಯೊಳಗೆ ಎಲ್ಲಾ ಕೆಲಸಗಳನ್ನು ಪೂರ್ತಿಸದಿದ್ದರೆ, ಕಟ್ಟುನಿಟ್ಟಿನ ಕ್ರಮಕ್ಕೆ ಶಿಫಾರಸ್ಸು ಮಾಡುವುದಾಗಿ ಅಧಿಕಾರಿಗಳಿಗೆ ಶಾಸಕರು ಎಚ್ಚರಿಕೆ ನೀಡಿದರು.
ವಿವಿಧ ಇಲಾಖೆಗಳ ಪ್ರಗತಿ ಪರಿಶೀಲನೆ ಕಾರ್ಯ ನಡೆಯಿತು. ಅಸಮರ್ಪಕ ಮಾಹಿತಿ ತಂದಿದ್ದ ಅಧಿಕಾರಿಗಳನ್ನು ತರಾಟೆಗೆ ತೆಗೆದುಕೊಂಡು ಎಚ್ಚರಿಕೆಯಿಂದ ಕಾರ್ಯ ನಿರ್ವಹಿಸುವಂತೆ ಸೂಚನೆ ನೀಡಲಾಯಿತು.
ತಾಲೂಕು ಪಂಚಾಯತ್ ಅದ್ಯಕ್ಷೆ ಶ್ವೇತಾ ಪಾಟೀಲ್, ಉಪಾದ್ಯಕ್ಷೆ ಯಲ್ಲಮ್ಮ ಬೋವಿ, ತಾ.ಪಂ. ಜಿ.ಪಂ. ಸದಸ್ಯ ಸಂಗಣ್ಣ ದೇಸಾಯಿ, ಕಾರ್ಯನಿರ್ವಾಹಕ ಅಧಿಕಾರಿ ಲಕ್ಷ್ಮಿದೇವಿ ಸೇರಿ ವಿವಿಧ ಇಲಾಖೆ ಅಧಿಕಾರಿಗಳು ಸಭೆಯಲ್ಲಿದ್ದರು.

