ಶಾಲಾ ಸಮಯಕ್ಕೆ ಬಸ್‍ಗಳಿಲ್ಲದೇ ಬಸವಳಿಯುತ್ತಿರುವ ವಿದ್ಯಾರ್ಥಿಗಳು ಸಾರಿಗೆ ಬಸ್‍ಗಳಿಗೆ ಜೋತಾಡುತ್ತಿದೆ ಭಾರತದ ಭವಿಷ್ಯ..!
ವರದಿ : ಖಾಜಾಹುಸೇನ್
ಲಿಂಗಸುಗೂರು : ವಿದ್ಯಾರ್ಥಿಗಳೇ ದೇಶದ ಭವಿಷ್ಯ, ಇಂದಿನ ಮಕ್ಕಳೇ ನಾಳಿನ ಪ್ರಜೆಗಳು ಇತ್ಯಾದಿಯಾಗಿ ಭಾಷಣಗಳಲ್ಲಿ ಜನ ಪ್ರತಿನಿಧಿಗಳು ಶಾಸ್ತ್ರಕ್ಕೆ ಬದನೆಕಾಯಿ ಎನ್ನುವಂತೆ ಪುಂಖಾನುಪುಂಕ ಹೇಳಿಕೆ ನೀಡಲಷ್ಟೇ ಸೀಮಿತವಾಗಿದೆ ಎನ್ನುವುದಕ್ಕೆ ಹತ್ತಾರು ಉದಾಹರಣೆಗಳು ಜೀವಂತವಾಗಿದೆ. ಸರಕಾರ ಶೈಕ್ಷಣಿಕ ಕ್ಷೇತ್ರಕ್ಕೆ ಹಲವಾರು ಯೋಜನೆಗಳನ್ನು ಜಾರಿಗೆ ತರುತ್ತಿರುವುದು ಸರಿಯಷ್ಟೆ. ಆದರೆ, ವಿದ್ಯಾರ್ಥಿಗಳು ಸಮಯಕ್ಕೆ ಸರಿಯಾಗಿ ಶಾಲಾ-ಕಾಲೇಜುಗಳಿಗೆ ತೆರಳಲು ಮಾತ್ರ ಅನುಕೂಲ ಇಲ್ಲದೇ ಇರುವ ಪರಿಣಾಮ ತಾಲೂಕಿನ ಹಳ್ಳಿಗಳಿಂದ ಕಲಿಯಲು ಬರುವ ಮಕ್ಕಳು ಮಾತ್ರ ಬಸವಳಿಯುತ್ತಿದ್ದಾರೆ.
ತಾಲೂಕಿನ ಈಚನಾಳ, ಹಟ್ಟಿ, ಗುಂತಗೋಳ, ನಾಗರಹಾಳ, ಜಾಗೀರನಂದಿಹಾಳ, ಆನೆಹೊಸೂರು, ಬೆಂಡೋಣಿ, ನೀರಲಕೇರಿ, ಅಡವಿಭಾವಿ ಗುಡದನಾಳ, ಮೇದಿನಾಪೂರ ಸೇರಿ ಹತ್ತಾರು ಗ್ರಾಮಗಳಿಂದ ನಿತ್ಯ ನೂರಾರು ವಿದ್ಯಾರ್ಥಿ, ವಿದ್ಯಾರ್ಥಿನಿಯರು ಲಿಂಗಸುಗೂರು ಪಟ್ಟಣಕ್ಕೆ ಶಾಲಾ-ಕಾಲೇಜುಗಳಿಗೆ ವಿದ್ಯಾರ್ಜನೆಗೆ ಬರುತ್ತಾರೆ. ಆದರೆ, ಬಹುತೇಕ ಗ್ರಾಮೀಣ ಪ್ರದೇಶದಿಂದ ಬರುವ ವಿದ್ಯಾರ್ಥಿಗಳಿಗೆ ಬಸ್‍ಗಳು ಸಮಯಕ್ಕೆ ಸರಿಯಾಗಿ ಬಾರದೇ ಇರುವ ಪರಿಣಾಮ ತೀವ್ರ ತೊಂದರೆ ಅನುಭವಿಸುವಂತಾಗಿದೆ. ಈ ಬಗ್ಗೆ ಸಾರಿಗೆ ಇಲಾಖೆ ಅಧಿಕಾರಿಗಳ ಗಮನಕ್ಕೆ ತಂದರೂ ಕ್ರಮ ಜರುಗಿಸದೇ ಇರುವುದು ವಿದ್ಯಾರ್ಥಿಗಳ ಪಾಲಿಗೆ ನುಂಗದ ತುತ್ತಾಗಿದೆ.
ಬೆಳಗ್ಗೆ 8 ಗಂಟೆಯಿಂದಲೇ ಕಾಲೇಜುಗಳು ಆರಂಭವಾಗುತ್ತವೆ. ಕ್ಲಾಸ್‍ಗೆ ಬರಲು ವಿದ್ಯಾರ್ಥಿಗಳು ನಸುಕಿನಲ್ಲಿಯೇ ಎದ್ದು ಸಿದ್ಧರಾಗಬೇಕು. ಕಾಲೇಜು ಸಮಯಕ್ಕೆ ತಲುಪಲು ಬಸ್‍ಗಳು ಗ್ರಾಮೀಣ ಪ್ರದೇಶಕ್ಕೆ ಬಾರದೇ ಇರುವುದು ವಿದ್ಯಾರ್ಥಿಗಳಲ್ಲಿ ದುಗುಡ ಮೂಡಿಸಿದೆ. ಮೊದಲ ಎರಡು ಅವಧಿ ಮುಗಿದ ಬಳಿಕ ಕಾಲೇಜಿಗೆ ಬರುತ್ತೇವೆ. ಮೊದಲೇ ಲಾಕ್‍ಡೌನ್‍ನಿಂದ ಅಭ್ಯಾಸದಲ್ಲಿ ಹಿನ್ನಡೆಯಾಗಿರುವುದು ನಮ್ಮ ಭವಿಷ್ಯದ ಬಗ್ಗೆ ಚಿಂತೆ ಮೂಡಿದೆ ಎನ್ನುವ ಮಾತುಗಳು ವಿದ್ಯಾರ್ಥಿ ವಲಯದಲ್ಲಿ ಕೇಳಿ ಬರುತ್ತಿದೆ.
ಸಾರಿಗೆ ಇಲಾಖೆ ಅಧಿಕಾರಿಗಳು ಹಾಗೂ ತಾಲೂಕಾಡಳಿತ ಇತ್ತ ಗಂಭೀರವಾಗಿ ಚಿಂತನೆ ಮಾಡುವ ಜೊತೆಗೆ ಗ್ರಾಮೀಣ ಪ್ರದೇಶದಿಂದ ಪಟ್ಟಣಕ್ಕೆ ಬರುವ ವಿದ್ಯಾರ್ಥಿಗಳಿಗೆ ಅನುಕೂಲವಾಗುವ ಸಮಯಕ್ಕೆ ಬಸ್‍ಗಳ ವ್ಯವಸ್ಥೆ ಮಾಡಿದರೆ, ಭಾರತದ ಭವಿಷ್ಯ ಉಜ್ವಲವಾಗುತ್ತದೆ ಎನ್ನುವ ಮಾತುಗಳು ಜನರಲ್ಲಿ ಕೇಳಿ ಬರುತ್ತಿವೆ. ಎಷ್ಟರ ಮಟ್ಟಿಗೆ ಅಧಿಕಾರಿಗಳು ಕಾರ್ಯೋನ್ಮುಖರಾಗುತ್ತಾರೋ? ಕಾದು ನೋಡೋಣ.
ಸಾರಿಗೆ ಇಲಾಖೆ ಅಧಿಕಾರಿಗಳು ವಿದ್ಯಾರ್ಥಿಗಳಿಗೆ ಸಮಯಕ್ಕೆ ಸರಿಯಾಗಿ ಬಸ್‍ಗಳ ವ್ಯವಸ್ಥೆ ಮಾಡಬೇಕು. ಶೈಕ್ಷಣಿಕ ಬೆಳವಣಿಗೆಗೆ ಅಧಿಕಾರಿಗಳು ಸಾಥ್ ನೀಡಬೇಕು. ಗ್ರಾಮೀಣ ಪ್ರದೇಶದ ಮಕ್ಕಳಿಗೆ ಅನುಕೂಲ ಮಾಡಿಕೊಡಬೇಕು. – ಶರಣಬಸವ ಈಚನಾಳ, ಸಮಾಜಸೇವಕ.

