ಚಿಂತೆ ಇಲ್ಲದವರಿಗೆ ಸಂತೆಯಲ್ಲೂ ನಿದ್ದೆಯಂತೆ ಬಿಜೆಪಿ ಸರಕಾರದ ಬಗ್ಗೆ ಕೆಪಿಸಿಸಿ ಕಾರ್ಯಾದ್ಯಕ್ಷ ಸತೀಶ ಜಾರಕಿಹೊಳಿ ವ್ಯಂಗ್ಯ
ಲಿಂಗಸುಗೂರು : ಕರೋನಾ ಮಹಾಮಾರಿಯಿಂದ ದೇಶವೇ ತತ್ತರಿಸಿ ಹೋಗಿದೆ. ಲಾಕ್‍ಡೌನ್ ಪರಿಣಾಮ ಜನಸಾಮಾನ್ಯರ ಬದುಕು ದುಸ್ತರವಾಗಿದೆ. ಇನ್ನೂ ಬದುಕನ್ನು ಸುಧಾರಿಸಿಕೊಳ್ಳಲು ಜನ ಹೆಣಗಾಡುತ್ತಿದ್ದಾರೆ. ಜನಸಾಮಾನ್ಯರ ಬಗ್ಗೆ ಕನಿಷ್ಠ ಕಕ್ಕುತಾಲಿ ಇಲ್ಲದೇ, ಅವರ ಜೀವನವನ್ನು ಸುಧಾರಣೆ ಮಾಡುವ ನಿಟ್ಟಿನಲ್ಲಿ ಯೋಚನೆ ಮಾಡದೇ ಕೇಂದ್ರ ಸರಕಾರ ಭವ್ಯವಾದ ಸಂಸತ್ ಭವನ ನಿರ್ಮಾಣಕ್ಕೆ ಮುಂದಾಗಿರುವುದು ಚಿಂತೆ ಇಲ್ಲದವ ಸಂತೆಯಲ್ಲೂ ನಿದ್ದೆ ಮಾಡುತ್ತಾನೆನ್ನುವ ಮಾತಿಗೆ ಸರಿಹೋಗುತ್ತದೆ ಎಂದು ಕೆಪಿಸಿಸಿ ಕಾರ್ಯಾಧ್ಯಕ್ಷ ಸತೀಶ್ ಜಾರಕಿಹೊಳಿ ವ್ಯಂಗ್ಯವಾಡಿದರು.
ಸ್ಥಳೀಯ ಕಾಂಗ್ರೆಸ್ ಕಚೇರಿಯಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, 8 ಸಾವಿರ ಕೋಟಿ ರೂಪಾಯಿಗಳ ವಿಮಾನವನ್ನು ಖರೀದಿಸಿದ್ದಾದರೂ ಯಾತಕ್ಕೆ ಎಂದು ಪ್ರಶ್ನಿಸಿದರು. ಕಳೆದ ಒಂದು ತಿಂಗಳಿನಿಂದ ದೆಹಲಿಯಲ್ಲಿ ಲಕ್ಷಾಂತರ ರೈತರು ಧರಣಿ ನಿರತರಾಗಿದ್ದರೂ ಪ್ರಧಾನಿಯವರು ಸ್ಪಂಧಿಸದಿರುವುದು ಸಂವಿಧಾನದ ವಿರೋಧ ಕೃತ್ಯವಾಗಿದೆ. ಮಾನವೀಯ ಮೌಲ್ಯಗಳನ್ನೇ ಸರಕಾರ ಕಳೆದುಕೊಂಡಂತೆ ಭಾಸವಾಗುತ್ತಿದೆ. ಇನ್ನು ರಾಜ್ಯ ಸರಕಾರವೂ ದಿನಕ್ಕೊಂದು ಕಾನೂನು ತರುತ್ತಿರುವುದು ಜನಸಾಮಾನ್ಯರನ್ನು ರೊಚ್ಚಿಗೆಬ್ಬಿಸುವಂತೆ ಮಾಡಿದೆ. ಸಮರ್ಥ, ಸ್ವತಂತ್ರವಾದ ತೀರ್ಮಾನಗಳನ್ನು ತೆಗೆದುಕೊಳ್ಳುವಲ್ಲಿ ರಾಜ್ಯ ಸರಕಾರ ವಿಫಲವಾಗುತ್ತಿದೆ ಎಂದು ರಾಜ್ಯ ಮತ್ತು ಕೇಂದ್ರ ಸರಕಾರಗಳ ಮೇಲೆ ಹರಿಹಾಯ್ದರು.
ಸಿಎಂ ಇಬ್ರಾಹಿಂ ಅವರು ಕಾಂಗ್ರೆಸ್ ಪಕ್ಷದಲ್ಲಿಯೇ ಇದ್ದಾರೆ. ಅವರು ದೇವೇಗೌಡರನ್ನು ಭೇಟಿಯಾದ ಮಾತ್ರಕ್ಕೆ ಪಕ್ಷ ಬಿಡುತ್ತಾರೆನ್ನುವುದು ಕೇವಲ ವದಂತಿಯಷ್ಟೆ ಎಂದು ಸ್ಪಷ್ಟಪಡಿಸಿದರು. ರಾಜ್ಯ ಸರಕಾರ ಕಾಂಗ್ರೆಸ್ ಶಾಸಕರ ಕ್ಷೇತ್ರಗಳ ಅಭಿವೃದ್ಧಿಗೆ ಅನುದಾನ ಬಿಡುಗಡೆ ಮಾಡದೇ, ಅಭಿವೃದ್ಧಿಯಲ್ಲಿ ತಾರತಮ್ಯ ಮಾಡುತ್ತಿದೆ ಎಂದು ಆರೋಪಿಸಿದರು. ಪಕ್ಕದ ಮಸ್ಕಿ ಕ್ಷೇತ್ರದ ಉಪಚುನಾವಣೆಯಲ್ಲಿ ಕಾಂಗ್ರೆಸ್ ಗೆಲುವು ನಿಶ್ಚಿತವಾಗಿದೆ. ಪಕ್ಷಕ್ಕೆ ದ್ರೋಹ ಬಗೆದು ಅಧಿಕಾರದ ಆಸೆಗೆ ಪಕ್ಷ ಬಿಟ್ಟು ಹೋದವರನ್ನು ಜನ ಕ್ಷಮಿಸುವುದಿಲ್ಲವೆಂದು ಹೇಳಿದರು.
ಶಾಸಕ ಡಿ.ಎಸ್.ಹೂಲಗೇರಿ, ಬ್ಲಾಕ್ ಅದ್ಯಕ್ಷ ಭೂಪನಗೌಡ ಕರಡಕಲ್, ಮುಖಂಡರಾದ ಬಸನಗೌಡ ತುರವಿಹಾಳ, ಪಾಮಯ್ಯ ಮುರಾರಿ ಸೇರಿ ಇತರರು ಈ ಸಂದರ್ಭದಲ್ಲಿ ಇದ್ದರು.

