ಮಸ್ಟ್ರಿಂಗ್ ಕೇಂದ್ರಕ್ಕೆ ಡಿಸಿ, ಎಸ್‌ಪಿ, ಎಡಿಸಿ ಭೇಟಿ- ಪರಿಶೀಲನೆ ಮತ ಪೆಟ್ಟಿಗೆಯೊಂದಿಗೆ ಮತದಾನ ಕೇಂದ್ರಕ್ಕೆ ತೆರಳಿದ ಸಿಬ್ಬಂದಿ
ರಾಯಚೂರು,ಡಿ.೨೧:- ಜಿಲ್ಲೆಯಲ್ಲಿ ಡಿ.೨೨ರ ಮಂಗಳವಾರ ಗ್ರಾಮ ಪಂಚಾಯತ್ ಸಾರ್ವತ್ರಿಕ ಚುನಾವಣೆಯ ಮೊದಲನೇ ಹಂತದ ಮತದಾನ ನಡೆಯಲಿರುವದರಿಂದ ಚುನಾವಣೆಗೆ ನೇಮಿಸಿದ ಪಿಆರ್‌ಓ, ಎಪಿಆರ್‌ಓ ಹಾಗೂ ಸಿಬ್ಬಂದಿಗಳು ಮತ ಪೆಟ್ಟಿಗೆಯೊಂದಿಗೆ ಮತದಾನ ನಡೆಯುವ ಕೇಂದ್ರಕ್ಕೆ ತೆರಳಿದರು.
ನಗರದ ಎಸ್‌ಆರ್‌ಪಿಎಸ್, ಎಲ್‌ವಿಡಿ ಕಾಲೇಜಿನಲ್ಲಿ ಚುನಾವಣೆಗೆ ನಿಯೋಜನೆಗೊಂಡಿರುವ ಸಿಬ್ಬಂದಿಯನ್ನು ಆಯಾ ಗ್ರಾಮ ಪಂಚಾಯತ್‌ಗಳಿಗೆ ಮತ ಪೆಟ್ಟಿಗೆಯೊಂದಿಗೆ ಕಳುಹಿಸಿಕೊಡುವ ವ್ಯವಸ್ಥೆ ಮಾಡಲಾಗಿತ್ತು. ರಾಯಚೂರು ತಾಲೂಕಿನ ೩೨ ಗ್ರಾಮ ಪಂಚಾಯತ್‌ಗಳಿಗೆ ಡಿ.೨೨ರಂದು ಮೊದಲನೇ ಹಂತದ ಮತದಾನ ನಡೆಯಲಿರುವುದದರಿಂದ ತಾಲೂಕಿನ ೩೨ ಗ್ರಾಮ ಪಂಚಾಯತ್‌ಗಳಿಗೆ ಸಿಬ್ಬಂದಿಯನ್ನು ಕಳುಹಿಸಲಾಯಿತು.
ಮತದಾನಕ್ಕೆ ಒಂದು ದಿನ ಮುಂಚಿತವಾಗಿ ಪಿಆರ್‌ಓ, ಎಪಿಆರ್‌ಓಗಳು ಮತ್ತು ಸಿಬ್ಬಂದಿ ವರ್ಗ ಮತ ಪೆಟ್ಟಿಗೆ ಸೇರಿದಂತೆ ಅಗತ್ಯ ಚುನಾವಣೆ ಸಾಮಾಗ್ರಿಯೊಂದಿಗೆ ತೆರಳಿದರು.
ವಾಹನ ವ್ಯವಸ್ಥೆ: ರಾಯಚೂರು, ದೇವದುರ್ಗ, ಮಾನ್ವಿ ಮತ್ತು ಸಿರವಾರ ತಾಲೂಕಿನ ೯೧ ಗ್ರಾಮ ಪಂಚಾಯತ್‌ಗಳಿಗೆ ಚುನಾವಣೆ ನಡೆಯಲಿರುವುದರಿಂದ ಜಿಲ್ಲಾಡಳಿತವು ಚುನಾವಣೆಗೆ ಸಕಲ ಸಿದ್ದತೆ ಮಾಡಿಕೊಂಡಿದೆ. ಸಿಬ್ಬಂದಿಯನ್ನು ಕರೆದೊಯ್ಯಲು ೩೭ ಕೆಎಸ್‌ಆರ್‌ಟಿಸಿ ಬಸ್, ೨೫ ಖಾಸಗಿ ಶಾಲಾ ವಾಹನ ಬಸ್ ಹಾಗೂ ೨೦ ಕ್ರೂ್ಯಸರ್ ವ್ಯವಸ್ಥೆ ಮಾಡಲಾಗಿದೆ.
ಬಂದೋಬಸ್ತ್: ಶಾಂತಿ ಸುವ್ಯವಸ್ಥೆಗಾಗಿ ೧೨೦೦ ಪೊಲೀಸ್ ಪೇದೆಗಳು, ೧ ಕೆಎಸ್‌ಆರ್‌ಪಿ, ೧೦ ಡಿಎಆರ್, ೪ ಡಿವೈಎಸ್‌ಪಿ, ೧೫ ಸಿಪಿಐ, ೨೨ ಪಿಎಸ್‌ಐ, ೧೫೦ ಗೃಹರಕ್ಷಕ ದಳವನ್ನು ಚುನಾವಣೆ ಬಂದೋಬಸ್ತ್ಗೆ ನಿಯೋಜಿಸಲಾಗಿದೆ. ಪ್ರತಿ ಬೂತ್‌ಗೆ ಒಬ್ಬ ಪೇದೆ, ಗೃಹ ರಕ್ಷಕದಳ ಹಾಗೂ ಅತಿ ಸೂಕ್ಷ ಮತಗಟ್ಟೆ ಕೇಂದ್ರಕ್ಕೆ ೨ ಮುಖ್ಯ ಪೇದೆ, ೧ ಗೃಹ ರಕ್ಷಕದಳ ಸಿಬ್ಬಂದಿಯನ್ನು ನೇಮಿಸಲಾಗಿದೆಂದು ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಪ್ರಕಾಶ ನಿಖಂ ಅವರು ತಿಳಿಸಿದರು.

ಪರೀಕ್ಷೆ: ಮಹಾಮಾರಿ ಕೋವಿಡ್-೧೯ ಸಾಂಕ್ರಾಮಿಕ ರೋಗ ಹರಡುವುದನ್ನು ತಡೆಯುವ ನಿಟ್ಟಿನಲ್ಲಿ ಮತದಾನಕ್ಕೆ ನಿಯೋಜನೆಗೊಂಡಿರುವ ಸಿಬ್ಬಂದಿಯು ಮಾಸ್ಕ್ ಧರಿಸಿ ಆಗಮಿಸಿದ್ದರು. ಕಾಲೇಜಿನ ಒಳಗೆ ಪ್ರವೇಶಿಸುವ ಮುನ್ನ ತಾಲೂಕು ಆರೋಗ್ಯ ಇಲಾಖೆ ವತಿಯಿಂದ ಥರ್ಮಲ್ ಸ್ಕ್ರೀನಿಂಗ್, ಸ್ಯಾನಿಟೈಜೇಷನ್ ಬಳಕೆ ಮಾಡಲು ಆಶಾ ಕಾರ್ಯಕರ್ತೆಯರನ್ನು ನೇಮಿಸಲಾಗಿತ್ತು. ತಾಲೂಕು ಆಡಳಿತ ವತಿಯಿಂದ ಸಿಬ್ಬಂದಿ ಹಾಗೂ ಪೊಲೀಸರಿಗೆ ಬೆಳಿಗ್ಗೆ ಉಪಹಾರ, ಊಟ, ಕುಡಿಯುವ ನೀರಿನ ವ್ಯವಸ್ಥೆ ಮಾಡಲಾಗಿತ್ತು.
ಜಿಲ್ಲಾಧಿಕಾರಿ ಆರ್.ವೆಂಕಟೇಶ ಕುಮಾರ್, ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಪ್ರಕಾಶ ನಿಖಂ, ಅಪರ ಜಿಲ್ಲಾಧಿಕಾರಿ ದುರಗೇಶ, ಡಿವೈಎಸ್‌ಪಿ ಶಿವನಗೌಡ ಪಾಟೀಲ್, ತಹಶೀಲ್ದಾರ ಡಾ.ಹಂಪಣ್ಣ ಅವರು ಎಸ್‌ಆರ್‌ಪಿಎಸ್ ಕಾಲೇಜಿಗೆ ಭೇಟಿ ನೀಡಿ ಚುನಾವಣೆ ಕರ್ತ್ಯವಕ್ಕೆ ನಿಯೋಜಿಸಿರುವ ಸಿಬ್ಬಂದಿಗಳು, ಮತಪೆಟ್ಟಿಗೆ, ಬ್ಯಾಲೆಟ್ ಪೇಪರ್, ವಿವಿಧ ಚುನಾವಣಾ ಸಾಮಗ್ರಿಗಳೊಂದಿಗೆ ಚುನಾವಣಾ ಕರ್ತವ್ಯಕ್ಕೆ ಮತಗಟ್ಟೆಗಳಿಗೆ ತೆರಳುವುದನ್ನು ವೀಕ್ಷಿಸಿದರು.

