ನೀತಿ ಸಂಹಿತೆ ಪಾಲನೆ, ಪಾರದರ್ಶಕ ಚುನಾವಣೆಗೆ ಸಕಲ ಸಿದ್ಧತೆ : ಡಿಸಿ
ಲಿಂಗಸುಗೂರು : ಪ್ರಸ್ತುತ ನಡೆಯುತ್ತಿರುವ ಗ್ರಾಮ ಪಂಚಾಯಿತಿ ಚುನಾವಣೆಯಲ್ಲಿ ಚುನಾವಣಾ ಆಯೋಗದ ನಿಯಮಾನುಸಾರ ನೀತಿ ಸಂಹಿತೆಯ ಪಾಲನೆ ಜೊತೆಗೆ ಪಾರದರ್ಶಕವಾಗಿ ಚುನಾವಣೆ ನಡೆಸಲು ಜಿಲ್ಲಾಡಳಿತ ಸಕಲ ಸಿದ್ಧತೆಗಳನ್ನು ಮಾಡಿಕೊಂಡಿದೆ ಎಂದು ಜಿಲ್ಲಾಧಿಕಾರಿ ಆರ್.ವೆಂಕಟೇಶಕುಮಾರ ಹೇಳಿದರು.
ಪಟ್ಟಣದ ಸರಕಾರಿ ಪದವಿ ಪೂರ್ವ ಕಾಲೇಜಿನಲ್ಲಿ ಆಯೋಜಿಸಿರುವ ಮತ ಎಣಿಕೆ ಕೇಂದ್ರಕ್ಕೆ ಭೇಟಿ ನೀಡಿದ ಬಳಿಕ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಜಿಲ್ಲೆಯಾದ್ಯಂತ ಪಂಚಾಯತ್ ಚುನಾವಣೆ ಪ್ರಕ್ರಿಯೆ ಕುರಿತು ಪ್ರತಿ ತಾಲೂಕು ಕೇಂದ್ರಕ್ಕೆ ಭೇಟಿ ನೀಡಲಾಗುತ್ತಿದೆ. ಅಲ್ಲಿನ ಅಧಿಕಾರಿಗಳ ಜತೆ ಮಾಹಿತಿ ಪಡೆಯಲಾಗುತ್ತಿದೆ. ಲಿಂಗಸುಗೂರು ತಾಲೂಕಿನಲ್ಲಿ ಮತಗಟ್ಟೆ ಕೇಂದ್ರಗಳು, ಮತಎಣಿಕೆ ಕೇಂದ್ರಗಳ ಸಿದ್ಧತೆ, ಅಧಿಕಾರಿ, ಸಿಬ್ಬಂದಿಗಳಿಗೆ ಚುನಾವಣೆ ತರಬೇತಿ, ಮಸ್ಟ್ರಿಂಗ್, ಡಿಮಸ್ಟ್ರಿಂಗ್ ತಯಾರಿ ಕುರಿತು ವರದಿ ಪಡೆಯಲಾಗಿದೆ.
ಚುನಾವಣಾ ನೀತಿ ಸಂಹಿತೆ ಪಾಲನೆ ಮತ್ತು ಪಾರದರ್ಶಕ ಚುನಾವಣೆ ನಡೆಸಲು ಅಗತ್ಯ ಕ್ರಮಗಳನ್ನು ಕೈಗೊಳ್ಳಲಾಗಿದ್ದು, ಅವಿರೋಧ ಆಯ್ಕೆ ವಿಷಯದಲ್ಲಿ ಒಬ್ಬರೇ ನಾಮಪತ್ರ ಸಲ್ಲಿಸಿದ್ದರೆ ಸಿಂಧುವಾಗುತ್ತದೆ. ಆದರೆ ಆಸೆ ಆಮಿಷ ಒಡ್ಡುವ ಪ್ರಕರಣಗಳು ರುಜುವಾತಾದರೆ ಕಾನೂನು ಕ್ರಮ ಕೈಗೊಳ್ಳಲಾಗುವುದೆಂದು ಎಚ್ಚರಿಸಿದರು.
ಸಹಾಯಕ ಆಯುಕ್ತ ರಾಜಶೇಖರ ಡಂಬಳ್, ತಹಸೀಲ್ದಾರ್ ಚಾಮರಾಜ ಪಾಟೀಲ್, ಡಿವೈಎಸ್‍ಪಿ ಎಸ್.ಎಸ್.ಹುಲ್ಲೂರು, ಸಿಪಿಐ ಮಹಾಂತೇಶ ಸಜ್ಜನ್ ಸೇರಿ ಇತರರು ಇದ್ದರು.

