ಗ್ಯಾಸ್ ಸಿಲೆಂಡರ್ ದರ ಕಡಿತಕ್ಕೆ ಆಗ್ರಹಿಸಿ ಪ್ರತಿಭಟನೆ
ಲಿಂಗಸುಗೂರು : ಕೊರೊನಾ ಸೊಂಕು ಬಡವರ ಬದುಕನ್ನೇ ಕಂಗಾಲು ಮಾಡಿದ ಈ ದುಸ್ಥಿತಿಯಲ್ಲಿ ಪದೇ ಪದೇ ಕೇಂದ್ರ ಸರಕಾರ ಅಡುಗೆ ಗ್ಯಾಸ್ ಸಿಲೆಂಡರ್ ದರವನ್ನು ಹೆಚ್ಚಳ ಮಾಡುತ್ತಿರುವುದು ಖಂಡನೀಯ. ಬಡವರಿಗೆ ಹೊರೆಯಾಗಿರುವ ದರ ಏರಿಕೆಯನ್ನು ಕೂಡಲೇ ಕಡಿತ ಮಾಡಬೇಕೆಂದು ಭಾರತ ಪ್ರಜಾಸತ್ತಾತ್ಮಕ ಯುವಜನ ಫೆಡರೇಷನ್ (ಡಿವೈಎಫ್‍ಐ) ಕಾರ್ಯಕರ್ತರು ಆಗ್ರಹಿಸಿದರು.
ಶಿರಸ್ತೆದಾರ ಶಾಲಂಸಾಬ್‍ರ ಮೂಲಕ ಪ್ರಧಾನಮಂತ್ರಿಗಳಿಗೆ ಮನವಿ ಸಲ್ಲಿಸಿದ ಅವರು, ವರ್ಷ ಆರಂಭದಿಂದ ಮೇಲಿಂದ ಮೇಲೆ ದರ ಹೆಚ್ಚಳವಾಗುತ್ತಿರುವ ಸಿಲಿಂಡರ್ ಬೆಲೆ ಈಗ 25 ರೂಪಾಯಿ ಹೆಚ್ಚಳದೊಂದಿಗೆ 896 ರೂಪಾಯಿ ಆಗಿದೆ. ಈ ತಿಂಗಳಲ್ಲೇ 1000 ರೂಪಾಯಿ ಆಗಲಿದೆ ಎನ್ನುವ ಆತಂಕ ಶುರುವಾಗಿದೆ. ಇನ್ನು ವಾಣಿಜ್ಯ ಗ್ಯಾಸ್ ಸಿಲಿಂಡರ್ ಬೆಲೆ 96 ರೂಪಾಯಿ ಏರಿಕೆಯಾಗಿದೆ. ಈಗ ಕಮರ್ಷಿಯಲ್ ಸಿಲಿಂಡರ್ ಬೆಲೆ 1666 ರೂಪಾಯಿ ಆಗಿದೆ. ಬಿಜೆಪಿ ಅಧಿಕಾರಕ್ಕೆ ಬಂದಾಗಿನಿಂದ ಬೆಲೆ ಏರಿಕೆ ಪೆಡಂಭೂತವಾಗಿ ಬಡ ಹಾಗೂ ಮಧ್ಯಮ ವರ್ಗವನ್ನು ಕಾಡುತ್ತಿದೆ. ಬೆಲೆ ಏರಿಕೆ ಮೂಲಕ ಕೇಂದ್ರ ಹಾಗೂ ರಾಜ್ಯ ಸರಕಾರಗಳು ಬಡವರ ಬದುಕಿನ ಮೇಲೆ ಬರೆ ಹಾಕುತ್ತಿವೆ.
ಕೂಡಲೇ ಹೆಚ್ಚಳವಾಗುತ್ತಿರುವ ಬೆಲೆಯನ್ನು ಇಳಿಕೆ ಮಾಡುವ ಮೂಲಕ ಬಡವರು, ಮಧ್ಯಮ ವರ್ಗದವರು ನೆಮ್ಮದಿಯಿಂದ ಬದುಕಲು ಅವಕಾಶ ಮಾಡಿಕೊಡಬೇಕೆಂದು ಪ್ರತಿಭಟನಾಕಾರರು ಒತ್ತಾಯಿಸಿದರು.
ಎಸ್‍ಎಫ್‍ಐ ಜಿಲ್ಲಾಧ್ಯಕ್ಷ ರಮೇಶ ವೀರಾಪೂರ, ಮುಖಂಡರಾದ ಶಿವರಾಜ ಕಪಗಲ್, ವಿರೇಶ ಚಿಕ್ಕಉಪ್ಪೇರಿ, ಶರಣಬಸವ, ಶಿವರಾಜ, ಹುಸೇನಪ್ಪ ಕಡೇಮನಿ, ಯಂಕಪ್ಪ ನಿಲೋಗಲ್, ಅಮರೇಸ ನಿಲೋಗಲ್, ಹುಸೇನ್‍ಸಾಬ ಸೇರಿ ಇತರರು ಇದ್ದರು.
