ರಾಯಚೂರು

ಶನಿವಾರ ಸಂತೆಯಲ್ಲಿ ಜನಜಂಗುಳಿ : ಜನತಾ ಕಫ್ರ್ಯೂಗೆ ಕ್ಯಾರೇ ಎನ್ನದ ಜನತೆ..!


ವರದಿ :ಖಾಜಾಹುಸೇನ್
ಲಿಂಗಸುಗೂರು : ಕೊರೊನಾ ಎರಡನೇ ಅಲೆಯ ಭೀಕರತೆ ರಾಜ್ಯದಲ್ಲಿ ಹೆಚ್ಚುತ್ತಿರುವ ಹಿನ್ನೆಲೆಯಲ್ಲಿ ಸರಕಾರ ಜನತಾ ಕಫ್ರ್ಯೂ ಜಾರಿಗೆ ತಂದಿರುವುದು ಸರಿಯಷ್ಟೆ. ಆದರೆ, ತಾಲೂಕಿನಲ್ಲಿ ಮಾತ್ರ ಇದೆಷ್ಟರ ಮಟ್ಟಿಗೆ ಪಾಲನೆಯಾಗುತ್ತಿದೆ ಎನ್ನುವುದೀಗ ಚರ್ಚೆಯ ವಿಷಯವಾಗಿದೆ.


ಶನಿವಾರದ ದಿನ ನಸುಕಿನಲ್ಲಿಯೇ ಸಂತೆಯಲ್ಲಿ ಸಗಟು ವ್ಯಾಪಾರ, ಚಿಲ್ಲರೆ ವ್ಯಾಪಾರದಲ್ಲೂ ಜನಜಂಗುಳಿ ಇತ್ತು. ಮಹಾಮಾರಿಯ ಭಯವಿಲ್ಲದೇ ಜನ ಗುಂಪಾಗಿ ವ್ಯಾಪಾರದಲ್ಲಿ ತೊಡಗಿರುವುದು ಕಂಡು ಬಂತಾದರೂ,
ಯಾವೊಬ್ಬ ಅಧಿಕಾರಿಗಳೂ ಇತ್ತ ಸುಳಿಯದೇ ಇರುವುದು
ಗಮನಾರ್ಹವಾಗಿತ್ತು.ಸ್ಥಳೀಯ ಎಪಿಎಂಸಿ ಪ್ರಾಂಗಣದಲ್ಲಿ ಸಗಟು ವ್ಯಾಪಾರ ನಡೆಯುತ್ತದೆ. ಈ ವೇಳೆ ಗ್ರಾಮೀಣ ಹಾಗೂ ಪಟ್ಟಣ ಸೇರಿ ನೂರಾರು ಜನ ರೈತರು,ವ್ಯಾಪಾರಿಗಳು ಜಮಾವಣೆಗೊಳ್ಳುತ್ತಾರೆ. ಮೂಟೆಗಟ್ಟಲೇ ತರಕಾರಿಗಳ
ವ್ಯಾಪಾರ ಮಾಡಲಾಗುತ್ತದೆ. ಹೋಲ್‍ಸೇಲ್ ಆಗಿ ಪಡೆದ ತರಕಾರಿಯನ್ನು ಸಂತೆಗೆ ಹೊತ್ತೊಯ್ದು ಮಾರಾಟ ಮಾಡುತ್ತಾರೆ. ಕಳೆದ ಶನಿವಾರ ಸಂತೆಯನ್ನು ರದ್ದು ಮಾಡಲಾಗಿತ್ತು. ನಿತ್ಯದ ತರಕಾರಿ ಮಾರುಕಟ್ಟೆಯನ್ನು ಸರಕಾರಿ ಕಾಲೇಜು ಮೈದಾನಕ್ಕೆ ಶಿಫ್ಟ್ ಮಾಡಲಾಗಿದೆ. ಶನಿವಾರದ ದಿನ ಬೆಳಗ್ಗೆ 6 ಗಂಟೆಯಾದರೂ ಕಾಲೇಜು
ಗೇಟ್ ತೆರೆಯದ ಕಾರಣ ವ್ಯಾಪಾರಿಗಳು ತಾವಿದ್ದ ಸ್ಥಳಗಳಿಗೆ ಕೆರಳಿ ಅಂಗಡಿಗಳನ್ನು ಆರಂಭಿಸಿಕೊಂಡು ವ್ಯಾಪಾರಕ್ಕೆ ಇಳಿದಿದ್ದಾರೆ. ಇದು ಗಮನಕ್ಕೆ ಬಂದ ಕೂಡಲೇ ಗೇಟ್ ತೆರೆಯಲಾಗಿದೆ. ಆಗ ಪುನಃ ಕಾಲೇಜು ಮೈದಾನಕ್ಕೆ ಅಂಗಡಿಗಳನ್ನು ಶಿಫ್ಟ್ ಮಾಡಲಾಗಿದೆ.


ಗ್ರಾಮೀಣ ಪ್ರದೇಶದಿಂದ ನಿತ್ಯದಂತೆ ಬರುವ ರೈತಾಪಿ ವರ್ಗ, ತಾವು ಬೆಳೆದ ತರಕಾರಿಯನ್ನು ಮಾರಾಟ ಮಾಡಲು ಮಟನ್ ಮಾರ್ಕೆಟ್ ಮುಂಭಾಗದ ರಸ್ತೆಯಲ್ಲಿಯೇ ಅಂಗಡಿಗಳನ್ನು ತೆರೆದು ವ್ಯಾಪಾರಕ್ಕಿಳಿದಿದ್ದಾರೆ. ಕೊರೊನಾ ಸಂಕ್ರಮಣಕ್ಕೆ ಕ್ಯಾರೇ ಎನ್ನದ ಜನ ಮಾತ್ರ ಜೋರಾಗಿ ವ್ಯಾಪಾರದಲ್ಲಿ ತೊಡಗಿಕೊಳ್ಳುವ ಮೂಲಕ, ಎಲ್ಲಾ ನಿಯಮಗಳನ್ನೂ ಗಾಳಿಗೆ ತೋರಿರುವುದು ದುರಂತವೇ ಸರಿ.


ನಿಗದಿತ ಸಮಯದ ಬಳಿಕ ಫೀಲ್ಡಿಗಳಿಯುವ ಪೋಲಿಸರು
ಮತ್ತು ಪುರಸಭೆ ಅಧಿಕಾರಿ, ಸಿಬ್ಬಂಧಿಗಳು ಜನಸಂದಣಿ ಇರುವಾಗಲೇ ಆಯಾ ಸ್ಥಳಗಳಿಗೆ ಭೇಟಿ ನೀಡಿ ಎಚ್ಚರಿಕೆ ನೀಡಲು ಮುಂದಾಗಬೇಕಿದೆ. ದಿನ ಬೆಳಗಾದರೆ ಕಾಲೇಜು ಮೈದಾನದಲ್ಲಿ ತರಕಾರಿ ಕೊಳ್ಳಲು ಜನ ಗುಂಪಾಗಿ
ಸೇರುತ್ತಾರೆ. ಸಗಟು ವ್ಯಾಪಾರದ ಸ್ಥಳವಾದ ಎಪಿಎಂಸಿ ಆವರಣದಲ್ಲಿಯೂ ಜನರ ಗುಂಪು ಹೆಚ್ಚಾಗಿರುತ್ತದೆ. ಈ ಬಗ್ಗೆ ಕೂಡಲೇ ಸಂಬಂಧಿಸಿದ ಅಧಿಕಾರಿಗಳು ಕಾರ್ಯಪ್ರವೃತ್ತರಾಗಬೇಕು. ಇಲ್ಲವಾದಲ್ಲಿ ಇದುವೇ ಬರುವ ದಿನಗಳಲ್ಲಿ ಸಂಕಷ್ಟಕ್ಕೆ ಹಾದಿಯಾಗಬಾರದು ಎನ್ನುವ ಕಳಕಳಿ ಈ ವರದಿಯದ್ದಾಗಿದೆ.

Leave a Reply

Your email address will not be published. Required fields are marked *

error: Content is protected !!