ಜಾಲತಾಣದಲ್ಲಿ ಕಾಂಗ್ರೆಸ್-ಬಿಜೆಪಿ ಕಾರ್ಯಕರ್ತರ ಟೀಕಾ ಪ್ರಹಾರ 2017 ರಲ್ಲಿಯೇ ಯೋಜನಾ ಪ್ರಾಧಿಕಾರಕ್ಕೆ ಶ್ರಮಿಸಿದ್ದ ಮಾನಪ್ಪ ವಜ್ಜಲ್..!
ಲಿಂಗಸುಗೂರು : ನಮ್ಮ ಸಾಹೇಬರು ಯೋಜನಾ ಪ್ರಾಧಿಕಾರಕ್ಕೆ ಶ್ರಮಿಸಿದ್ದು, ನಮ್ಮವರು ಈ ಕೆಲಸ ಮಾಡಿದ್ದು ಎಂದು ತಾಲೂಕಿನಲ್ಲೀಗ ಕಾಂಗ್ರೆಸ್-ಬಿಜೆಪಿ ಮುಖಂಡರು ಕಾರ್ಯಕರ್ತರು ಸಾಮಾಜಿಕ ಜಾಲತಾಣದಲ್ಲಿ ಪರಸಪರ ಟೀಕಾ ಪ್ರಹಾರ ನಡೆಸಿದ್ದಾರೆ. ಇದಕ್ಕೆ ತೆರೆ ಎನ್ನುವಂತೆ 2017ರಲ್ಲಿ ಶಾಸಕರಾಗಿದ್ದ ಮಾನಪ್ಪ ವಜ್ಜಲ್‍ರು ವಿಧಾನ ಸಭೆಯಲ್ಲಿ (ದಿನಾಂಕ : 21-11-2017) ಲಿಂಗಸಗೂರು ಪಟ್ಟಣದಲ್ಲಿ ಯೋಜನಾ ಪ್ರಾಧಿಕಾರ ರಚನೆ ಬಗ್ಗೆ ನಗರಾಭಿವೃದ್ಧಿ ಇಲಾಖೆಗೆ ಪ್ರಶ್ನೆ ಕೇಳಿದ್ದ ಪ್ರತಿ ಹಾಗೂ ಅದಕ್ಕೆ ಅಂದಿನ ನಗರಾಭಿವೃದ್ಧಿ ಮತ್ತು ಹಜ್ ಸಚಿವ ರೋಷನ್‍ಬೇಗ್ ಅವರು ನೀಡಿದ ಉತ್ತರದ ದಾಖಲೆಗಳು ಪತ್ರಿಕೆಗೆ ಲಭ್ಯವಾಗಿದ್ದು, ಇದರಿಂದ ಮಾನಪ್ಪ ವಜ್ಜಲ್‍ರೇ ಮೊದಲಿಗೆ ಟೌನ್‍ಪ್ಲಾನ್‍ಗೆ ಪ್ರಸ್ತಾವನೆ ಸಲ್ಲಿಸಿದ್ದು ಎನ್ನುವುದು ಮನಗಾಣಬಹುದಾಗಿದೆ.
ಕ್ಷೇತ್ರದ ಅಭಿವೃದ್ಧಿಗೆ ಶಾಸಕರಾದವರು ಶ್ರಮಿಸುವುದು ಆಧ್ಯ ಕರ್ತವ್ಯ. ಈ ನಿಟ್ಟಿನಲ್ಲಿ ಹಾಲಿ ಶಾಸಕ ಡಿ.ಎಸ್.ಹೂಲಗೇರಿಯವರೂ ಕ್ಷೇತ್ರದಲ್ಲಿ ನಾನಾ ಅಭಿವೃದ್ಧಿ ಕಾರ್ಯಗಳಿಗೆ ಚಾಲನೆ ನೀಡಿ ಕೋಟಿಗಟ್ಟಲೇ ಅನುದಾವನ್ನು ಸರಕಾರದಿಂದ ತರುತ್ತಿದ್ದಾರೆ. ಇವರಿಗೂ ಕ್ಷೇತ್ರದ ಪರವಾದ ಕಾಳಜಿ ಇರುವುದರಿಂದ 2019ರಲ್ಲಿ ಯೋಜನಾ ಪ್ರಾಧಿಕಾರ ಮಂಜೂರಿಗೆ ಪತ್ರವನ್ನೂ ಬರೆದಿದ್ದಾರೆ. ಅಂದುಕೊಂಡಂತೆ ಪ್ರಾದಿಕಾರ ರಚನೆಯಾಗಿರುವ ಆದೇಶ ಹೊರಬಿದ್ದ ಬಳಿಕ ಬಿಜೆಪಿ-ಕಾಂಗ್ರೆಸ್ ಮುಖಂಡರುಗಳು ತಮ್ಮ ನಾಯಕರುಗಳೇ ಇದನ್ನು ಮಾಡಿದ್ದೆಂದು ಬೆನ್ನು ಚಪ್ಪರಿಸಿಕೊಳ್ಳುತ್ತಿರುವುದೀಗ ತಾಲೂಕಿನಲ್ಲಿ ಹೊಸ ಟ್ರೆಂಡ್ ಆಗಿ ಮಾರ್ಪಟ್ಟಿದೆ.
ಲಿಂಗಸುಗೂರು ಕ್ಷೇತ್ರವನ್ನು ರಾಜ್ಯದಲ್ಲಿಯೇ ಮಾದರಿಯನ್ನಾಗಿ ಮಾಡುವ ಪಣ ತೊಟ್ಟಿರುವ ಉಭಯ ನಾಯಕರುಗಳು ಸರಕಾರದ ಮೇಲೆ ಒತ್ತಡ ಹೇರಿ ಕ್ಷೇತ್ರದ ಅಭಿವೃದ್ಧಿಗೆ ತಮ್ಮದೇ ಆದ ವರ್ಚಸ್ಸಿನಿಂದ ಕೆಲಸ ಕಾರ್ಯಗಳನ್ನು ಮಾಡುತ್ತಿರುವುದು ಸರಿಯಷ್ಟೆ. ಆದರೆ, ಜನರನ್ನು ಗೊಂದಲಕ್ಕೀಡುವ ರೀತಿಯಲ್ಲಿ ಉಭಯ ಪಕ್ಷಗಳ ಮುಖಂಡರುಗಳು ಜಾಲತಾಣದಲ್ಲಿ ತಾವೇ ಶ್ರೇಷ್ಠ, ತಾವೇ ಈ ಕೆಲಸ ಮಾಡಿದ್ದು ಎಂದು ಹೇಳಿಕೊಂಡು ಬೆನ್ನು ಚಪ್ಪರಿಸಿಕೊಳ್ಳುತ್ತಿದ್ದಾರೆ. ಎಲ್ಲವನ್ನೂ ಸೂಕ್ಷ್ಮವಾಗಿ ಗಮನಿಸುತ್ತಿರುವ ಮತದಾರ ಪ್ರಭು ಮಾತ್ರ ಮೌನಕ್ಕೆ ಜಾರಿದ್ದಾನೆ.
ಕೋವಿಡ್ ಸಂಧಿಗ್ಧ ಪರಿಸ್ಥಿತಿಯಲ್ಲಿ ಹಲವು ಉಳ್ಳವರು ಜನರ ಸಂಕಷ್ಟಕ್ಕೆ ಕೈಲಾದಷ್ಟೂ ಸಹಾಯ ಮಾಡಲು ಮುಂದಾಗುತ್ತಿರುವುದು ಒಂದೆಡೆಯಾದರೆ, ಕೆಲವರು ಮಾತ್ರ ತಮ್ಮ ತಮ್ಮ ನಾಯಕರುಗಳ ಓಲೈಕೆ ಮಾಡುತ್ತಲೇ ಜಾಲತಾಣಗಳಲ್ಲಿ ಸಕ್ರೀಯರಾಗಿದ್ದಾರೆ.
ಪರ-ವಿರೋಧ ಚರ್ಚೆಗಳಿಗೆ ತೆರೆ ಎಳೆಯುವಂತೆ ಮಾಜಿ ಶಾಸಕ ಮಾನಪ್ಪ ವಜ್ಜಲ್‍ರು ತಮ್ಮ ಶಾಸಕತ್ವದ ಅವಧಿಯಲ್ಲಿ ಕೇಳಿದ್ದ ಪ್ರಶ್ನೆ ಹಾಗೂ ಅದಕ್ಕೆ ಉತ್ತರ ಎರಡೂ ಪ್ರತಿಗಳು ದೊರೆತಿವೆ.

