ಲಿಂಗಸುಗೂರಿಗೆ ಟೌನ್ ಪ್ಲಾನ್.. ಮಾಜಿ ಶಾಸಕ ವಜ್ಜಲ್ ಶ್ರಮದ ಫಲವೇ..?
ಲಿಂಗಸುಗೂರು : ಲಿಂಗಸುಗೂರು ಪಟ್ಟಣಕ್ಕೆ ಕರ್ನಾಟಕ ನಗರ ಮತ್ತು ಗ್ರಾಮಾಂತರ ಯೋಜನಾ ಅಧಿನಿಯಮ 1961ನ್ನು ವಿಸ್ತರಿಸಿ ಸ್ಥಳೀಯ ಯೋಜನಾ ಪ್ರದೇಶವೆಂದು ಘೋಷಿಸಿ ಪ್ರತ್ಯೇಕ ಯೋಜನಾ ಪ್ರಾಧಿಕಾರ ರಚಿಸುವ ಪ್ರಸ್ತಾವನೆಯನ್ನು ಪರಿಶೀಲಿಸುವಂತೆ ರಾಯಚೂರಿನ ನಗರ ಮತ್ತು ಗ್ರಾಮಾಂತರ ಯೋಜನೆಯ ಸಹಾಯಕ ನಿರ್ದೇಶಕರಿಗೆ ಕಳೆದ ನಾಲ್ಕು ವರ್ಷಗಳ ಹಿಂದೆ ಬರೆದಿರುವ ಪತ್ರ ಪತ್ರಿಕೆಗೆ ಲಭ್ಯವಾಗಿದ್ದು, ಇದು ಮಾಜಿ ಶಾಸಕ, ಹಾಲಿ ಹಟ್ಟಿ ಚಿನ್ನದಗಣಿ ಅದ್ಯಕ್ಷ ಮಾನಪ್ಪ ವಜ್ಜಲ್‍ರು ಅಂದು ಸಲ್ಲಿಸಿದ್ದ ಪ್ರಸ್ತಾವನೆಯ ಫಲವಾಗಿಯೇ ಇಂದು ಲಿಂಗಸುಗೂರು ಪಟ್ಟಣಕ್ಕೆ ಸ್ಥಳೀಯ ಯೋಜನಾ ಪ್ರದೇಶವೆಂದು ಆದೇಶವಾಗಿದೆಯೇ? ಎನ್ನುವ ಪ್ರಶ್ನೆಗಳೀಗ ಹುಟ್ಟಿಕೊಳ್ಳುತ್ತಿವೆ.
ಮೊನ್ನೆಯಷ್ಟೇ ಹಾಲಿ ಪುರಸಭೆಯ ವ್ಯಾಪ್ತಿಯ ಜೊತೆಗೆ ಯಲಗಲದಿನ್ನಿ ಗ್ರಾಮವನ್ನು ಸೇರ್ಪಡಿಸಿ ಲಿಂಗಸುಗೂರು ಪಟ್ಟಣವನ್ನು ಸ್ಥಳೀಯ ಯೋಜನಾ ಪ್ರದೇಶವೆಂದು ಜಾರಿಗೆ ಬರುವಂತೆ ಸರಕಾರ ಘೋಷಣೆ ಮಾಡಿದೆ ಎಂದು ನಗರಾಭಿವೃದ್ಧಿ ಇಲಾಖೆಯ ಕಾರ್ಯದರ್ಶಿ ಲತಾ ಕೆ. ಅಧಿಸೂಚನೆ ಹೊರಡಿಸಿದ ಬೆನ್ನಲ್ಲೇ ತಾಲೂಕಿನಲ್ಲಿ ಕಾಂಗ್ರೆಸ್ ಮತ್ತು ಬಿಜೆಪಿ ಮುಖಂಡರು-ಕಾರ್ಯಕರ್ತರು ಇದನ್ನು ನಾವು ಮಾಡಿದ್ದೇವೆ, ನಾವು ಮಾಡಿದ್ದೇವೆ ಎಂದು ಹೇಳಿಕೊಂಡು ಸಾಮಾಜಿಕ ಜಾಲತಾಣದಲ್ಲಿ ಪೋಸ್ಟ್‍ಗಳನ್ನು ಮಾಡುತ್ತಲೇ ಇದ್ದಾರೆ.
2019ರಲ್ಲಿ ಹಾಲಿ ಶಾಸಕ ಡಿ.ಎಸ್.ಹೂಲಗೇರಿಯವರು ಸರಕಾರಕ್ಕೆ ಬರೆದಿರುವ ಪತ್ರದ ಪ್ರತಿ ಸಾಮಾಜಿಕ ಜಾಲತಾಣದಲ್ಲಿ ಹರಿದಾಡುತ್ತಿದೆ. ಆದರೆ, ಕಳೆದ ನಾಲ್ಕು ವರ್ಷಗಳ ಹಿಂದೆ ಬಂದ ಪ್ರಸ್ತಾವನೆಗೆ ಸ್ಥಳ ಪರಿಶೀಲನೆ ಮಾಡಿ ವರದಿ ಕಳುಹಿಸುವಂತೆ 24ನೇ ಜುಲೈ 2017ರಂದು ನಾಗರಾಜ ಸರಕಾರದ ಅಧೀನ ಕಾರ್ಯದರ್ಶಿ ನಗರಾಭಿವೃದ್ಧಿ ಇಲಾಖೆ ಇವರು, ರಾಯಚೂರಿನ ನಗರ ಮತ್ತು ಗ್ರಾಮಾಂತರ ಯೋಜನೆಯ ಸಹಾಯಕ ನಿರ್ದೇಶಕರಿಗೆ ಪತ್ರ ಬರೆದಿದ್ದಾರೆ.
ಆ ಪತ್ರದಲ್ಲಿ ಲಿಂಗಸುಗೂರು ಪಟ್ಟಣಕ್ಕೆ ಕರ್ನಾಟಕ ನಗರ ಮತ್ತು ಗ್ರಾಮಾಂತರ ಯೋಜನಾ ಅಧಿನಿಯಮ 1961ನ್ನು ವಿಸ್ತರಿಸಿ ಸ್ಥಳೀಯ ಯೋಜನಾ ಪ್ರದೇಶವೆಂದು ಘೋಷಿಸಿ ಪ್ರತ್ಯೇಕ ಯೋಜನಾ ಪ್ರಾಧಿಕಾರ ರಚಿಸುವ ಪ್ರಸ್ತಾವನೆಯನ್ನು ಪರಿಶೀಲಿಸಲು ಪ್ರಸ್ತಾವಿತ ಸ್ಥಳೀಯ ಯೋಜನಾ ಪ್ರದೇಶದ ಕ್ಷೇತ್ರ. ಅನುಬಂಧ-2ರಲ್ಲಿ ಕೆಲವು ನ್ಯೂನತೆಗಳು ಬಂದಿರುವ ಪ್ರಯುಕ್ತ ಇದನ್ನು ಮತ್ತೊಮ್ಮೆ ಪರಿಶೀಲಿಸಿ, ಸರಿಪಡಿಸಿ ಸಲ್ಲಿಸುವುದು. ಯೋಜನಾ ಪ್ರಾಧಿಕಾರ ರಚನೆಯಾದಲ್ಲಿ ಪ್ರಾಧಿಕಾರದ ಆರ್ಥಿಕ ನಿರ್ವಹಣೆಯ ಮೂಲಗಳ ಬಗ್ಗೆ ವಿವರವಾರ ವರದಿಯನ್ನು ಕೇಳಲಾಗಿದೆ.
ಬಂದ ಪತ್ರಕ್ಕೆ ಉತ್ತರ ಬರೆದು ಪೂರಕ ಮಾಹಿತಿಯನ್ನು ಒದಗಿಸಿ ಕಾರ್ಯರೂಪಕ್ಕೆ ಬರಲು ನಾಲ್ಕು ವರ್ಷಗಳೇ ಕಳೆದಿವೆ. ನಾಲ್ಕು ವರ್ಷಗಳ ಹಿಂದೆ ಶಾಸಕರಾಗಿದ್ದ ಮಾನಪ್ಪ ವಜ್ಜಲ್‍ರ ಶ್ರಮದ ಫಲವೇ ಇಂದು ಲಿಂಗಸುಗೂರು ಪಟ್ಟಣಕ್ಕೆ ಪ್ರತ್ಯೇಕವಾಗಿ ಯೋಜನಾ ಪ್ರಾಧಿಕಾರ ರಚನೆಯಾಗಲು ಸಾಧ್ಯವೆನ್ನಬಹುದು.
ಪಟ್ಟಣ ಅಭಿವೃದ್ಧಿಗೆ ಹಾಲಿ ಮತ್ತು ಮಾಜಿ ಶಾಸಕರುಗಳ ಕೊಡುಗೆಯೂ ಇದೆ. ನಾವೇ ಮಾಡಿದ್ದೇವೆಂದು ಉಭಯ ಪಕ್ಷಗಳ ಮುಖಂಡರುಗಳೂ ಜಾಲತಾಣಗಳಲ್ಲಿ ಜಾಹೀರಾತುಗಳನ್ನು ಪೋಸ್ಟ್ ಮಾಡುತ್ತಲೇ ಇದ್ದಾರೆ. ಆದರೆ, ಮತದಾರ ಪ್ರಭು ಮಾತ್ರ ಎಲ್ಲವನ್ನೂ ಮೌನವಾಗಿಯೇ ಅವಲೋಕನ ಮಾಡುತ್ತಿದ್ದಾನೆ.

