ರಾಯಚೂರು

ಸುಕನ್ಯಾ ಸಮೃದ್ಧಿ ಯೋಜನೆ : ಸ್ವಂತ ಖರ್ಚಿನಲ್ಲಿ ಮಕ್ಕಳಿಗೆ ಪಾಸ್‍ಬುಕ್

ವರದಿ : ಖಾಜಾಹುಸೇನ್
ಲಿಂಗಸುಗೂರು : ಕೇವಲ ದುಡ್ಡಿದ್ದರೆ ಸಾಲದು, ಅದನ್ನು ಸನ್ಮಾರ್ಗದಲ್ಲಿ ಖರ್ಚು ಮಾಡುವ ಮನಸ್ಸೂ ಇರಬೇಕು ಎನ್ನುವ ಮಾತುಗಳು ಹಿರಿಯರ ಬಾಯಲ್ಲಿ ಆಗಾಗ್ಗೆ ಕೇಳುತ್ತಿರುತ್ತೇವೆ. ಇದಕ್ಕೆ ಪೂರಕ ಎನ್ನುವಂತೆ ಹಣದಲ್ಲೂ, ಗುಣದಲ್ಲೂ ಶ್ರೀಮಂತಿಕೆಯನ್ನು ಮೆರೆಯುವ ಮೂಲಕ ಬಡವರಿಗೆ ಸಹಾಯ-ಸಹಕಾರ ಮಾಡುವತ್ತಲೇ ಸದಾ ಚಿತ್ತ ನೆಟ್ಟುಕೊಂಡು ಸಮಾಜ ಸೇವೆಯಲ್ಲಿ ತೊಡಗಿಸಿಕೊಂಡಿರುವ ಬಂಗಾರದ ಮನುಷ್ಯನೆಂದೇ ಗುರುತಿಸಲ್ಪಟ್ಟಿರುವ ಹಟ್ಟಿಚಿನ್ನದ ಗಣಿ ಅದ್ಯಕ್ಷ ಮಾನಪ್ಪ ವಜ್ಜಲ್‍ರ ಕಾರ್ಯಗಳು ಜನಮೆಚ್ಚುಗೆಗೆ ಪಾತ್ರವಾಗಿವೆ.


ಕೇಂದ್ರ ಸರಕಾರದ ಹಲವು ಯೋಜನೆಗಳು ಬಡವರ ಪರವಾಗಿವೆ. ಆದರೆ, ಅವುಗಳನ್ನು ಸದ್ಬಳಕೆ ಮಾಡಿಕೊಳ್ಳುವಲ್ಲಿ ಕೆಲವರು ಹಿಂದೇಟು ಹಾಕುತ್ತಿದ್ದಾರೆನ್ನುವ ಮಾತುಗಳೂ ಕೇಳಿ ಬರುತ್ತಿವೆ. ಕೇಂದ್ರ ಸರಕಾರದ ಮಹತ್ವದ ಸುಕನ್ಯಾ ಸಮೃದ್ಧಿ ಯೋಜನೆಯಡಿ ನೂರಾರು ಮಕ್ಕಳಿಗೆ ತಮ್ಮ ಸ್ವಂತ ಹಣ ಸುಮಾರು 5 ಲಕ್ಷ ರೂಪಾಯಿಗಳನ್ನು ವ್ಯಯಮಾಡಿ ಪಾಸ್‍ಬುಕ್ ಮಾಡಿಕೊಟ್ಟಿದ್ದಾರೆ. ಪ್ರತಿಮಗುವಿಗೂ 11 ವರ್ಷ ಹಣ ಕಟ್ಟುವ ಯೋಜನೆ ಇದಾಗಿದ್ದು ಇದಕ್ಕೆ ತಗಲುವ ವೆಚ್ಚವನ್ನು ಭರಿಸುವುದಾಗಿ ವಜ್ಜಲ್ ಹೇಳಿಕೊಂಡಿರುವುದು ಅವರ ಹೃದಯ ಶ್ರೀಮಂತಿಕೆಗೆ ಸಾಕ್ಷಿಯಾಗಿದೆ.


ಶೈಕ್ಷಣಿಕ ಕ್ಷೇತ್ರದಲ್ಲಿ ತಮ್ಮದೇ ಆದ ಕೊಡುಗೆ ನೀಡಬೇಕೆನ್ನುವ ಹಂಬಲದಿಂದ ಜ್ಞಾನದೀವಿಗೆ ಕಾರ್ಯಕ್ರಮದಡಿ ನೂರಾರು ಎಸ್.ಎಸ್.ಎಲ್.ಸಿ. ಮಕ್ಕಳಿಗೆ ತಮ್ಮ ಸ್ವಂತ ಖರ್ಚಿನಲ್ಲಿ ಉಚಿತವಾಗಿ ಟ್ಯಾಬ್‍ಗಳನ್ನು ಮಾನಪ್ಪ ಅವರು ವಿತರಣೆ ಮಾಡಿದ್ದಾರೆ.


ಬರುವ ದಿನಗಳಲ್ಲಿ ಶೈಕ್ಷಣಿಕವಾಗಿ ದೊಡ್ಡದೊಂದು ಸಂಸ್ಥೆಯನ್ನು ಕಟ್ಟಬೇಕೆನ್ನುವ ಕನಸು ಹೊತ್ತುಕೊಂಡಿರುವ ವಜ್ಜಲ್‍ರು, ಈಗಾಗಲೇ ಕಳೆದ ಆರು ವರ್ಷಗಳಿಂದ ಶಿಕ್ಷಣ ಸಂಸ್ಥೆಯೊಂದನ್ನು ನಡೆಸಿಕೊಂಡು ಬರುತ್ತಿದ್ದಾರೆ. ಖಾಸಗಿ ಶಾಲೆಗಳಲ್ಲಿ ಡೊನೇಶನ್ ಹಾವಳಿಯೇ ಹೆಚ್ಚು ಇರುವ ಈ ಕಾಲಘಟ್ಟದಲ್ಲಿ ಬಡವರು, ಮಧ್ಯಮ ವರ್ಗದ ಮಕ್ಕಳೇ ಹೆಚ್ಚಾಗಿರುವ ಇವರ ಶಿಕ್ಷಣ ಸಂಸ್ಥೆಯಲ್ಲಿ ಕನಿಷ್ಠ ಶುಲ್ಕವನ್ನು ನಿಗದಿಪಡಿಸಲಾಗಿದೆ. ಅದರಲ್ಲೇ ಸಮವಸ್ತ್ರ, ಮಕ್ಕಳಿಗೆ ಪುಸ್ತಕ, ಬ್ಯಾಗ್‍ಗಳನ್ನೂ ನೀಡುವ ಇವರ ಸೇವೆ ಬಡ ಪಾಲಕರಿಗೆ ವರದಾನವಾಗಿರುವುದಂತೂ ಸುಳ್ಳಲ್ಲ.
ಕೊಡುಗೈ ದಾನಿ ಎನಿಸಿಕೊಂಡಿರುವ ವಜ್ಜಲ್ ಕುಟುಂಬದ ಕಾರ್ಯಕ್ರಮಗಳು ಸದಾ ಹರಿಯುವ ನೀರಿನಂತೆ ನಡೆಯುತ್ತಲೇ ಇರುತ್ತವೆ. ಅಧಿಕಾರ ಇರಲಿ, ಇಲ್ಲದೇ ಇರಲಿ ಬಡವರ, ಸಮಾಜ ಸೇವೆಯ ಕಾಳಜಿ ಮಾತ್ರ ಇವರಿಂದ ದೂರವಾಗಿಲ್ಲ ಎನ್ನುವುದಕ್ಕೆ ಇತ್ತೀಚಿಗಿನ ಬೆಳವಣಿಗೆಗಳೇ ಸಾಕ್ಷೀಕರಿಸುತ್ತವೆ.


ಸಮಾಜದಲ್ಲಿ ಬಹಳಷ್ಟು ಜನ ಸಿರಿವಂತರಿದ್ದಾರೆ. ಆದರೆ ಸಾಮಾಜಿಕ ಕಳಕಳಿ, ಕಾಳಜಿ ಉಳ್ಳವರು ಬೆರಳಷ್ಟು ಜನರು ಮಾತ್ರ ಇದ್ದಾರೆ. ವಜ್ಜಲ್‍ರ ಸಮಾಜಸೇವೆಯ ಕಾರ್ಯಕ್ರಮಗಳು ಇತರರಿಗೂ ಪ್ರೇರಣೆಯಾಗಿ ಬಡವರ ಸಮಸ್ಯೆಗಳು ಒಂದೊಂದಾಗಿ ಬಗೆಹರಿದು ಸಮಾಜದಲ್ಲಿ ಸಮಸ್ಯೆಗಳು ದೂರಾದರೆ ಸಾಕಲ್ಲವೇ ನೆಮ್ಮದಿಯ ಬದುಕಿಗೆ..

Leave a Reply

Your email address will not be published. Required fields are marked *

error: Content is protected !!