ನದಾಫ್/ಪಿಂಜಾರ ಅಭಿವೃದ್ಧಿ ನಿಗಮ ಸ್ಥಾಪನೆಗೆ ಸರಕಾರದ ಮೇಲೆ ಒತ್ತಡ ಹಾಕಲು ಆಗ್ರಹ
ಲಿಂಗಸುಗೂರು : ರಾಜ್ಯದಲ್ಲಿ ಅತಿ ಹಿಂದುಳಿದ ನದಾಫ್/ಪಿಂಜಾರ ಸಮುದಾಯದ ಸರ್ವತೋಮುಖ ಅಭಿವೃದ್ಧಿಗಾಗಿ ನಿಗಮ ಮಂಡಳಿ ಸ್ಥಾಪನೆ ಮಾಡಲು ಸರ್ಕಾರಕ್ಕೆ ಶಿಫಾರಸ್ಸು ಮಾಡುವಂತೆ ವಿರೋಧ ಪಕ್ಷದ ನಾಯಕ ಸಿದ್ಧರಾಮಯ್ಯರವರಿಗೆ ಕರ್ನಾಟಕ ರಾಜ್ಯ ನದಾಫ್ ಪಿಂಜಾರ ಸಂಘದ ರಾಜ್ಯ ಅಧ್ಯಕ್ಷ ಹೆಚ್. ಜಲೀಲ್ ಸಾಬ್ ನೇತೃತ್ವದ ನಿಯೋಗ ಆಗ್ರಹಿಸಿದರು.
ಬೆಂಗಳೂರಿನಲ್ಲಿ ಮನವಿ ಸಲ್ಲಿಸಿದ ಅವರು, ನದಾಫ್ ಸಮುದಾಯವು ಶೈಕ್ಷಣಿಕವಾಗಿ, ರಾಜಕೀಯವಾಗಿ, ಆರ್ಥಿಕವಾಗಿ, ಸಾಮಾಜಿಕವಾಗಿ ಹಿಂದುಳಿದ ಸಮುದಾಯವಾಗಿದೆ. ಇಂದಿಗೂ ಗ್ರಾಮೀಣ ಭಾಗದಲ್ಲಿ ಸಮುದಾಯ ಬಾಂಧವರು ಕೂಲಿ, ನಾಲಿ ಮಾಡುತ್ತಾ ಸಂಕಷ್ಟದ ಬದುಕು ಸಾಗಿಸುತ್ತಿದ್ದಾರೆ. ಆಧುನಿಕತೆಯ ಹೊಡೆತಕ್ಕೆ ಕುಲಕಸುಬು ದೂರವಾಗಿದೆ. ಪಿಂಜಾರ ಸಮುದಾಯದ ಆರ್ಥಿಕ ಪರಿಸ್ಥಿತಿ ಸುಧಾರಣೆಗೆ ಹಾಗೂ ಸಮುದಾಯದ ಯುವ ಪೀಳಿಗೆಯ ಸ್ವಾವಲಂಬಿ ಬದುಕು ಕಟ್ಟಿಕೊಳ್ಳಲು ಸಹಕಾರಿಯಾಗುವ ನಿಟ್ಟಿನಲ್ಲಿ ನಿಗಮ ಮಂಡಳಿಯ ಅಗತ್ಯವಿದ್ದು, ಈ ಬಗ್ಗೆ ಸದನದಲ್ಲಿ ಸರಕಾರಕ್ಕೆ ಮನವರಿಕೆ ಮಾಡಿ ಕೊಡುವ ಮೂಲಕ ಹಿಂದುಳಿದ ವರ್ಗದ ಹಿತ ಕಾಯಲು ಮನವಿ ಮಾಡಿದರು.
ಸಂಘದ ರಾಜ್ಯ ಪ್ರಧಾನ ಕಾರ್ಯದರ್ಶಿ ರಿಯಾಜ್ ಸಲೀಮ್ ನಾಗ್ತೆ, ರಾಜ್ಯ ಸಂಘಟನಾ ಕಾರ್ಯದರ್ಶಿ ಡಾ.ಚಮನ್ ಫರಜಾನ ಸೇರಿ ಇತರರು ಇದ್ದರು.

