ಮೂರು ಖಾಸಗಿ ವಿಶ್ವ ವಿದ್ಯಾಲಯಗಳಿಗೆ ಅನುಮತಿ ನೀಡಿದ ರಾಜ್ಯ ಸರಕಾರದ ಕ್ರಮಕ್ಕೆ ಎಸ್ಎಫ್ಐ ಖಂಡನೆ
ಬೆಂಗಳೂರು: ಕರ್ನಾಟಕ ರಾಜ್ಯದ ಮುಖ್ಯಮಂತ್ರಿ ಯಡಿಯೂರಪ್ಪ ನೇತೃತ್ವದ ರಾಜ್ಯ ಬಿಜೆಪಿ ಸರಕಾರವು ನಿನ್ನೆ ಅಧಿವೇಶನದಲ್ಲಿ ೧೧ ವಿಧೇಯಕಗಳನ್ನು ಮಂಡಿಸಿದ್ದು, ಏಟ್ರಿಯಾ, ವಿದ್ಯಾಶಿಲ್ಪ ಸೇರಿದಂತೆ ಮೂರು ಖಾಸಗಿ ವಿಶ್ವ ವಿದ್ಯಾಲಯಗಳಿಗೆ ಅನುಮತಿ ನೀಡಿರುವುದು ಖಂಡನೀಯವಾಗಿದೆ.
ಉನ್ನತ ಶಿಕ್ಷಣವನ್ನು ಮಾರಾಟದ ಸರಕನ್ನಾಗಿಸುವ ಬಿಜೆಪಿ ಸರಕಾರದ ಈ ತೀರ್ಮಾನವನ್ನು ವಿರುದ್ಧ ಭಾರತ ವಿದ್ಯಾರ್ಥಿ ಫೆಡರೇಷನ್ (ಎಸ್ಎಫ್ಐ) ರಾಜ್ಯ ಸಮಿತಿಯು ತೀವ್ರವಾಗಿ ವಿರೋಧಿಸುತ್ತದೆ. ಖಾಸಗಿ ವಿ.ವಿಗಳಿಗೆ ಅನುಮತಿ ನೀಡಿರುವುದನ್ನು ಕೂಡಲೇ ವಾಪಸ್ ಪಡೆಯಬೇಕು ಇಲ್ಲವಾದಲ್ಲಿ ರಾಜ್ಯದ ವಿದ್ಯಾರ್ಥಿ-ಯುವಜನರು ಹೋರಾಟಕ್ಕೆ ಮುಂದಾಗಬೇಕಾಗುತ್ತೆಂದು ಎಚ್ಚರಿಸುತ್ತದೆ.
ಈ ಹಿಂದೆಯೂ ರಾಜ್ಯದಲ್ಲಿ ಅಧಿಕಾರ ನಡೆಸಿದಾಗಲೆಲ್ಲ ಬಿಜೆಪಿ ಸರಕಾರ ಖಾಸಗಿ ವಿ.ವಿಗಳಿಗೆ ಅನುಮತಿ ನೀಡುತ್ತಲೇ ಬಂದಿದೆ. ಸರಕಾರಿ ವಿಶ್ವ ವಿದ್ಯಾಲಯಗಳು ಸಮರ್ಪಕ ಅನುದಾನದ ಕೊರತೆ, ಉಪನ್ಯಾಸಕರ ಕೊರತೆ ಸೇರಿದಂತೆ ಕನಿಷ್ಠ ಮೂಲಭೂತ ಸೌಲಭ್ಯಗಳಿಂದ ನರಳುತ್ತಿರುವ ಗಂಭೀರ ಸಮಸ್ಯೆ ಪರಿಹರಿಸುವ ಬದಲಾಗಿ ಶ್ರೀಮಂತರಿಗೆ ಮಣೆ ಹಾಕಿ, ಉನ್ನತ ಶಿಕ್ಷಣವನ್ನು ಬಡ ಹಾಗೂ ಮಧ್ಯಮ ವರ್ಗದ ವಿದ್ಯಾರ್ಥಿಗಳಿಗೆ ವಂಚಿಸುವ ಪ್ರಕ್ರಿಯೆ ನಡೆಸುತ್ತಲೇ ಬಂದಿದೆ.
ರಾಜ್ಯ ಸರಕಾರದ ಈ ಜನವಿದ್ರೋಹಿ ನೀತಿಯು ಉಳ್ಳವರಿಗೆ ಮಾತ್ರ ಉನ್ನತ ಶಿಕ್ಷಣವೆಂಬಂತೆ ಮಾಡಿದೆ. ನಾಡಿನ ಪ್ರಜ್ಞಾವಂತರೆಲ್ಲ ಸರಕಾರದ ಈ ನಡೆಯನ್ನು ವಿರೋಧಿಸಿ ಐಕ್ಯ ಚಳುವಳಿಗೆ ಮುಂದಾಗಬೇಕೆಂದು ಭಾರತ ವಿದ್ಯಾರ್ಥಿ ಫೆಡರೇಷನ್ ಫೆಡರೇಷನ್ (ಎಸ್ಎಫ್ಐ) ಕರ್ನಾಟಕ ರಾಜ್ಯ ಸಮಿತಿ ನೇತೃತ್ವದಲ್ಲಿ ರಾಜ್ಯವ್ಯಾಪಿ ಹೋರಾಟಕ್ಕೆ ಮುಂದಾಗಬೇಕಾಗುತ್ತದೆಂದು ರಾಜ್ಯ ಅಧ್ಯಕ್ಷರಾದ ಅಮರೇಶ ಕಡಗದ, ರಾಜ್ಯ ಕಾರ್ಯದರ್ಶಿ ವಾಸುದೇವ ರೆಡ್ಡಿ, ರಾಜ್ಯ ಉಪಾಧ್ಯಕ್ಷರಾದ ಶಿವಕುಮಾರ ಮ್ಯಾಗಳಮನಿ, ದಿಲೀಪ್, ಭೀಮನಗೌಡ ಸುಂಕೇಶ್ವಾರಳ ಜಂಟಿ ಪತ್ರಿಕಾ ಹೇಳಿಕೆಯ ಮೂಲಕ ಆಗ್ರಹಿಸಿದ್ದಾರೆ.

