ರಾಯಚೂರು

ಈಚನಾಳ ಗ್ರಾ.ಪಂ. ನರೇಗಾ ಕೂಲಿಕಾರ ಈಗ ಪಂಚಾಯಿತಿ ಸದಸ್ಯ..!

ವರದಿ : ಖಾಜಾಹುಸೇನ್
ಲಿಂಗಸುಗೂರು : ಅದೃಷ್ಟ ಎಲ್ಲಿ, ಹೇಗೆ ಯಾರಿಗೆ ಒಲಿಯುತ್ತೋ ಗೊತ್ತಾಗದು. ಎನ್ನುವ ಮಾತು ಬಹುಶಃ ಈ ಘಟನೆಗೆ ಪ್ರಸ್ತುತ ಎನಿಸುತ್ತದೆ. ದಿನಬೆಳಗಾದರೆ ಗ್ರಾಮ ಪಂಚಾಯಿತಿ ವ್ಯಾಪ್ತಿಯಲ್ಲಿ ನರೇಗಾದಡಿ ಕೂಲಿ ಕೆಲಸ ಮಾಡುವ ವ್ಯಕ್ತಿ ಮೊನ್ನೆ ನಡೆದ ಪಂಚಾಯತ್ ಚುನಾವಣೆಯಲ್ಲಿ ಜನರ ಅಪೇಕ್ಷೆ ಮೇರೆಗೆ ಸ್ಪರ್ಧಿಸಿ ಅದೇ ಗ್ರಾಮ ಪಂಚಾಯಿತಿಗೆ ಸದಸ್ಯರಾಗಿ ಆಯ್ಕೆಯಾಗಿರುವುದು ಪ್ರಜಾಪ್ರಭುತ್ವ ವ್ಯವಸ್ಥೆಯಲ್ಲಿ ನಿಯತ್ತಿಗೂ ಕಾಲ ಉಳಿದುಕೊಂಡಿಗೆ ಎನ್ನುವುದನ್ನು ಸಾಬೀತು ಪಡಿಸಿದಂತಾಗಿದೆ.


ಲಕ್ಷಗಟ್ಟಲೇ ಹಣವನ್ನು ಖರ್ಚು ಮಾಡಿಕೊಂಡು ಗುಂಡು-ತುಂಡುಗಳು ಸೇರಿ ಮತದಾರರಿಗೆ ಇನ್ನಿಲ್ಲದ ಆಮಿಶಗಳನ್ನು ಒಡ್ಡುವ ಮೂಲಕ ರಾಜಕೀಯ ಚದುರಂಗ ಆಡುವ ನಾಯಕರುಗಳ ಮಧ್ಯೆ ಒಬ್ಬ ಸಾಮಾನ್ಯ ಕೂಲಿಕಾರ ಯಾವುದೇ ಆಡಂಬರ, ಅಬ್ಬರದ ಪ್ರಚಾರ ಮಾಡದೇ ಸರಳವಾಗಿಯೇ ಮತಯಾಚನೆ ಮಾಡುವ ಮೂಲಕ ಪಂಚಾಯಿತಿಗೆ ಆಯ್ಕೆಯಾಗಿರುವುದು ಗ್ರಾಮಸ್ಥರಲ್ಲೂ ಸಂತಸ ಮೂಡಿಸಿದೆ.
ತಾಲೂಕಿನ ಈಚನಾಳ ಗ್ರಾಮ ಪಂಚಾಯಿತಿ ವ್ಯಾಪ್ತಿಯ ಮರಿಯಪ್ಪ ಕಟ್ಟಿಮನಿ ಎನ್ನುವಾತನೇ ಈ ಅದೃಷ್ಟವಂತ ಸದಸ್ಯರಾಗಿದ್ದಾರೆ.


ಯಾವುದೇ ರಾಜಕೀಯ ಗೊಡವೆ ಬೇಡವೆಂದುಕೊಂಡು ತಮ್ಮ ಪಾಲಿಗೆ ತಾವು ದುಡಿದು ಬಂದ ದುಡ್ಡಲ್ಲಿ ಜೀವನ ಕಟ್ಟಿಕೊಳ್ಳುತ್ತಿದ್ದ ಮರಿಯಪ್ಪ ಕಟ್ಟಿಮನಿಯವರ ಸರಳತೆ ಕಂಡು ಮತದಾರರೇ ಒಮ್ಮತದಿಂದ ಚುನಾವಣೆಗೆ ಸ್ಪರ್ಧಿಸಲು ಅಣಿಮಾಡಿದ್ದರು. ಚುನಾವಣೆ ಪ್ರಚಾರದ ವೇಳೆಯಲ್ಲೂ ಎದುರಾಳಿಗಳು ನೀಡುವ ಆಮಿಶಗಳಿಗೆ ಮಣೆ ಹಾಕದ ಮತದಾರರು ಮಾತ್ರ ಮರಿಯಪ್ಪಗೆ ಆಶೀರ್ವದಿಸಿರುವುದು ಸಮಾಧಾನದ ಸಂಗತಿಯಾಗಿದೆ.


ಭ್ರಷ್ಟಾಚಾರ, ದುಡ್ಡಿನ ದರ್ಪ ಚುನಾವಣೆಯಲ್ಲಿ ಮೇಲುಗೈ ಸಾಧಿಸುತ್ತಿರುವ ಈ ಸಂದರ್ಭದಲ್ಲಿ ಸಾಮಾನ್ಯರಲ್ಲಿ ಸಾಮಾನ್ಯರಿಗೂ ಆಡಳಿತದ ಚುಕ್ಕಾಣಿ ಹಿಡಿಯುವ ಯೋಗ ಬರುತ್ತಿದೆ ಎಂದರೆ ಬಹುಶಃ ಇದು ಡಾ.ಬಾಬಾ ಸಾಹೇಬ ಅಂಬೇಡ್ಕರ್ ಅವರ ಸಂವಿಧಾನದ ಫಲವಾಗಿ ದುಡಿಯುವ ವರ್ಗವೂ ಅಧಿಕಾರದ ಭಾಗವಾಗಲು ಸಾಧ್ಯವಾಗಿದೆ.


ಒಬ್ಬ ಸಾಮಾನ್ಯ ಕೂಲಿಕಾರ್ಮಿಕನಾಗಿದ್ದ ಮರಿಯಪ್ಪನವರ ಸರಳತೆಗೆ ಜನರು ಮನಸೋತು ಅವರನ್ನು ಪಂಚಾಯಿತಿ ಸದಸ್ಯರನ್ನಾಗಿ ಆಯ್ಕೆ ಮಾಡಿರುವುದು ಸಂತೋಷದ ವಿಷಯ. ಆಡಳಿತ ವರ್ಗದಲ್ಲಿ ಕೆಳಮಟ್ಟದಿಂದ ಬರುವ ಜನರು ಇದ್ದರೆ ಕೂಲಿಕಾರ್ಮಿಕರ, ಬಡವರ ಬವಣೆಗಳನ್ನು ಅರಿತು ಗ್ರಾಮಕ್ಕೆ ಒಳಿತು ಮಾಡಲು ಸಾಧ್ಯವಾದೀತು. ಈ ನಿಟ್ಟಿನಲ್ಲಿ ನಮ್ಮ ಪಂಚಾಯಿತಿ ಸದಸ್ಯರೆಲ್ಲರೂ ಒಗ್ಗಟ್ಟಾಗಿ ಗ್ರಾಮದ ಮತ್ತು ಪಂಚಾಯಿತಿ ಹಳ್ಳಿಗಳ ಅಭಿವೃದ್ಧಿಗೆ ಶ್ರಮಿಸಲು ಮುಂದಾಗಲಿ ಎನ್ನುವ ಶುಭಹಾರೈಕೆ ನಮ್ಮದಾಗಿದೆ. -ಶರಣಬಸವ ಈಚನಾಳ, ಸಮಾಜ ಸೇವಕ.

Leave a Reply

Your email address will not be published. Required fields are marked *

error: Content is protected !!