11 ಕೋಟಿ 93 ಸಾವಿರ ರೂ. ಹಟ್ಟಿ ಚಿನ್ನದಗಣಿ ಡಿವಿಡೆಂಟ್ ಫಂಡ್ ಸರಕಾರಕ್ಕೆ ಸಲ್ಲಿಕೆ ಕಾರ್ಮಿಕರ ರಕ್ಷಣೆ, ಕಂಪನಿ ಅಭಿವೃದ್ಧಿಗೆ ಸಹಕರಿಸಲು ಸಿಎಂಗೆ ವಜ್ಜಲ್ ಮನವಿ
ಲಿಂಗಸುಗೂರು : ನಾಡಿನ ಪ್ರತಿಷ್ಠಿತ ಹಟ್ಟಿ ಚಿನ್ನದ ಗಣಿಯ 2019-20 ನೇ ಸಾಲಿನ 11 ಕೋಟಿ 93 ಸಾವಿರ ರೂಪಾಯಿ ಡಿವಿಡೆಂಟ್ ಫಂಡ್ ಅನ್ನು ಅಧ್ಯಕ್ಷ ಮಾನಪ್ಪ ವಜ್ಜಲ್ ಅವರ ನೇತೃತ್ವದಲ್ಲಿ ಸರಕಾರಕ್ಕೆ ಸಲ್ಲಿಸಲಾಯಿತು.
ಸಿಎಂ ಕಚೇರಿಗೆ ಮಂಗಳವಾರ ತೆರಳಿದ ಚಿನ್ನದ ಗಣಿಯ ಅಧ್ಯಕ್ಷ ಮಾನಪ್ಪ ವಜ್ಜಲ್ ನೇತೃತ್ವದ ತಂಡ ಮುಖ್ಯಮಂತ್ರಿ ಬಿಎಸ್ ಯಡಿಯೂರಪ್ಪ ನವರಿಗೆ ಚೆಕ್ಕನ್ನು ನೀಡಿದರು.
ಕಂಪನಿಯ ಅಭಿವೃದ್ಧಿಗೆ ಮತ್ತು ಕಾರ್ಮಿಕರಿಗೆ ರಕ್ಷಣೆ ಹಟ್ಟಿ ಗ್ರಾಮದ ಸುತ್ತಮುತ್ತ ವಾಸವಿರುವ ಜನರಿಗೆ ಮೂಲ ಸೌಕರ್ಯ ಕಲ್ಪಿಸುವುದು, ಕಾರ್ಮಿಕರ ಹಿತಾಸಕ್ತಿ ಕಾಯ್ದುಕೊಳ್ಳುವುದು, ಕಂಪನಿ ಪ್ರದೇಶದಲ್ಲಿ ಗುಣಮಟ್ಟದ ರಸ್ತೆ ಕುಡಿಯುವ ನೀರು ವಸತಿ, ಕಾರ್ಮಿಕರಿಗೆ ಮೂಲಸೌಕರ್ಯ ಒದಗಿಸಿ ಕೊಡುವುದು ಸೇರಿ ಕಂಪನಿ ಅಭಿವೃದ್ಧಿಗೆ ಸರಕಾರ ಮುಂದಾಗಬೇಕು ಎಂದು ಮಾನಪ್ಪ ವಜ್ಜಲ್ ಮುಖ್ಯಮಂತ್ರಿಗಳಿಗೆ ಮನವಿ ಮಾಡಿದರು.
ಮನವಿಗೆ ಸ್ಪಂದಿಸಿದ ಸಿಎಂ

ಹಟ್ಟಿ ಚಿನ್ನದ ಗಣಿಯ ಅಧ್ಯಕ್ಷರ ಮನವಿಗೆ ಸ್ಪಂದಿಸಿದ ಮುಖ್ಯಮಂತ್ರಿ ಯಡಿಯೂರಪ್ಪನವರು, ಕಾರ್ಮಿಕರ ಹಿತಾಸಕ್ತಿ ಕಾಯ್ದುಕೊಳ್ಳಲು ಸರಕಾರ ಬದ್ಧವಾಗಿದೆ. ಕಂಪನಿ ಅಭಿವೃದ್ಧಿಗೆ ಹಾಗೂ ಕಾರ್ಮಿಕರ ಏಳಿಗೆಗಾಗಿ ಸವಲತ್ತುಗಳನ್ನು ನೀಡಲು ಕ್ರಮ ಕೈಗೊಳ್ಳುವುದಾಗಿ ಭರವಸೆ ನೀಡಿದರು.
ಈ ಸಂದರ್ಭದಲ್ಲಿ
ಭೂ ಮತ್ತು ಗಣಿ ವಿಜ್ಞಾನ ಸಚಿವ ಸಿ.ಸಿ. ಪಾಟೀಲ್,
ಮುಖ್ಯ ಕಾರ್ಯದರ್ಶಿ ಕುಮಾರ್ ನಾಯ್ಕ, ಹಟ್ಟಿ ಚಿನ್ನದ ಗಣಿ ಕಂಪನಿಯ ವ್ಯವಸ್ಥಾಪಕ ನಿರ್ದೇಶಕಿ ಸಲ್ಮಾ ಪಾಹಿಮಾ, ಕಂಪನಿಯ ಹಣಕಾಸು ವಿಭಾಗದ ಮುಖ್ಯಸ್ಥರು ಹಾಗೂ ಆಡಳಿತ ಮಂಡಳಿಯ ಮುಖ್ಯಸ್ಥರು ಉಪಸ್ಥಿತರಿದ್ದರು.

