ಕೋವಿಡ್ ಪರೀಕ್ಷೆ ಕಡ್ಡಾಯಕ್ಕೆ ಮೇಟಿ ಒತ್ತಾಯ
ಲಿಂಗಸುಗೂರು : ಗ್ರಾಮೀಣ ಭಾಗದಲ್ಲಿ ಕೋವಿಡ್ ಸೊಂಕು ಉಲ್ಬಣಿಸುತ್ತಿರುವ ಹಿನ್ನೆಲೆಯಲ್ಲಿ ಆಸ್ಪತ್ರೆಗೆ ಚಿಕಿತ್ಸೆಗೆಂದು ಬರುವವರಿಗೆ ಕಡ್ಡಾಯವಾಗಿ ಕೋವಿಡ್ ಪರೀಕ್ಷೆ ನಡೆಸಲು ಖಾಸಗಿ ಆಸ್ಪತ್ರೆಗಳಿಗೆ ಸೂಚನೆ ನೀಡಬೇಕೆಂದು ಬ್ಲಾಕ್ ಕಾಂಗ್ರೆಸ್ ಮಾಜಿ ಅದ್ಯಕ್ಷ ಶರಣಪ್ಪ ಮೇಟಿ ಒತ್ತಾಯಿಸಿದ್ದಾರೆ.
ಈ ಬಗ್ಗೆ ಜಿಲ್ಲಾಧಿಕಾರಿಗಳಿಗೆ ಪತ್ರ ಬರೆದಿರುವ ಅವರು, ಕೋವಿಡ್ ಲಕ್ಷಣಗಳಿದ್ದಾಗ್ಯೂ ಜ್ಞಾನದ ಕೊರತೆಯಿಂದ ಗ್ರಾಮೀಣ ಪ್ರದೇಶದ ಜನರು ಖಾಸಗಿ ಆಸ್ಪತ್ರೆಗಳಲ್ಲಿ ಜ್ವರ, ನೆಗಡಿ, ಕೆಮ್ಮು ಎಂದು ಆರೋಗ್ಯ ತಪಾಸಣೆ ಮಾಡಿಸಿಕೊಂಡು ಚಿಕಿತ್ಸೆ ಪಡೆಯುತ್ತಿದ್ದಾರೆ. ಖಾಸಗಿ ಆಸ್ಪತ್ರೆಗಳ ವೈದ್ಯರು ರಕ್ತ ಪರೀಕ್ಷೆ ಮಾಡಿಸಿ ಟೈಫಾಯ್ಡ ಜ್ವರ ಎಂದು ಹೇಳಿ ಚಿಕಿತ್ಸೆ ನೀಡುತ್ತಿರುವುದು ಸಾಮಾನ್ಯವಾಗಿದೆ. ಆದರೆ, ಚಿಕಿತ್ಸೆ ಫಲಕಾರಿ ಆಗದೇ ಬಹುತೇಕರು ಸರಕಾರಿ ಆಸ್ಪತೆಗಳತ್ತ ಧಾವಿಸುವುದು ಕಂಡು ಬರುತ್ತಿದೆ. ಕೋವಿಡ್ ಸೊಂಕಿನಿಂದ ಬಳಲುತ್ತಿದ್ದರೂ ಅವರಿಗೆ ಸೂಕ್ತ ಪರೀಕ್ಷೆ ನಡೆಸದೇ ಅನ್ಯ ಚಿಕಿತ್ಸೆ ನೀಡುತ್ತಿರುವದನ್ನು ಖಾಸಗಿ ವೈದ್ಯರು ಕೈಬಿಟ್ಟು, ಜ್ವರ, ನೆಗಡಿ, ಕೆಮ್ಮು ಎಂದು ಆಸ್ಪತ್ರೆಗಳಿಗೆ ಬರುವ ರೋಗಿಗಳಿಗೆ ಕಡ್ಡಾಯವಾಗಿ ಆರ್‍ಟಿ-ಪಿಸಿಆರ್ ತಪಾಸಣೆ ನಡೆಸಲು ಸೂಚನೆ ನೀಡಬೇಕೆಂದು ಒತ್ತಾಯಿಸಿದರು.
ಆರ್‍ಟಿ-ಪಿಸಿಆರ್ ಪರೀಕ್ಷೆ ಮಾಡಿದ ನಂತರ ಕೆಲವರಿಗೆ ನೆಗೆಟಿವ್ ವರದಿ ಬರುತ್ತಿದ್ದು, ಸಿಟಿ ಸ್ಕ್ಯಾನ್ ಮಾಡಿದ ನಂತರ ರೋಗದ ಲಕ್ಷಣಗಳು ಕಂಡು ಬರುತ್ತಿದೆ. ಖಾಸಗಿ ಆಸ್ಪತ್ರೆ ವೈದ್ಯರು ಕರೊನಾ ತಪಾಸಣೆಯ ವರದಿ ಇಲ್ಲದೆ ಚಿಕಿತ್ಸೆ ನೀಡುತ್ತಿದ್ದಾರೆ. ಇದನ್ನು ಗಂಭೀರವಾಗಿ ಪರಿಗಣಿಸಿ ರೋಗಿಗಳು ಖಾಸಗಿ ಆಸ್ಪತ್ರೆಗೆ ತಪಾಸಣೆಗೆ ತೆರಳಿದರೆ ಮೊದಲು ಕೋವಿಡ್ ಪರೀಕ್ಷೆಗೆ ಒಳಪಡಿಸಲು ಸರ್ಕಾರಿ ಆಸ್ಪತ್ರೆಗೆ ಶಿಫಾರಸ್ಸು ಮಾಡಲು ಖಾಸಗಿ ಆಸ್ಪತ್ರೆಗಳಿಗೆ ಕಟ್ಟುನಿಟ್ಟಿನ ಸೂಚನೆ ನೀಡಬೇಕೆಂದು ಮೇಟಿ ಆಗ್ರಹಿಸಿದ್ದಾರೆ.

