ರಾಯಚೂರು

ಲಿಂಗಸುಗೂರು ಪುರಸಭೆ ಮುಖ್ಯಾಧಿಕಾರಿ ವಿರುದ್ಧ ಆಡಳಿತ ಮಂಡಳಿ ದೂರು

ಲಿಂಗಸೂಗೂರು : ಸ್ಥಳೀಯ ಪುರಸಭೆ ಮುಖ್ಯಾಧಿಕಾರಿಗಳು
ಸಾರ್ವಜನಿಕರ ಸಮಸ್ಯೆಗಳಿಗೆ ಸ್ಪಂಧಿಸದೇ, ಕಚೇರಿಯಲ್ಲಿ ವಾರಕ್ಕೆ ನಾಲ್ಕೈದು ದಿನಗಳ ಕಾಲ ಕುಂಟುನೆಪ ಹೇಳುತ್ತಾ ಗೈರಾಗುವ ಮೂಲಕ ಆಡಳಿತ ಯಂತ್ರ ಸರಾಗವಾಗಿ ನಡೆಯಲು ಸಹಕಾರ ನೀಡುತ್ತಿಲ್ಲ. ಕೂಡಲೇ ಇವರ ವಿರುದ್ಧ ಸೂಕ್ತ ಕ್ರಮ ಕೈಗೊಳ್ಳಬೇಕೆಂದು ಅದ್ಯಕ್ಷೆ ಗದ್ದೆಮ್ಮ ಯಮನೂರು,ಉಪಾದ್ಯಕ್ಷ ಮೊಹ್ಮದ್ ರಫಿ, ಸ್ಥಾಯಿ ಸಮಿತಿ ಅದ್ಯಕ್ಷ ಪ್ರಮೋದ ಕುಲಕರ್ಣಿ ಸೇರಿ ಆಡಳಿತ ಮಂಡಳಿ ದೂರು ಸಲ್ಲಿಸಿದೆ.

ಯೋಜನಾ ನಿರ್ದೇಶಕರ ಮೂಲಕ ಜಿಲ್ಲಾಧಿಕಾರಿಗಳಿಗೆ ಮನವಿಸಲ್ಲಿಸಿದ ಅವರು, ನವೆಂಬರ್ 2020ರಲ್ಲಿ ಮಾನವಿ ಪುರಸಭೆಯಿಂದ ವರ್ಗಾವಣೆಯಾಗಿ ಲಿಂಗಸುಗೂರು ಪುರಸಭೆಗೆ ಮುಖ್ಯಾಧಿಕಾರಿಯಾಗಿ ಕರ್ತವ್ಯಕ್ಕೆ ಹಾಜರಾಗಿರುವ ವಿಜಯಲಕ್ಷ್ಮಿಯವರು ವಾರದಲ್ಲಿ ನಾಲ್ಕರಿಂದ ಐದು ದಿನ ಕಚೇರಿಯಲ್ಲಿ ಲಭ್ಯ ಇರುವುದಿಲ್ಲ. ಅದನ್ನು ಕೇಳಿದರೆ, ಮೀಟಿಂಗ್,ವಿಡಿಯೋ ಕಾನ್ಫರೆನ್ಸ್, ಕೋರ್ಟ್, ಸೈಟ್ ಪರಿಶೀಲನೆ ಎಂದು ಕುಂಟು ನೆಪ
ಹೇಳುತ್ತಾ ಸದಸ್ಯರಿಗೆ ಮತ್ತು ಸಾರ್ವಜನಿಕರಿಗೆ ದಾರಿ ತಪ್ಪಿಸುತ್ತಿದ್ದಾರೆ.ಸಕಾಲದಲ್ಲಿ 7 ದಿನಗಳ ಒಳಗಾಗಿ ಫಾರ್ಮ್ ನಂ-3 (ಖಾತಾನಕಲು)ಕೊಡಬೇಕೆಂದು ನಿಯಮವಿದ್ದಾಗ್ಯೂ, ಮುಖ್ಯಾಧಿಕಾರಿಗಳು ಆನ್‍ಲೈನ್‍ಗೆ ಹಾಕದೇ ಮ್ಯಾನುವಲ್ ಕಡತಗಳನ್ನು ತರಿಸಿ ಎರಡು ತಿಂಗಳ ಬಳಿಕ ಆನ್‍ಲೈನ್‍ಗೆ ಹಾಕುತ್ತಾರೆ. ನಂದರ ಖಾತಾ ನಕಲು ಕೊಡಲು ಹೆಚ್ಚಿನ
ದುಡ್ಡನ್ನು ನಿರೀಕ್ಷಿಸುತ್ತಿದ್ದು, ಈ ಬಗ್ಗೆ ಸಾರ್ವಜನಿಕರಿಂದ ಹಲವು ದೂರುಗಳು ಬಂದಿವೆ.

ಆಸ್ತಿ ವರ್ಗಾವಣೆ (ಮೊಟೇಶನ್)ಗಾಗಿ ಬಂದ ಅರ್ಜಿಗಳಿಗೆ ಆಸ್ತಿ ಮಾರಾಟಗಾರರ, ಖರೀದಿದಾರರ ಬಹಳ ಹಿಂದಿನ ವರ್ಷಗಳ ಕಡತಗಳನ್ನು ತರಿಸಿ ಅದರಲ್ಲಿ ಅವಶ್ಯಕತೆ ಇರದ ಅಂಶಗಳನ್ನು ಎತ್ತಿ ಹಿಡಿದು ಕಡತ ವಿಲೇವಾರಿ ಮಾಡದೇ ಸಾರ್ವಜನಿಕರನ್ನು ಸುಖಾ ಸುಮ್ಮನೇ ಕಚೇರಿಗೆ
ಅಲೆದಾಡಿಸುತ್ತಿರುವುದು ಸಾಮಾನ್ಯವಾಗಿದೆ. ಅವಶ್ಯಕತೆ ಇರದ ಮತ್ತು ಲಭ್ಯವಿರದ ದಾಖಲೆಗಳನ್ನು ಕೇಳಿ ಅನಾವಶ್ಯಕವಾಗಿ ಸಾರ್ವಜನಿಕರಿಗೆ ತೊಂದರೆ ಕೊಡುವ ನೂರಾರು ದೂರುಗಳು ದಿನನಿತ್ಯ ಕೇಳಿಬರುತ್ತಿವೆ. ಸಾರ್ವಜನಿಕರು ನಿತ್ಯ ಆಡಳಿತ ಮಂಡಳಿಗೆ ಹಿಡಿಶಾಪ
ಹಾಕುತ್ತಿದ್ದಾರೆ.

ಮುಖ್ಯಾಧಿಕಾರಿಗಳು ಪುರಸಭೆಗೆ ಬಂದ ಬಳಿಕ ಎರಡ್ಮೂರು ದಿ ನಗಳಲ್ಲಿ ಸುಮಾರು 54 ಕಟ್ಟಡಗಳ ಪರವಾನಿಗೆಯ ಅರ್ಜಿಗಳನ್ನು ತಮ್ಮ ಮನಸ್ಸಿಗೆ ಬಂದಂತೆ ಯಾವುದೇ ಸಮರ್ಪಕ ಕಾರಣ ತೋರಿಸದೇ ತಿರಸ್ಕರಿಸಿರುತ್ತಾರೆ. ಇದಕ್ಕೆ ಸಂಬಂಧಿಸಿಂತೆ ಸ್ಥಾಯಿ ಸಮಿತಿ ಅದ್ಯಕ್ಷರು ಹಿಂಬರಹ ಕೇಳಿ ಎರಡು ತಿಂಗಳಾದರೂ ಇದುವರೆಗೂ ಸಮರ್ಪಕ ಮಾಹಿತಿ
ನೀಡಿಲ್ಲ.

ನೈರ್ಮಲೀಕರಣಕ್ಕೆ ಸಂಬಂಧಿಸಿದಂತೆ ಪುರಸಭೆಯ 23
ವಾರ್ಡ್‍ಗಳಲ್ಲಿ ಯಾವುದೇ ವಾರ್ಡ್‍ಗಳಿಗೂ ಭೇಟಿ ನೀಡದೇ, ಸಾರ್ವಜನಿಕರು ದೂರು ಹೇಳಲು ಬಂದಾಗ ಇನ್‍ವರ್ಡ್‍ನಲ್ಲಿ ಕೊಟ್ಟು ಹೋಗಿ ಎಂದು ಬೇಜವಾಬ್ದಾರಿಯಿಂದ ನಡೆದುಕೊಳ್ಳುತ್ತಾರೆ. ಖುದ್ದು ಅದ್ಯಕ್ಷ-ಉಪಾದ್ಯಕ್ಷರಾದಿಯಾಗಿ ಸದಸ್ಯರ ಮಾತಿಗೂ ಕಿಮ್ಮತ್ತು ನೀಡದೇ ಇರುವ ಮುಖ್ಯಾಧಿಕಾರಿಗಳ ವಿರುದ್ಧ ಸೂಕ್ತ ಕ್ರಮ ಕೈಗೊಳ್ಳಬೇಕೆಂದು ಒತ್ತಾಯಿಸಿದರು.

ಪುರಸಭೆ ಸದಸ್ಯರಾದ ಯಮನಪ್ಪ ದೇಗಲಮಡಿ, ಬಾಬುರೆಡ್ಡಿ ಮುನ್ನೂರು, ದೊಡ್ಡನಗೌಡ ಹೊಸಮನಿ, ರುದ್ರಪ್ಪ ಬ್ಯಾಗಿ,ಕುಪ್ಪಮ್ಮ ಬಸವರಾಜ, ಯಮನಪ್ಪಗೌಡ, ಮೌಲಾಸಾಬ, ಫಾತೀಮಾಬಿ, ಸುನಿತಾ ಕೆಂಭಾವಿ, ಸೋಮನಗೌಡ ಸೇರಿ ಸದಸ್ಯರು ಸಹಿ ಮಾಡಿದ ದೂರನ್ನು
ಯೋಜನಾ ನಿರ್ದೇಶಕರಿಗೆ ಸಲ್ಲಿಸಲಾಯಿತು.

Leave a Reply

Your email address will not be published. Required fields are marked *

error: Content is protected !!