ಪಂಚಾಯತ್ ಚುನಾವಣೆಯಲ್ಲಿ ಅಕ್ರಮ ರಾಜಾರೋಶ ಮತದಾರರಿಗೆ ಮಾಂಸ-ಮಧ್ಯ ಸರಬರಾಜು : ಕಣ್ಮುಚ್ಚಿದ ಅಧಿಕಾರಿಗಳು..!
ವರದಿ : ಖಾಜಾಹುಸೇನ್
ಲಿಂಗಸುಗೂರು : ಪಂಚಾಯಿತಿ ಚುನಾವಣೆಗೆ ಮತದಾನದ ದಿನ ಸಮೀಪಿಸುತ್ತಿದ್ದಂತೆಯೇ ಆಕಾಂಕ್ಷಿಗಳು ಮತದಾರರಿಗೆ ಆಮಿಷಗಳನ್ನು ನೀಡುವುದು ಹೆಚ್ಚಾಗುತ್ತಿದೆ. ಪ್ರತಿ ಮನೆಗೂ ಚಿಕನ್, ಮಟನ್, ಮಧ್ಯ ಸರಬರಾಜು ಮಾಡಲಾಗತ್ತಿದೆ. ರಾಜಾರೋಷವಾಗಿ ಹಾಡು ಹಗಲೇ ಮಾಂಸದ ಪೊಟ್ಟಣಗಳನ್ನು ಕೊಂಡೊಯ್ಯುತ್ತಿದ್ದರೂ ಸಂಬಂಧಿಸಿದ ಅಧಿಕಾರಿಗಳು ಮಾತ್ರ ಕ್ಯಾರೇ ಎನ್ನದೇ ಕಣ್ಮುಚ್ಚಿ ಕುಳಿತಿರುವುದು ಮಾತ್ರ ಸಾರ್ವಜನಿಕರ ಅಸಮಧಾನಕ್ಕೆ ಕಾರಣವಾಗಿದೆ.
ತಾಲೂಕಿನ ಗೋನಾವಾಟ್ಲಾ, ಗುಂತಗೋಳ, ಕಾಳಾಪೂರು, ಗೊರೆಬಾಳ, ಮಾವಿನಭಾವಿ, ಆನೆಹೊಸೂರು, ಈಚನಾಳ, ರೋಡಲಬಂಡಾ (ಯುಕೆಪಿ) ವಿವಿಧ ಗ್ರಾಮ ಪಂಚಾಯತಿಗಳಲ್ಲಿ ಸ್ಪರ್ಧಿಗಳು ಮತದಾರರನ್ನು ಸೆಳೆಯಲು ಹಲವು ತಂತ್ರಗಳನ್ನು ಬಳುಸುತ್ತಿದ್ದಾರೆ. ಒಂದು ಕುಟುಂಬದಲ್ಲಿ 2 ಮತಗಳಿದ್ದರೆ, ಒಂದು ಕೆಜಿ ಚಿಕ್ಕನ್ ಒಂದು ಕ್ವಾಟರ್ ಮಧ್ಯ ಹಾಗೂ 3 ಮತದಾರರು ಇದ್ದರೆ 2 ಕೆಜಿ ಚಿಕ್ಕನ್ 2 ಕ್ವಾಟರ್ ಎಣ್ಣೆ ಹಂಚುತ್ತಿದ್ದಾರೆನ್ನುವ ಮಾಹಿತಿ ಇದೆ.
ಪ್ರತಿಯೊಂದು ಗ್ರಾಮಗಳಲ್ಲಿ ಹೋಟಲ್, ಪಾನ್‍ಶಾಪ್ ಅಂಗಡಿ, ಕಿರಾಣಿ ಅಂಗಡಿಗಳಲ್ಲಿ ಅಕ್ರಮ ಮಧ್ಯ ಮಾರಾಟ ಜೋರಾಗಿ ಸಾಗಿದೆ. ಗ್ರಾಮದ ಯುವಕರು ಮುಂಜಾನೆ ಮದ್ಯದ ಅಮಲಿನಲ್ಲಿ ತೇಲಾಡುತ್ತಿದ್ದಾರೆ. ಇನ್ನೊಂದು ಕಡೆ ಕುಗ್ರಾಮ ಹಾಗೂ ತಾಂಡಗಳಲ್ಲಿ ಕಳ್ಳಭಟ್ಟಿ ಸಾರಾಯಿ ಮಾರಾಟವು ಎಗ್ಗಿಲ್ಲದೇ ಸಾಗಿದೆ. ಇದರಿಂದಾಗಿ ಯುವಕರು ದುಶ್ಚಟಗಳಿಗೆ ಮಾರುಹೋಗುತ್ತಿದ್ದಾರೆ. ಹಗಲಿನಲ್ಲಿ ಅಕ್ರಮವಾಗಿ ಮದ್ಯ ಮಾರಾಟವಾಗುತ್ತಿದ್ದರು, ಅಬಕಾರಿ ಅಧಿಕಾರಿಗಳು ಅಕ್ರಮ ಮದ್ಯಮಾರಾಟಕ್ಕೆ ಸಾಥ್ ನೀಡುತ್ತಿದ್ದಾರೆನ್ನುವ ಗುಮಾನಿ ಜನರಲ್ಲಿ ಕಾಡುತ್ತಿದೆ.
ಕೊರೋನಾ ವೈರಸ್‍ನಿಂದ ಕಂಗೆಟ್ಟಿದ ಮಾಂಸ ಮಾರಾಟದ ವ್ಯಾಪಾರಸ್ಥರಿಗೆ ಗ್ರಾಮ ಪಂಚಾಯತಿ ಚುನಾವಣೆಯು ಅವರಿಗೆ ಸುಗ್ಗಿಯನ್ನು ತಂದುಕೊಟ್ಟಿದೆ. ಕಳೆದರಡು ದಿನಗಳಿಂದ ಚಿಕ್ಕನ್ ಮಾರಾಟ ಹೆಚ್ಚಾಗಿದೆ. ಚುನಾವಣೆ ಮೊದಲು ಪ್ರತಿಯೊಂದು ಅಂಗಡಿಗಳಲ್ಲಿ ದಿನಕ್ಕೆ 80 ರಿಂದ 100 ಕೆಜಿ ಮಾರಾಟವಾಗುತ್ತಿತ್ತು. ಆದರೆ ಈಗ ದಿನಕ್ಕೆ 200 ರಿಂದ 300 ಕೆಜಿ ಚಿಕನ್ ಮಾರಾಟವಾಗುತ್ತಿದೆ. ಇದರಿಂದಾಗಿ ವ್ಯಾಪಾರಸ್ಥರು ಬೆಳಿಗ್ಗೆ 5 ಗಂಟೆಯಿಂದಲೇ ವ್ಯಾಪಾರ ಮಾಡಲು ಶುರುವಿಟ್ಟುಕೊಂಡಿದ್ದಾರೆ.
ತಾಲೂಕಿನಲ್ಲಿ ಗ್ರಾಮ ಪಂಚಾಯತಿ ಚುನಾವಣೆಯಿಂದಾಗಿ ಅಕ್ರಮ ಚಟುವಟಿಕೆಗಳು ನಡೆಯುತ್ತಿವೆ. ಆದರೆ ಚುನಾವಣೆ ಅಧಿಕಾರಿ ಯಾವುದೇ ಕ್ರಮ ಕೈಗೊಳ್ಳದೇ ಕೈಕಟ್ಟಿಕೊಂಡು ಕುಳಿತ್ತಿದ್ದಾರೆ. ಅಲ್ಲದೇ ವಿವಿಧ ರಾಜಕೀಯ ಪಕ್ಷಗಳು ನೇರವಾಗಿ ಚುನಾವಣೆಯ ಪ್ರಚಾರದಲ್ಲಿ ತೊಡಗಿದ್ದಾರೆ. ಅವರನ್ನು ನಿಯಂತ್ರಿಸುವಲ್ಲಿಯೂ ಸಹ ಅಧಿಕಾರಿಗಳು ವಿಫಲರಾಗಿದ್ದಾರೆನ್ನುವ ಮಾತುಗಳು ಕೇಳಿ ಬರುತ್ತಿವೆ.

