ಅಂತರಾಜ್ಯ ಕಳ್ಳನ ಬಂಧನ : 5.72 ಲಕ್ಷ ರೂಪಾಯಿ ಸಾಮಗ್ರಿ ವಶ
ಲಿಂಗಸುಗೂರು : ಇತ್ತೀಚೆಗೆ ಪಟ್ಟಣದ ಮೊಬೈಲ್ ಅಂಗಡಿಯೊಂದು ಕಳುವಗಿದ್ದ ಪ್ರಕರಣದ ಬೆನ್ನಟ್ಟಿದ ಲಿಂಗಸುಗೂರು ಪೋಲಿಸರಿಗೆ ಅಂತರಾಜ್ಯ ಕಳ್ಳನೊಬ್ಬ ಸಿಕ್ಕಿಬಿದ್ದಿದ್ದು, ಈತನಿಂದ ವಿವಿದೆಡೆ ಕಳುವು ಮಾಡಿದ್ದ ಸಾಮಗ್ರಿಗಳನ್ನು ವಶಕ್ಕೆ ಪಡೆಯಲಾಗಿದೆ.
ಶೇಖ್ ರಹೀಮ್‍ಅಲಿ ಅಲಿಯಾಸ್ ರಹಿಮಾನ್ ಎನ್ನುವ ಕಳ್ಳ ಇದೇ ಅಗಸ್ಟ್ ತಿಂಗಳ 8ನೇ ತಾರೀಖಿನಂದು ಸ್ಥಳೀಯ ಸಲೀಂ ಮೊಬೈಲ್ಸ್ ಅಂಗಡಿಯಲ್ಲಿ 1.38 ಲಕ್ಷ ರೂಪಾಯಿ ಬೆಲೆಬಾಳುವ 9 ಮೊಬೈಲ್‍ಗಳನ್ನು ಕಳುವು ಮಾಡಿದ್ದನು. ಎಸ್‍ಪಿಯವರ ಮಾರ್ಗದರ್ಶನ ಡಿವೈಎಸ್‍ಪಿಯವರ ನೇತೃತ್ವದಲ್ಲಿ ಸಿಪಿಐಯವರು ತಂಡ ರಚನೆ ಮಾಡಿದ್ದು, ತಂಡದ ನೇತೃತ್ವ ವಹಿಸಿದ್ದ ಪಿಎಸ್‍ಐ ಪ್ರಕಾಶ ಡಂಬಳ್ ಕಳ್ಳನ ಜಾಡು ಹಿಡಿದು ಹೈದ್ರಾಬಾದ್‍ನ ನಾಮಪಲ್ಲಿಯಲ್ಲಿ ವಾಸವಿರುವ ಕಳ್ಳನನ್ನು ಪಟ್ಟಣದಲ್ಲಿಯೇ ಹಿಡಿದು ಬಂಧಿಸಿದ್ದಾರೆ.
ಕಳ್ಳನಿಂದ 1.38 ಲಕ್ಷ ರೂಪಾಯಿ ಬೆಲೆಬಾಳುವ 9 ಮೊಬೈಲ್‍ಗಳು, ಹಟ್ಟಿ ಪೋಲಿಸ್ ಠಾಣೆ ವ್ಯಾಪ್ತಿಯ 4 ಪ್ರಕರಣಗಳಲ್ಲಿ 4 ಲಕ್ಷ ರೂಪಾಯಿ ಬೆಲೆಬಾಳುವ 100 ಗ್ರಾಂ ಬಂಗಾರ ಹಾಗೂ 2500 ರೂಪಾಯಿ ಬೆಲೆಯ 40 ಗ್ರಾಂ ಬೆಳ್ಳಿ ಆಭರಣಗಳನ್ನು ಮತ್ತು ಗುರುಗುಂಟಾ ಅಂಬಾದೇವಿ ದೇವಸ್ಥಾನದಲ್ಲಿ 32 ಸಾವಿರ ರೂಪಾಯಿ ಬೆಲೆಬಾಳುವ 470 ಗ್ರಾಂ ಬೆಳ್ಳಿ ಹಾಗೂ ಬಂಗಾರದ ಸಾಮಾನು ಸೇರಿ ಒಟ್ಟು 5.72 ಲಕ್ಷ ರೂಪಾಯಿ ಮೌಲ್ಯದ ವಸ್ತುಗಳನ್ನು ಜಪ್ತಿ ಮಾಡಿಕೊಳ್ಳಲಾಗಿದೆ.
ಆರೋಪಿಯನ್ನು ಬಂಧಿಸಿ ಯಶ್ವಸಿಯಾದ ತಂಡಕ್ಕೆ ಇಲಾಖೆಯ ಮೇಲಾಧಿಕಾರಿಗಳು ಶ್ಲಾಘನೆ ವ್ಯಕ್ತಪಡಿಸಿ ಬಹುಮಾನದೊಂದಿಗೆ ಅಭಿನಂದಿಸಿದ್ದಾರೆ.
ಡಿವೈಎಸ್‍ಪಿ ಎಸ್.ಎಸ್. ಹೂಲ್ಲೂರು, ಸಿಪಿಐ ಮಹಾಂತೇಶ ಸಜ್ಜನ್, ಪಿಎಸ್‍ಐ ಪ್ರಕಾಶ ರೆಡ್ಡಿ ಡಂಬಳ್, ಸಿಬ್ಬಂದಿಗಳಾದ ಚಂದ್ರಶೇಖರ ಪಾಟೀಲ್, ನಾಗರಾಜ, ಈರಣ್ಣ, ಚನ್ನಬಸವ, ಸುಗೂರಪ್ಪ, ಶರಣರೆಡ್ಡಿ, ಅಮರೇಶ, ಭೀಮಣ್ಣ, ರಾಮಪ್ಪ, ಸೋಮಪ್ಪ, ನಾಗಾರ್ಜುನ್ ಜಿಲ್ಲಾ ಪೋಲಿಸ್ ಕಛೇರಿಯ ತಾಂತ್ರಿಕ ಸಿಬ್ಬಂದಿ ಹನುಮಂತ, ಅಜೀಮ್‍ಪಾಶಾ ಸೇರಿದಂತೆ ಇತರರು ಈ ಸಂದರ್ಭದಲ್ಲಿ ಇದ್ದರು.

