ಲಿಂಗಸುಗೂರು ಕ್ರೀಡಾಂಗಣದಲ್ಲಿ ಮೊದಲ ಬಾರಿಗೆ ಸ್ವತಂತ್ರೋತ್ಸವ ಆಚರಣೆ ಕೋವಿಡ್ ತಡೆಗೆ ಯುವ ಪೀಳಿಗೆ ಮುಂದಾಗಲು ಎಸಿ ಕರೆ
ಲಿಂಗಸುಗೂರು : ದೇಶವನ್ನು ಹೆಮ್ಮಾರಿಯಾಗಿ ಕಾಡುತ್ತಿರುವ ಮಹಾಮಾರಿ ಕೋವಿಡ್ ತಡೆಯುವ ನಿಟ್ಟಿನಲ್ಲಿ ಯುವ ಪೀಳಿಗೆ ಮುಂದಾಗಬೇಕೆಂದು ಸಹಾಯಕ ಆಯುಕ್ತ ರಾಹುಲ್ ಸಂಕನೂರು ಕರೆ ನೀಡಿದರು.
ಸ್ಥಳೀಯ ಸರಕಾರಿ ತೋಟದಲ್ಲಿ ನಿರ್ಮಾಣ ಹಂತದಲ್ಲಿರುವ
ಕ್ರೀಡಾಂಗಣದಲ್ಲಿ ಮೊದಲ ಬಾರಿಗೆ ಆಯೋಜಿಸಿದ್ದ ಸ್ವತಂತ್ರ ದಿನಾಚರಣೆ ಸಮಾರಂಭದಲ್ಲಿ ಧ್ವಜಾರೋಹಣ ನೆರವೇರಿಸಿ ಮಾತನಾಡಿದ ಅವರು,ದೇಶಕ್ಕೆ ಸ್ವತಂತ್ರ ಬಂದು 75 ವರ್ಷಗಳಲ್ಲಿ ಸಾಕಷ್ಟು ಬದಲಾವಣೆಯನ್ನು ಕಂಡಿದೆ. ಸ್ವತಂತ್ರ ಬಂದ ಸಂದರ್ಭದಲ್ಲಿ ಶೇ.12-13 ರಷ್ಟಿದ್ದ ಸಾಕ್ಷರತಾ ಪ್ರಮಾಣ ಇಂದು ಶೇ.75ಕ್ಕೆ ಹೆಚ್ಚಳವಾಗಿದೆ. ಅಂದು ಶೇ.70 ರಷ್ಟಿದ್ದ ಬಡತನ ಈಗ ಶೇ.30ಕ್ಕೆ ಇಳಿಕೆಯಾಗಿದೆ. ಸ್ವತಂತ್ರ ಹೋರಾಟಗಾರರ ಕನಸು ನನಸಾಗಿಸಲು ನಾವೆಲ್ಲರೂ ಸಿದ್ಧರಾಗಬೇಕಿದೆ.ಮಹಾಮಾರಿಯ ಸೊಂಕು ತಡೆಗಟ್ಟಲು ಪಣ ತೊಡಬೇಕಿದೆ ಎಂದರು.
ಲಿಂಗಸುಗೂರು ಕ್ಷೇತ್ರದ ಅಭಿವೃದ್ಧಿಗಾಗಿ ಕಳೆದ ಮುರು
ವರ್ಷಗಳಲ್ಲಿ ಸುಮಾರು 600 ಕೋಟಿ ರೂಪಾಯಿ ಅನುದಾನವನ್ನು ತಂದ ಹೆಮ್ಮೆ ನನಗಿದೆ. ನಮ್ಮ ಪ್ರಗತಿಕಾರ್ಯವನ್ನು ಸಹಿಸದವರು ಮಾತನಾಡುತ್ತಲೇ ಇರುತ್ತಾರೆ. ಆದರೆ, ನಾವು ಯಾವುದನ್ನೂ ಹಚ್ಚಿಕೊಳ್ಳದೇ ಅಭಿವೃದ್ಧಿಯತ್ತ ದಾಪುಗಾಲು ಇಡುತ್ತಿದ್ದೇವೆಂದು ಮಾತನಾಡಿದ ಶಾಸಕ ಡಿ.ಎಸ್.ಹೂಲಗೇರಿ ತಮ್ಮ ವಿರೋಧಿಗಳಿಗೆ ವೇದಿಕೆಯಿಂದಲೇ ಕುಟುಕಿದರು.
ಸ್ಥಳೀಯ ಸರಕಾರಿ ತೋಟದಲ್ಲಿ ಆಯೋಜಿಸಿದ್ದ 75ನೇ ಸ್ವತಂತ್ರ ದಿನಾಚರಣೆ ಸಮಾರಂಭದಲ್ಲಿ ಪಾಲ್ಗೊಂಡು ಮಾತನಾಡಿದ ಅವರು, ಶಾಸಕರಿಗೆ ಜ್ಞಾನದ ಕೊರತೆ ಇದೆ ಎಂದು ಹೇಳಿದವರು, ಸರಿಯಾಗಿ ಅರ್ಥ ಮಾಡಿಕೊಳ್ಳಬೇಕು. ಪ್ರತಿವರ್ಷ ಕ್ಷೇತ್ರಕ್ಕೆ ಸಾಕಷ್ಟು ಅನುದಾನವನ್ನು ತಂದು ಕ್ಷೇತ್ರದ ಅಭಿವೃದ್ಧಿಗೆ ಶ್ರಮಿಸುತ್ತಿದ್ದೇವೆ.
ರಾಯಚೂರು ಜಿಲ್ಲೆಯಲ್ಲಿಯೇ ಲಿಂಗಸುಗೂರು ಕ್ಷೇತ್ರವನ್ನು
ಮಾದರಿಯಾಗಿ ಮಾಡುವ ಪಣ ತೊಟ್ಟಿದ್ದೇವೆ. ಈ ನಿಟ್ಟಿನಲ್ಲಿ ಕೆಲಸಗಳು ನಡೆದಿವೆ. ಹಲವು ವರ್ಷಗಳಿಂದ ನೆನೆಗುದಿಗೆ ಬಿದ್ದಿದ್ದ ಕ್ರೀಡಾಂಗಣ ಕಾಮಗಾರಿಗೆ ಚಾಲನೆ ನೀಡಿ ಮೊದಲ ಬಾರಿಗೆ ಇಲ್ಲಿ ಧ್ವಜಾರೋಹಣ ಕಾರ್ಯಕ್ರಮ ನೆರವೇರಿಸುತ್ತಿರುವುದು ಐತಿಹಾಸಿಕ ಕ್ರಮವಾಗಿದೆ.ಯಾವ ವಿರೋಧಿಗಳ ಮಾತಿಗೂ ಕಿವಿಗೊಡದೇ ಅಭಿವೃದ್ಧಿ ಕಾರ್ಯಗಳನ್ನು ಮಾಡುತ್ತಿದ್ದೇನೆ. ನಮ್ಮ ಕಾರ್ಯಕರ್ತರೂ ಯಾವುದನ್ನು ಗಂಭೀರವಾಗಿ ಪರಿಗಣಿಸಬಾರದೆಂದು ಹೇಳಿದರು.
ಇಷ್ಟು ದಿನಗಲ ಕಾಲ ಸರಕಾರಿ ಪದವಿ ಪೂರ್ವ ಕಾಲೇಜು
ಮೈದಾನದಲ್ಲಿ ಧ್ವಜಾರೋಹಣ ನೆರವೇರಿಸಲಾಗುತ್ತಿತ್ತು. ಮೊದಲ ಬಾರಿಗೆ ಕ್ರೀಡಾಂಗಣದಲ್ಲಿ ಸಮಾರಂಭವನ್ನು ಆಯೋಜಿಸಿರುವುದು ಐತಿಹಾಸಿಕ ನಿರ್ಣಯವಾಗಿದೆ. ಕ್ರೀಡಾಪಟುಗಳಿಗೆ ಅನುಕೂಲವಾಗಲು ಕ್ರೀಡಾಂಗಣವನ್ನು
ಶೀಘ್ರದಲ್ಲಿಯೇ ಲೋಕಾರ್ಪಣೆ ಮಾಡಲಾಗುವುದೆಂದು ಶಾಸಕರು ಹೇಳಿದರು. ಸಮಾರಂಭದಲ್ಲಿ ಪ್ರತಿಭಾನ್ವಿತ ವಿದ್ಯಾರ್ಥಿಗಳನ್ನು ಸತ್ಕರಿಸಲಾಯಿತು.
ತಹಸೀಲ್ದಾರ್ ಚಾಮರಾಜ ಪಾಟೀಲ್, ಡಿವೈಎಸ್‍ಪಿ ಎಸ್.ಎಸ್.ಹುಲ್ಲೂರು,ಪುರಸಭೆ ಅದ್ಯಕ್ಷ ಗದ್ದೆಮ್ಮ ಭೋವಿ, ಪಿಕಾರ್ಡ್ ಬ್ಯಾಂಕ್ ಅದ್ಯಕ್ಷ ಮಹಾಂತೇಶ ಪಾಟೀಲ್, ಎಪಿಎಂಸಿ ಅದ್ಯಕ್ಷ ಮಲ್ಲರಡ್ಡೆಪ್ಪ ಸೇರಿ ವಿವಿಧ ಇಲಾಖೆಗಳ ತಾಲೂಕು ಅಧಿಕಾರಿಗಳು ಸಮಾರಂಭದ ವೇದಿಕೆಯಲ್ಲಿದ್ದರು.

