ಲಿಂಗಸುಗೂರು : ಸರಕಾರಿ ಪದವಿ ಕಾಲೇಜು ವಿದ್ಯಾರ್ಥಿಗಳಿಗೆ ಟ್ಯಾಬ್ಲೇಟ್‍ಗಳ ವಿತರಣೆ ಸರಕಾರಿ ಸವಲತ್ತು ಸದ್ಬಳಕೆ ಮಾಡಿಕೊಳ್ಳಲು ಶಾಸಕ ಹೂಲಗೇರಿ ಕರೆ
ಲಿಂಗಸುಗೂರು : ಶೈಕ್ಷಣಿಕ ಕ್ಷೇತ್ರಕ್ಕೆ ಸರಕಾರ ಹೆಚ್ಚಿನ ಆಧ್ಯತೆ ನೀಡುವ ಮೂಲಕ ವಿದ್ಯಾರ್ಥಿಗಳಿಗೆ ಹಲವು ಸವಲತ್ತುಗಳನ್ನು ನೀಡುತ್ತಿದೆ. ಪಟ್ಟಣ ಹಾಗೂ ಗ್ರಾಮೀಣ ಭಾಗದ ವಿದ್ಯಾರ್ಥಿಗಳು ಸರಕಾರದ ಸೌಲಭ್ಯಗಳ ಸದ್ಬಳಕೆ ಮಾಡಿಕೊಳ್ಳುವ ಮೂಲಕ ಉನ್ನತ ಶಿಕ್ಷಣ ಪಡೆದು ದೇಶದ ಅಭಿವೃದ್ಧಿಗೆ ಶ್ರಮಿಸಬೇಕೆಂದು ಶಾಸಕ ಡಿ.ಎಸ್.ಹೂಲಗೇರಿ ಕರೆ ನೀಡಿದರು.
2020-21ನೇ ಶೈಕ್ಷಣಿಕ ಸಾಲಿನ ಬಿ.ಎ., ಬಿ.ಕಾಂ ಹಾಗೂ ಬಿಎಸ್ಸಿ ಪ್ರಥಮ ವರ್ಷದ ವಿದ್ಯಾರ್ಥಿಗಳಿಗೆ ಉಚಿತ ಟ್ಯಾಬ್ಲೇಟ್‍ಗಳ (ಮಿನಿ ಕಂಪ್ಯೂಟರ್) ವಿತರಣೆ ಹಾಗೂ ಐ.ಸಿ.ಟಿ. ಸ್ಮಾರ್ಟ್ ಕ್ಲಾಸ್ ರೂಂಗಳ ಉದ್ಘಾಟನೆ ಮಾಡಿ ಮಾತನಾಡಿದ ಅವರು, ಸರಕಾರಿ ಸವಲತ್ತುಗಳನ್ನು ಪಡೆದುಕೊಂಡು ವಿದ್ಯಾರ್ಜನೆ ಮಾಡುವ ಮೂಲಕ ಶೈಕ್ಷಣಿಕವಾಗಿ ಹಿಂದುಳಿದ ತಾಲೂಕು ಎನ್ನುವ ಹಣೆಪಟ್ಟಿಯನ್ನು ವಿದ್ಯಾರ್ಥಿಗಳು ಅಳಿಸಿಹಾಕಬೇಕು. ಜಿಲ್ಲೆ ಹಾಗೂ ರಾಜ್ಯದಲ್ಲಿಯೇ ಮಾದರಿ ಎನ್ನುವಂತೆ ಮಕ್ಕಳಿಗೆ ಗುಣಮಟ್ಟದ ಶಿಕ್ಷಣ ನೀಡಬೇಕೆಂದು ಉಪನ್ಯಾಸಕರಿಗೆ ಶಾಸಕರು ಸಲಹೆ ನೀಡಿದರು.
ಪ್ರಾಚಾರ್ಯ ಮಹಾಂತಗೌಡ ಪಾಟೀಲ್ ಮಾತನಾಡಿ, 2020-21ನೇ ಸಾಲಿನ ಪ್ರಥಮ ವರ್ಷದ ಸೆಮಿಸ್ಟರ್‍ನಲ್ಲಿ 746 ವಿದ್ಯಾರ್ಥಿಗಳಿಗೆ ಟ್ಯಾಬ್ಲೆಟ್‍ಗಳನ್ನು ವಿತರಣೆ ಮಾಡಲಾಗುವುದು. ರಾಜ್ಯದಲ್ಲಿಯೇ ಪ್ರಥಮ ಬಾರಿಗೆ ಲರ್ನಿಂಗ್ ಮ್ಯಾನೇಜ್‍ಮೆಂಟ್ ಸಿಸ್ಟಮ್ ಸ್ಮಾರ್ಟ್ ಕ್ಲಾಸ್‍ಗಳನ್ನು ಇಂದು ಉದ್ಘಾಟನೆ ಮಾಡಲಾಗಿದೆ. ಶಿಕ್ಷಣದಲ್ಲಿ ಹೆಚ್ಚಿನ ಸಾಧನೆ ಮಾಡುವ ಜೊತೆಗೆ ಕಾಲೇಜಿಗೆ ಹಾಗೂ ತಾಲೂಕಿಗೆ ಕೀರ್ತಿ ತರುವಂತೆ ವಿದ್ಯಾರ್ಥಿಗಳಿಗೆ ಕಿವಿಮಾತು ಹೇಳಿದರು.
ಬ್ಲಾಕ್ ಕಾಂಗ್ರೆಸ್ ಅದ್ಯಕ್ಷ ಭೂಪನಗೌಡ ಕರಡಕಲ್, ಮುಖಂಡರಾದ ಶರಣಪ್ಪ ಮೇಟಿ, ಪಾಮಯ್ಯ ಮುರಾರಿ, ಪರಶುರಾಮ ನಗನೂರು ಸೇರಿ ಇತರರು ಈ ಸಂದರ್ಭದಲ್ಲಿ ಇದ್ದರು.

