ರಾಯಚೂರು

ಮುಖ್ಯಾಧಿಕಾರಿ ಅಮಾನತ್ತಿನಿಂದ ಪುರಸಭೆ ಕಚೇರಿಯಲ್ಲಿ ಕಾಯಿ ಒಡೆದು ಸಂಭ್ರಮ ಕರ್ತವ್ಯಲೋಪ ಆರೋಪ : ಮುಖ್ಯಾಧಿಕಾರಿ ವಿಜಯಲಕ್ಷ್ಮಿಅಮಾನತ್ತು

ಲಿಂಗಸುಗೂರು : ಪುರಸಭೆ ಆಡಳಿತ ಮಂಡಳಿ ದೂರು ಹಾಗೂ ಕರ್ತವ್ಯಲೋಪದ ಆರೋಪದ ಮೇಲೆ ಪಟ್ಟಣದ ಪುರಸಭೆ ಮುಖ್ಯಾಧಿಕಾರಿ ವಿಜಯಲಕ್ಷ್ಮಿಯವರನ್ನು ಇಲಾಖಾ ವಿಚಾರಣೆ ಕಾಯ್ದಿರಿಸಿ ಪೌರಾಡಳಿತ ನಿರ್ದೇಶನಾಲಯದ ನಿರ್ದೇಶಕಿ ಬಿ.ಬಿ. ಕಾವೇರಿ ಅಮಾನತ್ತು ಮಾಡಿ ಆದೇಶ ಹೊರಡಿಸಿದ್ದಾರೆ. ಅಮಾನತ್ತು ಆದೇಶ ಜಾಲತಾಣದಲ್ಲಿ ವೈರಲ್ ಆಗುತ್ತಿದ್ದಂತೆಯೇ ಕೆಲ ಸಾರ್ವಜನಿಕರು ಪುರಸಭೆ ಕಚೇರಿ ಆವರಣದಲ್ಲಿ ತೆಂಗಿನ ಕಾಯಿ ಒಡೆದು ಸಂಭ್ರಮಿಸಿದ ದೃಶ್ಯಗಳೂ ಜಾಲತಾಣದಲ್ಲಿ ವೈರಲ್ ಆಗಿವೆ.

2020 ನವೆಂಬರ್ 30ರಂದು ಲಿಂಗಸುಗೂರು ಪುರಸಭೆ ಮುಖ್ಯಾಧಿಕಾರಿಯಾಗಿ ಅಧಿಕಾರ ವಹಿಸಿಕೊಂಡಾಗಿನಿಂದ 4,95,382 ರೂ. ಮೊತ್ತದ ಅಕ್ರಮ ಬಿಲ್ಲುಗಳನ್ನು ಪಾವತಿ ಮಾಡಿರುವುದು. ರಾಜ್ಯದಲ್ಲಿ ಕೋವಿಡ್ ಸಮಸ್ಯೆ ತೀವ್ರವಾಗಿದ್ದರೂ, ಕೋವಿಡ್ ಎರಡನೇ ಅಲೆಯನ್ನು ತಡೆಯುವಲ್ಲಿ ನಿರ್ಲಕ್ಷ್ಯ ವಹಿಸಿದ್ದಲ್ಲದೇ, 25-05-2021 ರಿಂದ 02-06-2021ರ ವರೆಗೆ ಮೇಲಧಿಕಾರಿಗಳ ಅನುಮತಿ ಪಡೆಯದೇ ಅನಧಿಕೃತವಾಗಿ ಗೈರು ಹಾಜರಾಗಿರುವುದು. 24-05-2021 ಮತ್ತು 31-05-2021ರಂದು ಹಾಜರಿ ಪುಸ್ತಕದಲ್ಲಿ ಸಹಿ ಮಾಡಿ ಅನಧಿಕೃತವಾಗಿ ಗೈರು ಹಾಜರಿ ಎಂದು ಪರಿಗಣಿಸದಿರಲು ವ್ಯವಸ್ಥಿತವಾಗಿ ದಾಖಲೆಗಳನ್ನು ತಿದ್ದಿರುವುದು.

ಸಕಾಲ ಯೋಜನೆಯನುಸಾರ ನಮೂನೆ ನಂ.3ನ್ನು ವಿತರಿಸುವ ಕಾರ್ಯವನ್ನು ಆನ್‍ಲೈನ್‍ನಲ್ಲಿ ನಿರ್ವಹಿಸದೇ ಕೈ ಬರಹದಲ್ಲಿ ವಿತರಿಸಿರುವುದು ಮತ್ತು ವಿಳಂಬವಾಗಿ ವಿತರಿಸಿರುವುದು. ಖಾತಾನಕಲಿಗೆ ಸಂಬಂಧಿಸಿದಂತೆ ಕಂದಾಯ ಶಾಖೆಯ ಕರವಸೂಲಿಗಾರ/ಕಂದಾಯ ನಿರೀಕ್ಷಕ/ಕಂದಾಯ ಅಧಿಕಾರಿ/ಕಿರಿಯ ಅಭಿಯಂತರರ ವರದಿಗಳನ್ನು ಪಡೆಯದೇ ನೇರವಾಗಿ ಡಾಟಾ ಎಂಟ್ರಿಆಪರೇಟರ್ ಜೊತೆಗೂಡಿ ನಮೂನೆ-3 ಸೃಜಿಸಿರುವುದು. ವಾರದಲ್ಲಿ 4-5 ದಿನಗಳ ಕಾಲ ಕಚೇರಿಯಲ್ಲಿ ಕರ್ತವ್ಯದ ಮೇಲೆ ಲಭ್ಯವಿರದೇ, ಇದರ ಬಗ್ಗೆ ಪ್ರಶ್ನಿಸಿದಾಗ ಮೀಟಿಂಗ್, ವಿಡಿಯೋ ಕಾನ್ಫರೆನ್ಸ್, ಸೈಟ್ ವಿಸಿಟ್ ಎಂದು ನೆಪ ಹೇಳುತ್ತಾ ಸದಸ್ಯರಿಗೆ ಹಾಗೂ ಸಾರ್ವಜನಿಕರಿಗೆ ದಾರಿ ತಪ್ಪಿಸುವುದು. ಪಟ್ಟಣದಲ್ಲಿ ಸಮರ್ಪಕವಾಗಿ ಕಸ ವಿಲೇವಾರಿ ಮಾಡದೇ ಇರುವುದು. ಪುರಸಭೆಗೆ ಮಂಜೂರಾದ ಕ್ರಿಯಾ ಯೋಜನೆಗಳ ಕುರಿತು ಕಾಮಗಾರಿ ಪ್ರಗತಿ ಕುಂಠಿತಗೊಂಡಿರುವುದರ ಬಗ್ಗೆ ಪುರಸಭೆ ಅದ್ಯಕ್ಷರು-ಉಪಾದ್ಯಕ್ಷರು ಸೇರಿ ಆಡಳಿತ ಮಂಡಳಿ ನೀಡಿದ ದೂರು ನೀಡಿದ್ದರು.

ಕರ್ತವ್ಯ ಲೋಪ ಎಸಗಿರುವುದು ಮೇಲ್ನೋಟಕ್ಕೆ ಸಾಬೀತಾಗಿದ್ದು, ಕೂಡಲೇ ಜಾರಿಗೆ ಬರುವಂತೆ ಮುಖ್ಯಾಧಿಕಾರಿಯ ವಿರುದ್ಧ ಇಲಾಖಾ ವಿಚಾರಣೆಯನ್ನು ಕಾಯ್ದಿರಿಸಿ ಅಮಾನತ್ತು ಮಾಡಲಾಗಿದೆ.


ಬಹು ದಿನಗಳಿಂದ ಆಡಳಿತ ಮಂಡಳಿ ಮತ್ತು ಮುಖ್ಯಾಧಿಕಾರಿಗಳ ಮಧ್ಯೆ ಮುಸುಕಿನ ಗುದ್ದಾಟ ನಡೆದಿತ್ತು. ಖಾತಾ ನಕಲು, ಮೊಟೇಶನ್, ಕಟ್ಟಡ ಪರವಾನಿಗೆ ಸೇರಿ ಇತರೆ ಕೆಲಸಗಳಿಗೆಂದು ಸಾರ್ವಜನಿಕರು ತಿಂಗಳುಗಟ್ಟಲೇ ಕಚೇರಿಗೆ ಅಲೆಯುವಂಥಹ ಪರಿಸ್ಥಿತಿ ನಿರ್ಮಾಣವಾಗಿತ್ತು. ಕೇಳಿದರೆ, ಎಲ್ಲವನ್ನೂ ಗಣಕೀಕೃತ ಮಾಡಲಾಗುತ್ತಿದೆ, ಸಾರ್ವಜನಿಕರು ಸಹಕರಿಸಬೇಕೆಂದು ಇಲ್ಲದ ಸಬೂಬು ಹೇಳುವ ಮೂಲಕ ಸಿಬ್ಬಂಧಿಗಳು ಕೆಲಸಗಳನ್ನು ಸಾಗ ಹಾಕುತ್ತಿದ್ದರು. ಮುಖ್ಯಾಧಿಕಾರಿಗಳು ಬಂದಾಗಿನಿಂದ ಪುರಸಭೆಯಲ್ಲಿ ಕಡತಗಳ ವಿಲೇವಾರಿ ತಿಂಗಳುಗಟ್ಟಲೇ ವಿಳಂಬವಾಗುತ್ತಿರುವ ಬಗ್ಗೆ ಸಾರ್ವಜನಿಕರಲ್ಲಿಯೂ ದೂರುಗಳು ಕೇಳಿ ಬಂದಿದ್ದವು.

ಮುಖ್ಯಾಧಿಕಾರಿಯ ವರ್ಗಾವಣೆಯ ಮಾಹಿತಿ ಹರಿದಾಡುತ್ತಿದ್ದಂತೆಯೇ ಕೆಲವರು ಕಚೇರಿಗೆ ಬಂದು ತೆಂಗಿನ ಕಾಯಿಗಳನ್ನು ಒಡೆದು ಮುಖ್ಯಾಧಿಕಾರಿ ಕುರ್ಚಿಗೆ ಕೈಮುಗಿದ್ದದ್ದು ನೋಡಿದರೆ, ಎಷ್ಟರ ಮಟ್ಟಿಗೆ ಜನರು ಇವರ ಕೆಲಸದ ವಿಳಂಬದಿಂದ ರೋಸಿ ಹೋಗಿದ್ದರು ಎನ್ನುವುದನ್ನು ಮನಗಾಣಬಹುದಾಗಿದೆ.

Leave a Reply

Your email address will not be published. Required fields are marked *

error: Content is protected !!