ರಾಯಚೂರು

ಕೊಪ್ಪಳ ಗವಿಸಿದ್ದೇಶ್ವರ ಶ್ರೀಗಳ ದಾಸೋಹ ಪ್ರೇರಣೆಗೆ ಮನಸೋತು ಅನ್ನಸಂತರ್ಪಣೆ ಹಸಿದ ಹೊಟ್ಟೆಗೆ ಅನ್ನ ನೀಡುವ ಲಿಂಗಸುಗೂರಿನಲ್ಲೊಬ್ಬ ಅನ್ನದಾತ ಕುಮಾರಣ್ಣ..!

ವರದಿ : ಖಾಜಾಹುಸೇನ್
ಲಿಂಗಸುಗೂರು : ದುಡ್ಡು, ಆಸ್ತಿ ಇದ್ದವರಿಗೆ ದಾನ ಕೊಡುವ ಮನಸ್ಸಿರುವುದಿಲ್ಲ, ದಾನ ಕೊಡುವ ಮನಸ್ಸಿರುವವರ ಬಳಿ ಏನೂ ಇರುವುದಿಲ್ಲ ಎನ್ನುವ ಮಾತಿಗೆ ವಿರುದ್ಧ ಸ್ವಭಾವದ ಯುವಕನೋರ್ವ ಲಿಂಗಸುಗೂರು ಪಟ್ಟಣದಲ್ಲಿ ಲಾಕ್‍ಡೌನ್ ಆದಾಗಿನಿಂದ ಪ್ರತಿನಿತ್ಯ 700-800 ಆಹಾರ ಪೊಟ್ಟಣಗಳನ್ನು ತಯಾರಿಸಿ ಸಂಗಡಿಗರೊಂದಿಗೆ ಪಟ್ಟಣದಲ್ಲಿ ತಿರುಗಾಡಿ ಹಂಚಿಕೆ ಮಾಡುವ ಮೂಲಕ ಹಸಿದ ಹೊಟ್ಟೆಗೆ ಅನ್ನ ನೀಡುವ ಅನ್ನದಾತನಾಗಿ ಗುರುತಿಸಿಕೊಂಡಿರುವುದು ಶ್ಲಾಘನೀಯ ಮತ್ತು ಸಮಾಜದ ಸ್ಥತಿವಂತರಿಗೆ ಮಾದರಿಯ ವ್ಯಕ್ತಿಯಾಗಿದ್ದಾರೆ.

ಹೆಸರಿಗೆ ತಕ್ಕಂತೆ ಚೆನ್ನು ಕುಮಾರ ಎನ್ನುವ ಉದ್ಯಮಿ ಕೋವಿಡ್ ಎರಡನೇ ಅಲೆ ಹೆಚ್ಚಿದ ಪರಿಣಾಮ ಸರಕಾರ ಲಾಕ್‍ಡೌನ್ ಘೊಷಣೆ ಮಾಡಿತು. ಬಸವ ಜಯಂತಿಯ ದಿನದಿಂದ ಆರಂಭವಾದ ಕುಮಾರಣ್ಣನ ಆಹಾರ ಸೇವೆ ಇದುವರೆಗೂ ನಿರಂತರವಾಗಿ ಮುಂದುವರೆದಿದೆ. ಕಳೆದ 22 ದಿನಗಳಿಂದ ಸತತವಾಗಿ ಪ್ರತಿನಿತ್ಯ ಖುದ್ದು ಮುಂದೆ ನಿಂತು ಫಲಾವು, ಚಿತ್ರಾನ್ನ, ದಾಲ್ ಕಿಚಡಿ, ಬಾಳೆಹಣ್ಣು, ಕಲ್ಲಂಗಡಿ, ಸಂತ್ರ ಹಣ್ಣು, ನೀರಿನ ಪೌಚ್ ಹಾಗೂ ಬಾಟಲಿಗಳನ್ನು ಆಸ್ಪತ್ರೆಗೆ ತೆರಳಿ ರೋಗಿಗಳಿಗೆ ಅವರ ಸಂಬಂಧಿಕರಿಗೆ ಸೇರಿ ರಸ್ತೆಯಲ್ಲಿರುವ ನಿರ್ಗತಿಕರಿಗೆ ನೀಡುವ ಮೂಲಕ ಹೃದಯ ಸಿರಿವಂತಿಕೆಯನ್ನು ಮೆರೆಯುತ್ತಿದ್ದಾರೆ.

ಕೊಪ್ಪಳದ ಗವಿಸಿದ್ದೇಶ್ವರ ಶ್ರೀಗಳು ಮಠದಲ್ಲಿ ನಡೆಸುವ ನಿತ್ಯ ದಾಸೋಹದಿಂದ ಪ್ರೇರಣೆಯಾಗಿರುವ ಚೆನ್ನುಕುಮಾರ ಲಾಕ್‍ಡೌನ್ ವೇಳೆಯಲ್ಲಿ ನಿರ್ಗತಿಕರು, ಗ್ರಾಮೀಣ ಪ್ರದೇಶದಿಂದ ಪಟ್ಟಣಕ್ಕೆ ಕಾರ್ಯನಿಮಿತ್ಯ ಬಂದವರು ಸೇರಿದಂತೆ ಹಸಿವಿನಿಂದ ಬಳಲುತ್ತಿರುವ ಜನರನ್ನು ಕಂಡು ಮಮ್ಮಲಮರುಗಿ ತಾವೂ ನಿತ್ಯ ಆಹಾರ ನೀಡುವ ಮನಸ್ಸು ಮಾಡುತ್ತಾರೆ. ಕಳೆದ 10 ವರ್ಷಗಳಿಂದ ಲಿಂಗಸುಗೂರಿನಲ್ಲಿ ನೆಲೆಸಿರುವ ಕುಮಾರ ಅವರು ರಿಯಲ್ ಎಸ್ಟೇಟ್ ಉದ್ಯಮದಲ್ಲಿ ತಮ್ಮನ್ನು ತೊಡಗಿಸಿಕೊಂಡು ಸ್ಥಿತಿವಂತರಾಗಿದ್ದಾರೆ. ಆದರೆ, ಬಹುತೇಕ ಸ್ಥಿತಿವಂತರಂತೆ ಜನರ ಸಂಪರ್ಕದಿಂದ ದೂರ ಉಳಿಯದೇ, ಜನರ ಬಳಿಗೆ ತೆರಳಿ ಸಂಕಷ್ಟಗಳಿಗೆ ನೆರವಾಗುವ ನಿಟ್ಟಿನಲ್ಲಿ ಹಸಿದ ಹೊಟ್ಟೆಗೆ ಅನ್ನದಾಸೋಹ ಮಾಡುವ ಮೂಲಕ ಜನಾನುರಾಗಿಯಾಗಿದ್ದಾರೆ.

ಕುಮಾರ ಅವರ ಅನ್ನದ ಪೊಟ್ಟಣಗಳನ್ನು ಹೊತ್ತು ಬರುವ ಅಟೋಗಾಗಿಯೇ ಮಧ್ಯಾಹ್ನದ ಹೊತ್ತು ಆಸ್ಪತ್ರೆಗಳ ಬಳಿ ಜನ ಕಾಯುತ್ತಾ ಕೂಡುವ ಪರಿಸ್ಥಿತಿ ನಿರ್ಮಾಣವಾಗಿದೆ. ಪಟ್ಟಣದಲ್ಲಿ ಕೆಲ ಹೃದಯವಂತರು ಅನ್ನದ ಪೊಟ್ಟಣಗಳನ್ನು ಜನರಿಗೆ ನೀಡುತ್ತಿದ್ದಾರೆ. ಆದರೆ, ಮುತುವರ್ಜಿ ವಹಿಸಿ ಖುದ್ದು ಮುಂದೆನಿಂತು ಅಡುಗೆ ಮಾಡಿಸುವುದರಿಂದ ಜನರಿಗೆ ಹಂಚುವವರೆಗೂ ನಿತ್ಯ ಕಾಯಕದಲ್ಲಿ ತೊಡಗಿಸಿಕೊಂಡಿರುವ ಕುಮಾರಣ್ಣನ ಕಾಯಕನಿಷ್ಠೆ ಶ್ಲಾಘನೀಯವೇ ಸರಿ.

ಕೋವಿಡ್ ಸೆಂಟರ್ ಆಗಿ ಪರಿವರ್ತನೆಯಾಗಿರುವ ಪಟ್ಟಣದ ಹಲವು ಆಸ್ಪತ್ರೆಗಳಿಗೆ ತೆರಳಿ ಅನ್ನದ ಪೊಟ್ಟಣಗಳನ್ನು ವಿತರಿಸುವ ಕುಮಾರಣ್ಣನ ತಂಡದ ಸದಸ್ಯರಾದ ಆಜಪ್ಪ ಕರಡಕಲ್, ಎಂಡಿ ಇಸ್ಮಾಯಿಲ್, ಮಂಜುನಾಥ, ನಾಗರಾಜ ಬೋವಿ ಸೇರಿ ಕೆಲವೇ ಜನ ಆಪ್ತ ಬಳಗದ ಸಹಾಯದಿಂದ ಪ್ರತಿನಿತ್ಯವೂ ಆಹಾರ ಪೊಟ್ಟಣಗಳನ್ನು ಹಸಿದ ಹೊಟ್ಟೆಗೆ ತಲುಪಿಸಲಾಗುತ್ತಿದೆ. ಚೆನ್ನುಕುಮಾರ ಸೇರಿ ಅವರ ಆಪ್ತ ಬಳಗದವರು ಮನೆ ಸಂಸಾರದಿಂದ ದೂರ ಉಳಿಯುವ ಮೂಲಕ ಸಮಾಜಸೇವೆಯಲ್ಲಿ ತೊಡಗಿಕೊಂಡಿರುವುದು ತಪಸ್ಸೇ ಸರಿ.

ಅನ್ನದಾನಕ್ಕಿಂತ ಶ್ರೇಷ್ಠ ದಾನ ಮತ್ತೊಂದಿಲ್ಲ ಎನ್ನುವುದನ್ನು ಮನಗಂಡಿರುವ ಚೆನ್ನುಕುಮಾರ ದೇವದುರ್ಗ ಶಾಸಕ ಕೆ.ಶಿವನಗೌಡ ನಾಯಕರ ಅಭಿಮಾನಿ ಕೂಡ. ನಿತ್ಯ 40 ಸಾವಿರ ಜನರಿಗೆ ಊಟದ ವ್ಯವಸ್ಥೆ ಮಾಡುತ್ತಿರುವ ಶಿವನಗೌಡರ ಕಾರ್ಯವೂ ಇವರಿಗೆ ಪ್ರೇರಣೆಯಾಗಿದೆ.

ಸಮಾಜದಲ್ಲಿ ಇಂಥಹ ಸ್ಥಿತಿವಂತರು ಬಹಳಷ್ಟು ಜನರಿದ್ದಾರೆ. ಆದರೆ, ಕೊಡುವ ಮನಸ್ಸುಳ್ಳವರು ಮಾತ್ರ ವಿರಳ. ಚೆನ್ನುಕುಮಾರರ ವಿಚಾರಧಾರೆಗಳು ಹಾಗೂ ಕೊಡುಗೈ ದಾನದ ಕಾರ್ಯ ಎಲೆಮರಿಯ ಕಾಯಿಯಂತೆ ಇದೆ. ಇವರಿಂದ ಇತರರು ಪ್ರೇರಣೆ ಪಡೆದು ಸಮಾಜದಲ್ಲಿನ ಬಡವರ ಸಹಾಯಕ್ಕೆ ಮುಂದಾಗುವ ಮೂಲಕ ಮಾನವೀಯತೆಯನ್ನು ಮೆರೆಯುವ ಅಗತ್ಯತೆ ಇದೆ.

One thought on “ಕೊಪ್ಪಳ ಗವಿಸಿದ್ದೇಶ್ವರ ಶ್ರೀಗಳ ದಾಸೋಹ ಪ್ರೇರಣೆಗೆ ಮನಸೋತು ಅನ್ನಸಂತರ್ಪಣೆ ಹಸಿದ ಹೊಟ್ಟೆಗೆ ಅನ್ನ ನೀಡುವ ಲಿಂಗಸುಗೂರಿನಲ್ಲೊಬ್ಬ ಅನ್ನದಾತ ಕುಮಾರಣ್ಣ..!

  • Very good work Chennu Kumar ji.. Keep it up good work.. God bless you n ur family

    Reply

Leave a Reply

Your email address will not be published. Required fields are marked *

error: Content is protected !!