ಲಿಂಗಸುಗೂರು : ಎಂಟು ಜನ ಶಿಕ್ಷಕರ ಬಲಿ ಪಡೆದ ಮಹಾಮಾರಿ..!
ಲಿಂಗಸುಗೂರು : ಕೊರೊನಾ ಮಹಾಮಾರಿಯು ತನ್ನ ಮೊದಲ ಅಲೆಗೆ ಇಬ್ಬರು, ಎರಡನೇ ಅಲೆಗೆ ಆರು ಜನ ಸೇರಿ ಇದುವರೆಗೆ ಒಟ್ಟು ಎಂಟು ಜನ ಶಿಕ್ಷಕರನ್ನು ಬಲಿ ಪಡೆದಿದೆ. ತಾಲೂಕಿನ ಶಿಕ್ಷಣ ಇಲಾಖೆಯಲ್ಲಿ ಸಾವುಗಳ ಸಂಖ್ಯೆ 8ಕ್ಕೇರಿದ್ದರಿಂದ ಶಿಕ್ಷಕ ವಲಯದಲ್ಲಿ ಆತಂಕ ಮನೆ ಮಾಡಿದರು.
ಲಾಕ್‍ಡೌನ್ ವೇಳೆ ಶಾಲೆಗಳು ತೆರೆದ ಹಾಗೂ ಉಪಚುನಾವಣೆಯಲ್ಲಿ ಕರ್ತವ್ಯ ನಿರ್ವಹಣೆ ಮಾಡಿದ ಹಿನ್ನೆಲೆಯಲ್ಲಿ ಸೊಂಕಿಗೆ ಬಹಳಷ್ಟು ಶಿಕ್ಷಕರು ಒಳಗಾಗಿದ್ದರು. ಹಲವರು ಚಿಕಿತ್ಸೆ ಪಡೆದು ಆರೋಗ್ಯ ಸುಧಾರಿಸಿಕೊಂಡರೆ ಎರಡನೇ ಅಲೆಗೆ ಆರು ಜನರು ತಮ್ಮ ಅಮೂಲ್ಯವಾದ ಪ್ರಾಣವನ್ನು ಕಳೆದುಕೊಂಡಿದ್ದಾರೆ.
ತಾಲೂಕಿನ ಈಚನಾಳ, ಆಮದಿಹಾಳ, ಆದಾಪೂರ, ದೇವರಭೂಪೂರ ದೊಡ್ಡಿ, ಹೆಗ್ಗಾಪೂರ ತಾಂಡ, ಬೇಡರಕಾರಲಕುಂಟಿ, ಮಿಂಚೇರಿ ತಾಂಡಾ, ಮಸ್ಕಿ ಗಾಂಧಿನಗರದ ಪ್ರಾಥಮಿಕ ಮತ್ತು ಕಿರಿಯ ಪ್ರಾಥಮಿಕ ಹಾಗೂ ಅನುದಾನಿತ ಶಾಲೆಗಳ ಶಿಕ್ಷಕರು ಸಾವನ್ನಪ್ಪಿರುವ ದುರ್ದೈವಿಗಳಾಗಿದ್ದಾರೆ.
ಜನಗಣತಿ, ಮಕ್ಕಳ ಗಣತಿ, ಮತದಾರರ ಪಟ್ಟಿ ತಯಾರಿಕೆ ಸೇರಿ ಇಲಾಖೇತರ ಕೆಲಸಗಳಿಗೂ ಶಿಕ್ಷಕರನ್ನು ಬಳಕೆ ಮಾಡಿಕೊಳ್ಳಲಾಗುತ್ತಿದ್ದು, ಶಿಕ್ಷಕರ ಬದುಕು ಅಭದ್ರತೆಯಲ್ಲಿದೆ. ಇತ್ತೀಚೆಗೆ ಪುರಸಭೆ ವತಿಯಿಂದ ನಿರ್ಮಿಸಲಾದ ಕೋವಿಡ್ ಚೆಕ್‍ಪೋಸ್ಟ್‍ಗಳಲ್ಲಿ ದಂಡ ವಸೂಲಾತಿಗೆ ಶಿಕ್ಷಕರನ್ನು ನೇಮಕ ಮಾಡಲಾಗಿದೆ. ಶೋಚನೀತ ಸ್ಥಿತಿಯಲ್ಲಿರುವ ಶಿಕ್ಷಕರ ಕುಟುಂಬಗಳ ನೆರವಿಗೆ ಸರಕಾರ ಸ್ಪಂಧಿಸಬೇಕೆನ್ನುವ ಒತ್ತಾಯಗಳು ಕೇಳಿ ಬರುತ್ತಿವೆ. ಈಗಾಗಲೇ ಹಲವು ಜನರು ಸೊಂಕಿಗೆ ಒಳಗಾಗಿ ಚಿಕಿತ್ಸೆ ಪಡೆಯುತ್ತಿದ್ದಾರೆಂದು ಹೇಳಲಾಗುತ್ತಿದೆ.

