ರಾಯಚೂರು

ಲಿಂಗಸುಗೂರು : ಅನಗತ್ಯ ಓಡಾಟ ತಡೆಗೆ ಕೋವಿಡ್ ಚೆಕ್‍ಪೋಸ್ಟ್

ಲಿಂಗಸುಗೂರು : ಲಾಕ್‍ಡೌನ್ ಸಂದರ್ಭದಲ್ಲಿ ಜನರ ಅನಗತ್ಯ ಓಡಾಟಕ್ಕೆ ಬ್ರೇಕ್ ಹಾಕಲು ಪುರಸಭೆ ವತಿಯಿಂದ ಚೆಕ್‍ಪೋಸ್ಟ್‍ಗಳನ್ನು ಆರಂಭಿಸಲಾಗಿದೆ.


ಚೆಕ್‍ಪೋಸ್ಟ್‍ಗಳಿಗೆ ಚಾಲನೆ ನೀಡಿ ಮಾತನಾಡಿದ ಪುರಸಭೆ ಮುಖ್ಯಾಧಿಕಾರಿ ವಿಜಯಲಕ್ಷ್ಮಿ, ಜಿಲ್ಲಾಧಿಕಾರಿಗಳ ಸೂಚನೆಯಂತೆ ಪಟ್ಟಣ ಪ್ರದೇಶದಲ್ಲಿ ಅನಗತ್ಯವಾಗಿ ಓಡಾಡುವವರನ್ನು ನಿಯಂತ್ರಿಸಲು ಗಡಿಯಾರ ಚೌಕ್, ಬಸ್ಟಾಂಡ್ ವೃತ್ತ, ಬಸವಸಾಗರ ವೃತ್ತ ಸೇರಿ ಮೂರು ಕಡೆಗಳಲ್ಲಿ ಚೆಕ್‍ಪೋಸ್ಟ್‍ಗಳನ್ನು ಆರಂಭಿಸಲಾಗಿದೆ. ಸರಕಾರಿ, ಅನುದಾನಿತ ಶಾಲೆಯ ಶಿಕ್ಷಕರುಗಳನ್ನು ಕರ್ತವ್ಯಕ್ಕೆ ನೇಮಕ ಮಾಡಲಾಗಿದೆ. ಅನಗತ್ಯವಾಗಿ ಓಡಾಟ ಮಾಡುವವರಿಗೆ ತಿಳಿಹೇಳುವ ಜೊತೆಗೆ ದಂಡ ಹಾಕುವ ಕೆಲಸವನ್ನೂ ಇಲ್ಲಿ ಮಾಡಲಾಗುತ್ತದೆ ಎಂದರು.


ಮೇ 13ಕ್ಕೆ 27, ಮೇ 14ಕ್ಕೆ 20 ಸೋಂಕಿತರು ಪತ್ತೆಯಾಗಿದ್ದಾರೆ. ಪತ್ತೆಯಾದ ಸೋಂಕಿತರಿಗೆ ಬೇಕಾದ ಔಷಧೋಪಚಾರ ಮಾಡಿ ಹೋಂ ಐಸೋಲೇಶನ್‍ಗೆ ಸೂಚಿಸಲು ಪುರಸಭೆ ಸಿಬ್ಬಂಧಿಗಳ 5 ತಂಡಗಳನ್ನು ರಚಿಸಲಾಗಿದೆ. ನಮ್ಮ ತಂಡದ ಸದಸ್ಯರು ವಾರ್ಡ್‍ವಾರು ಮನೆ-ಮನೆಗೆ ಭೇಟಿ ನೀಡಿ, ನಿವಾಸಿಗಳ ಆರೋಗ್ಯದ ಬಗ್ಗೆ ವಿಚಾರಣೆ ಮಾಡುತ್ತಾರೆ. ಆರೋಗ್ಯ ಸಮಸ್ಯೆಗಳೇನಾದರೂ ಕಂಡು ಬಂದಲ್ಲಿ, ಅಂಥವರನ್ನು ವೈದ್ಯರ ಸೂಚನೆ ಮೇರೆಗೆ ಮನೆಯಲ್ಲೇ ಕ್ವಾರಂಟೈನ್ ಆಗಲು ಸೂಚನೆ ನೀಡುತ್ತಾರೆ.

ಮನೆಯಲ್ಲಿ ಕ್ವಾರಂಟೈನ್‍ಗೆ ಅನುಕೂಲ ಇಲ್ಲದ ಪಕ್ಷದಲ್ಲಿ ಕರಡಕಲ್ ಬಳಿ ಆರಂಭಿಸಲಾಗಿರುವ ಕೋವಿಡ್ ಕೇರ್ ಸೆಂಟರ್‍ಗೆ ಕಳುಹಿಸುವ ಜವಾಬ್ದಾರಿ ಸಿಬ್ಬಂಧಿಗಳದ್ದಾಗಿದೆ ಎಂದರು. ದಿನದಿಂದ ದಿನಕ್ಕೆ ಪ್ರಕರಣಗಳು ಉಲ್ಬಣಗೊಳ್ಳುತ್ತಿರುವ ಈ ಸಂಧಿಗ್ಧ ಪರಿಸ್ಥಿತಿಯಲ್ಲಿ ಸಾರ್ವಜನಿಕರು ಎಚ್ಚೆತ್ತುಕೊಂಡು ಮನೆಗಳಲ್ಲಿಯೇ ಇದ್ದು, ಸರಕಾರದ ಶ್ರಮಕ್ಕೆ ಸಾಥ್ ನೀಡಬೇಕೆಂದು ವಿಜಯಲಕ್ಷ್ಮಿ ಮನವಿ ಮಾಡಿದರು.


ಪುರಸಭೆ ಅದ್ಯಕ್ಷೆ ಗದ್ದೆಮ್ಮ ಭೋವಿ, ಉಪಾದ್ಯಕ್ಷ ಮೊಹ್ಮದ್ ರಫಿ, ಪಿಎಸ್‍ಐ ಪ್ರಕಾಶರೆಡ್ಡಿ ಡಂಬಳ್ ಸೇರಿ ಪುರಸಭೆ ಸಿಬ್ಬಂಧಿಗಳು, ಶಿಕ್ಷಕರು ಈ ಸಂದರ್ಭದಲ್ಲಿ ಇದ್ದರು.

Leave a Reply

Your email address will not be published. Required fields are marked *

error: Content is protected !!