ಲಾಕ್‍ಡೌನ್ ಭೀತಿ ತುಂಬಿ, ತಂಬಾಕು ವ್ಯಾಪಾರಿಗಳಿಂದ ಸುಲಿಗೆ..?
ವರದಿ: ಖಾಜಾಹುಸೇನ್
ಲಿಂಗಸುಗೂರು : ರಾಜ್ಯದಲ್ಲಿ ಕೊರೊನಾ ಎರಡನೇ ಅಲೆ ಆರಂಭವಾಗಿದ್ದು,ಸರಕಾರ ಟಫ್ ರೂಲ್ಸ್‍ಗಳನ್ನು ಜಾರಿಗೆ ತರುತ್ತಲೇ ಇದೆ. ಲಾಕ್‍ಡೌನ್ ಬಗ್ಗೆ ಸಾರ್ವಜನಿಕರಲ್ಲಿ ಗೊಂದಲಗಳಿದ್ದು, ಇದರ ಲಾಭ ಪಡೆಯುತ್ತಿರುವ
ತಂಬಾಕು ಉತ್ಪನ್ನದ ಸಗಟು ವ್ಯಾಪಾರಿಗಳು ಮಾತ್ರ ಸುಲಿಗೆಯಲ್ಲಿ ತೊಡಗಿಕೊಂಡಿದ್ದಾರೆನ್ನುವ ಮಾತುಗಳು ಕೇಳಿ ಬರುತ್ತಿವೆ.
ಪಟ್ಟಣದ ರಾಯಚೂರು ರಸ್ತೆಯಲ್ಲಿರುವ ತಂಬಾಕು ಸಗಟು ವ್ಯಾಪಾರಿ ಮಳಿಗೆಯಲ್ಲಿ ಗುಟಕಾ, ತಂಬಾಕು, ಸಿಗರೇಟು ನಿಗದಿತ ದರಕ್ಕಿಂತ ದುಪ್ಪಟ್ಟು ದರಕ್ಕೆ ಮಾರಾಟ ಮಾಡಲಾಗುತ್ತಿರುವ ದೃಶ್ಯ ರವಿವಾರ
ಕಂಡುಬಂತು. ಏಕಾಏಕಿ ದರ ಏರಿಕೆ ಆಗಿರುವ ಪರಿಣಾಮ ಬಡ ವ್ಯಾಪಾರಿಗಳು ಕಂಗಾಲಾಗಿದ್ದಾರೆ.
ಫುಟ್‍ಪಾತ್ ವ್ಯಾಪಾರಿಗಳು, ಪಾನ್‍ಶಾಪ್, ಚಹಾದ ಬಂಡಿ ಸೇರಿ ಬಡ ವ್ಯಾಪಾರಿಗಳು ಇದ್ದುದರಲ್ಲಿಯೇ ಸಾಮಗ್ರಿಗಳನ್ನು ತಂದು ವ್ಯಾಪಾರ ಮಾಡಿಕೊಳ್ಳುತ್ತಾರೆ. ಆದರೆ, ಅಚಾನಕ್ಕಾಗಿ ಬೆಲೆ ಏರಿಕೆ ಆಗಿರುವುದರಿಂದ ಬಡ ವ್ಯಾಪಾರಿಗಳು ಮಾತ್ರ ಕಂಗಾಲಾಗಿರುವುದಂತೂ ಸುಳ್ಳಲ್ಲ. ದರ ಏರಿಕೆ ಮಾತುಗಳು ಕೇಳಿ ಬಂದ ಪರಿಣಾಮ ಹತ್ತಾರು ವ್ಯಾಪಾರಿಗಳು ಸಗಟು
ವ್ಯಾಪಾರ ಮಳಿಗೆಗೆ ಖರೀದಿಗೆಂದು ಮುಗಿ ಬಿದ್ದರು.
ತಂಬಾಕು ಉತ್ಪನ್ನಗಳ ಮಾರಾಟ ಮಾಡುವವರ ಬಳಿಗೆ ತೆರಳುವ ಅಧಿಕಾರಿಗಳು ಬಡ ವ್ಯಾಪಾರಿಗಳಿಗೆ ದಂಡ ಹಾಕುವುದಷ್ಟೇ ಮಾಡುತ್ತಾರೆಯೇ ವಿನಹ ಸಗಟು ವ್ಯಾಪಾರಿಗಳ ಬಳಿಗೆ ತೆರಳಿ ಯಾವುದೇ ಕ್ರಮ ಕೈಗೊಳ್ಳಲು ಹಿಂಜರಿಯುತ್ತಿರುವುದಾದರೂ ಯಾಕೆ? ಎನ್ನುವ ಪ್ರಶ್ನೆಗಳು ಜನರಲ್ಲೀಗ ಕೇಳಿಬರುತ್ತಿವೆ.
ಲಾಕ್‍ಡೌನ್ ಆಗುತ್ತೋ ಇಲ್ಲವೋ ಗೊತ್ತಿಲ್ಲ. ಆದರೆ, ತಂಬಾಕು ಉತ್ಪನ್ನ ಮಾರಾಟ ಮಾಡುವ ಸಗಟು ವ್ಯಾಪಾರಿಗಳು ಮಾತ್ರ ಈ ಅವಕಾಶವನ್ನೇ ಬಳಸಿಕೊಂಡು ಬಡ ವ್ಯಾಪಾರಿಗಳ, ಗ್ರಾಹಕರನ್ನು ಸುಲಿಗೆ ಮಾಡಲು ಹೊರಟಿರುವ ಕ್ರಮ ಮಾತ್ರ ಖಂಡನೀಯವಾಗಿದೆ. ಈ ಬಗ್ಗೆ ಮಾಹಿತಿ ಇದ್ದಾಗ್ಯೂ ಕೆಲ ಅಧಿಕಾರಿಗಳು ಕ್ರಮಕ್ಕೆ ಮುಂದಾಗದೇ ಕಣ್ಮುಚ್ಚಿ ಕುಳಿತಿರುವುದು ವ್ಯವಸ್ಥೆಯ ಅವ್ಯವಸ್ಥೆಗೆ ಹಿಡಿದ ಕೈಗನ್ನಡಿಯಾಗಿದೆ.

