ಪಂಚಾಯಿತಿ ಸಮರ : ಬಿಗಿ ಭದ್ರತೆಯಲ್ಲಿ ಮತಗಳ ಎಣಿಕೆ ಆರಂಭ ಅಭ್ಯರ್ಥಿಗಳ ಎದೆಯಲ್ಲಿ ಢವಢವ..!
ವರದಿ : ಖಾಜಾಹುಸೇನ್
ಲಿಂಗಸುಗೂರು : ಲಕ್ಷಗಟ್ಟಲೇ ಹಣವನ್ನು ಪ್ರತಿಯೊಬ್ಬ ಅಭ್ಯರ್ಥಿ ಖರ್ಚು ಮಾಡುವ ಮೂಲಕ ಚುನಾವಣೆಯನ್ನು ಎದುರಿಸಿದ್ದು, ಈಗ ಫಲಿತಾಂಶಕ್ಕಾಗಿ ಕಾಯುವ ಘಳಿಗೆ ಬಂದಿದೆ. ಬೆಳಗಿನಿಂದ ಸ್ಥಳೀಯ ಸರಕಾರಿ ಪದವೀ ಪೂರ್ವ ಕಾಲೇಜಿನಲ್ಲಿ ಮತಗಳ ಎಣಿಕೆ ಕಾರ್ಯ ಆರಂಭವಾಗಿದೆ. ಅಖಾಡದಲ್ಲಿರುವ ಅಭ್ಯರ್ಥಿಗಳ ಎದೆಯಲ್ಲಿ ಢವಢವ ಶುರುವಾಗಿದೆ.
ತಾಲೂಕಿನ 29 ಗ್ರಾಮ ಪಂಚಾಯಿತಿಗಳಿಗೆ ನಡೆದ ಚುನಾವಣೆಯ ಫಲಿತಾಂಶಗಳೆಲ್ಲಾ ಇಂದು ಪ್ರಕಟವಾಗುತ್ತವೆ. ಸತತ ಒಂದು ತಿಂಗಳಿಂದ ಚುನಾವಣೆಗೆ ಸ್ಪರ್ಧಿಸಿರುವ ಸ್ಪರ್ದಾಳುಗಳು ಹಾಗೂ ಬೆಂಬಲಿಗರು ಹಗಲಿರುಳು ಗೆಲುವಿಗಾಗಿ ಶ್ರಮಿಸಿದ್ದಾರೆ. ರಾಜಕೀಯ ಪಕ್ಷದ ಚಿಹ್ನಿಗಳು ಇಲ್ಲದಿದ್ದರೂ ಕಾಂಗ್ರೆಸ್, ಜೆಡಿಎಸ್ ಹಾಗೂ ಬಿಜೆಪಿ ಬೆಂಬಲಿತ ಅಭ್ಯರ್ಥಿಗಳು ತಮ್ಮದೇ ಆದ ವರಸೆಯಲ್ಲಿ ಚುನಾವಣೆಯನ್ನು ಎದುರಿಸಿದ್ದಾರೆ. ಫಲಿತಾಂಶದ ನಿರೀಕ್ಷೆಯಲ್ಲಿ ಸಾವಿರಾರು ಜನ ಕಾಲೇಜು ಆವರಣದ ಮುಂದೆ ಜಮಾಯಿಸಿದ್ದಾರೆ.

ಮತ ಎಣಿಕೆ ಕೇಂದ್ರದೊಳಗೆ ಹೋಗಲು ಕಡ್ಡಾಯವಾಗಿ ಮಾಸ್ಕ್ ಹಾಗೂ ಸ್ಯಾನಿಟೈಜರ್ ಮಾಡಲಾಗುತ್ತಿದೆ. ಅಭ್ಯರ್ಥಿಗಳು ಏಜೆಂಟರು ಮಾತ್ರ ಕೇಂದ್ರದೊಳಗೆ ಪ್ರವೇಶಿಸಲು ಅವಕಾಶವಿದೆ. ಒಳ ಬರುವ ಎಲ್ಲರಿಗೂ ಕಡ್ಡಾಯವಾಗಿ ಥರ್ಮಲ್ ಟೆಂಪ್ರೇಚರ್ ಚೆಕ್ ಮಾಡಲಾಗುತ್ತಿದೆ. ಬಸ್ಟಾಂಡ್ ಮುಂಭಾಗದಿಂದ ಅಂಚೇ ಕಚೇರಿವರೆಗಿನ ರಸ್ತೆಯಲ್ಲಿ ವಾಹನಗಳ ಸಂಚಾರವನ್ನು ಸ್ಥಗಿತಗೊಳಿಸಲಾಗಿದೆ. ಬೈಪಾಸ್ ರಸ್ತೆಯಿಂದ ವಾಹನಗಳ ಓಡಾಟಕ್ಕೆ ವ್ಯವಸ್ಥೆ ಮಾಡಲಾಗಿದೆ.

ಬಿಗಿ ಭದ್ರತೆ
ಡಿವೈಎಸ್‍ಪಿ ಹಾಗೂ ಸಿಪಿಐ ನೇತೃತ್ವದಲ್ಲಿ 3 ಪಿಎಸ್‍ಐ, 7 ಎಎಸ್‍ಐ, 28 ಸಿಬ್ಬಂಧಿಗಳು, 1 ಡಿಎಆರ್ ವ್ಯಾನ್, 1 ಕೆಎಸ್‍ಆರ್‍ಪಿ ತುಕಡಿಯನ್ನು ಭದ್ರತೆಗೆ ನಿಯೋಜನೆ ಮಾಡಲಾಗಿದೆ. ಬೆಳಗಿನಿಂದಲೇ ಪಟ್ಟಣಕ್ಕೆ ಸಾವಿರಾರು ಸಂಖ್ಯೆಯಲ್ಲಿ ಗ್ರಾಮೀಣ ಪ್ರದೇಶದಿಂದ ಚುನಾವಣಾ ಫಲಿತಾಂಶಕ್ಕೆ ಬರುತ್ತಿದ್ದಾರೆ. ಜನರಿಂದ ಇಡೀ ರಸ್ತೆಯೇ ತುಂಬಿ ತುಳುಕುತ್ತಿದೆ. ಜನರನ್ನು ನಿಯಂತ್ರಿಸುವಲ್ಲಿ ಪೋಲಿಸರು ಹೈರಾಣಾಗುತ್ತಿದ್ದಾರೆ. ಕಾಲೇಜು ಸುತ್ತಮುತ್ತ ಯಾವುದೇ ಅಹಿತಕರ ಘಟನೆಗಳು ಜರುಗದಂತೆ ಪೋಲಿಸ್ ಬಿಗಿ ಭದ್ರತೆಯನ್ನು ಒದಗಿಸಲಾಗಿದೆ.

ಮತಗಳ ಎಣಿಕೆ ಪ್ರಕ್ರಿಯೆ
ಕಾಲೇಜಿನ 6 ಕೊಠಡಿಗಳನ್ನು ಮತಗಳ ಎಣಿಕೆ ಕೇಂದ್ರಗಳನ್ನಾಗಿ ಮಾರ್ಪಡಿಸಲಾಗಿದೆ. ಎಲ್ಲಾ ಕೊಠಡಿಗಳೂ ಸೇರಿ 74 ಟೇಬಲ್‍ಗಳ ವ್ಯವಸ್ಥೆ ಮಾಡಲಾಗಿದೆ. ಪ್ರತಿ ಟೇಬಲ್‍ಗೂ ಓರ್ವ ಸುಪರ್‍ವೈಸರ್ ಇಬ್ಬರು ಸಹಾಯಕ ಸಿಬ್ಬಂಧಿಗಳನ್ನು ಆಡಳಿತ ನೇಮಕ ಮಾಡಿದೆ. ಅಭ್ಯರ್ಥಿಯ ಏಜೆಂಟ್ ಮತಎಣಿಕೆಯಲ್ಲಿ ಪಾಲ್ಗೊಳ್ಳಲು ಅವಕಾಶ ನೀಡಲಾಗಿದೆ.
ಸಹಾಯಕ ಆಯುಕ್ತ ರಾಜಶೇಖರ ಡಂಬಳ್, ತಹಸೀಲ್ದಾರ್ ಚಾಮರಾಜ ಪಾಟೀಲ್‍ರ ನಿಗರಾನಿಯಲ್ಲಿ ಮತಎಣಿಕೆ ಕಾರ್ಯ ಸಾಂಗವಾಗಿ ನಡೆದಿದೆ.
ಮುಂಬರುವ ವಿಧಾನಸಭೆ ಚುನಾವಣೆಗೆ ಈ ಪಂಚಾಯತ್ ಚುನಾವಣೆ ಬುನಾದಿಯೆಂದೇ ಪರಿಗಣಿಸಿರುವ ರಾಜಕೀಯ ಪಕ್ಷಗಳು ಹೇರಳವಾಗಿ ಹಣವನ್ನು ಖರ್ಚು ಮಾಡಿವೆ. ಕಾರ್ಯಕರ್ತರ ಮೂಲಕ ಮಧ್ಯ-ಹಣ-ಮಾಂಸ-ಬಟ್ಟೆ ಹೀಗೆ ನಾನಾ ಆಮಿಶಗಳನ್ನು ಒಡ್ಡಿ ಮತಗಳನ್ನು ಪಡೆದುಕೊಳ್ಳಲಾಗಿದೆ. ಕೆಲವೆಡೆ ರಾಜಕೀಯ ಪಕ್ಷಗಳು ಈ ಚುನಾವಣೆಯನ್ನು ಪ್ರತಿಷ್ಠೆಯಾಗಿ ಪರಿಗಣಿಸಿವೆ. ಹಿರಿಯ ಮುಖಂಡರುಗಳೇ ಖುದ್ದಾಗಿ ಅಖಾಡಕ್ಕಿಳಿದು ಚುನಾವಣೆ ನಡೆಸಿದ್ದಾರೆ.
ಕ್ಷೇತ್ರದಲ್ಲಿ ಕಾಂಗ್ರೆಸ್-ಬಿಜೆಪಿ ನೇರವಾಗಿ ಹಣಾಹಣೆಯಲ್ಲಿವೆ. ಈಗಾಗಲೇ ಸುಮಾರು ಜನರು ಅವಿರೋಧವಾಗಿ ಆಯ್ಕೆಯಾಗಿದ್ದೂ ಉಂಟು. ಆಯ್ಕಯಾದ ನೂತನ ಸದಸ್ಯರುಗಳಿಗೆ ಆಯಾ ಪಕ್ಷದ ಹೈಕಮಾಂಡ್ ಸನ್ಮಾನಿಸಿ ಗೌರವಿಸಿದೆ. ಆದರೆ, ಇಂದು ಬರುವ ಫಲಿತಾಂಶ ಮುಂಬರುವ ರಾಜಕೀಯ ಭವಿಷ್ಯವನ್ನು ನಿರ್ಧಾರ ಮಾಡಲಿವೆ ಎನ್ನುವ ಲೆಕ್ಕಾಚಾರ ಸಾರ್ವಜನಿಕರದ್ದಾಗಿದೆ.

