ಮನೆ ಮುಂದೆ ನಿಲ್ಲಿಸಿದ್ದ ಬೈಕ್‍ಗಳಲ್ಲಿನ ಪೆಟ್ರೋಲ್ ಕದ್ದ ಚಾಲಾಕಿ ಕಳ್ಳರು..!
ಲಿಂಗಸುಗೂರು : ಕಳ್ಳರ ಕಾಟ ಪಟ್ಟಣದಲ್ಲಿ ಎಷ್ಟರ ಮಟ್ಟಿಗೆ ಇದೆ ಎಂದರೆ, ಮನೆಗಳ ಮುಂದೆ ನಿಲ್ಲಿಸಿದ್ದ ಬೈಕ್‍ಗಳ ಟ್ಯಾಂಕ್‍ಗೆ ಸಂಪರ್ಕ ಕಲ್ಪಿಸುವ ಪೈಪನ್ನು ಕಟ್ ಮಾಡಿ ಪೆಟ್ರೋಲ್ ಕದ್ದ ಘಟನೆ ಶನಿವಾರ ರಾತ್ರಿ ಜರುಗಿದೆ.
ಪುರಸಭೆ ವ್ಯಾಪ್ತಿಯ 18ನೇ ವಾರ್ಡ್ ವ್ಯಾಪ್ತಿಯಲ್ಲಿನ ಸಾಯಿ ಮಂದಿರದ ಸುತ್ತಮುತ್ತಲಿನ ಪ್ರದೇಶದಲ್ಲಿ ಮನೆಗಳ ಮುಂದೆ ನಿಲ್ಲಿಸಿದ್ದ ಸುಮಾರು 20 ದ್ವಿಚಕ್ರ ವಾಹನಗಳಿಂದ ಕಳ್ಳರು ಪೆಟ್ರೋಲ್ ಕದ್ದಿದ್ದಾರೆ. ಇದರಲ್ಲಿ ಪತ್ರಕರ್ತರದ್ದೂ ವಾಹನ ಇರುವುದು ವಿಶೇಷ.
ನಿತ್ಯದ ಕಾರ್ಯಕ್ಕೆಂದು ಬೆಳಗ್ಗೆ ವಾಹನ ತೆಗೆಯುವಾಗ ಪೆಟ್ರೋಲ್ ಪೈಪ್ ಹೊರಗೆ ಕಟ್ ಆಗಿರುವುದು ಗಮನಕ್ಕೆ ಬಂದ ಕೂಡಲೇ ಪೋಲಿಸರಿಗೆ ಕರೆ ಮಾಡಲಾಗಿದೆ. ಸ್ಥಳಕ್ಕೆ ಬಂದ ಪಿಎಸ್‍ಐ ಪ್ರಕಾಶರೆಡ್ಡಿ ಡಂಬಳ್ ಪರಿಶೀಲನೆ ನಡೆಸಿ ತನಿಖೆ ಕೈಗೊಂಡಿದ್ದಾರೆ.
ರಾತ್ರಿ ವೇಳೆ ಈ ಏರಿಯಾದಲ್ಲಿ ಪೋಲಿಸರು ಗಸ್ತು ಬರುವುದು ಕಡಿಮೆ. ಅಲ್ಲದೇ ಸಂಜೆಯಾಗುತ್ತಲೇ ಈ ಪ್ರದೇಶ ನಿರ್ಜನವಾಗುವುದರಿಂದ ಕಳ್ಳರಿಗಿದು ಆಹ್ವಾನ ನೀಡಿದಂತಾಗಿದೆ. ಪೋಲಿಸರು ಪ್ರತಿನಿತ್ಯ ರಾತ್ರಿ ಬೀಟ್‍ನಲ್ಲಿ ಸುತ್ತಾಡುವ ಮೂಲಕ ಪಟ್ಟಣದಲ್ಲಿ ನಡೆಯುತ್ತಿರುವ ಕಳ್ಳತನ ಪ್ರಕರಣಕ್ಕೆ ಇತಿಶ್ರೀ ಹಾಡಬೇಕು ಎನ್ನುವ ಒತ್ತಾಯಗಳು ಸಾರ್ವಜನಿಕರಲ್ಲಿ ಕೇಳಿ ಬರುತ್ತಿವೆ.

