ನರೇಗಾ ಕೂಲಿ ಹಣ ಪಾವತಿಗೆ ಒತ್ತಾಯಿಸಿ ಪ್ರತಿಭಟನೆ
ಲಿಂಗಸುಗೂರು : ತಾಲೂಕಿನ ನರಕಲದಿನ್ನಿ ಗ್ರಾಮ ಪಂಚಾಯಿತಿ ವ್ಯಾಪ್ತಿಯ ಕಮಲದಿನ್ನಿ ಗ್ರಾಮದಲ್ಲಿ ನರೇಗಾ ಯೋಜನೆಯಡಿ ಕೆಲಸ ಮಾಡಿದ ಕೂಲಿಕಾರ್ಮಿಕರಿಗೆ ಕೂಲಿ ಹಣ ಪಾವತಿ ಮಾಡಬೇಕೆಂದು ಕಾರ್ಮಿಕರು ಒತ್ತಾಯಿಸಿದರು.
ಸ್ಥಳೀಯ ತಾಲೂಕು ಪಂಚಾಯತ್ ಆವರಣದಲ್ಲಿ ಪ್ರತಿಭಟನೆ ಮಾಡಿದ ಕೂಲಿಕಾರ್ಮಿಕರು, ಕಮಲದಿನ್ನಿ ಗ್ರಾಮದಲ್ಲಿ ಮೆಟ್‍ಗಳ ಮೂಲಕ ಮೇ 3 ರಿಂದ 18ರ ವರೆಗೆ ಸುಮಾರು 9 ದಿನಗಳ ಕಾಲ ಹೊಸ ಕೆರೆ ನಿರ್ಮಾಣ ಕಾಮಗಾರಿ ಕೈಗೊಳ್ಳಲಾಗಿತ್ತು. ಆ ಕೂಲಿ ಹಣವನ್ನು ಪಾವತಿ ಮಾಡಿಲ್ಲ. ಜೆಇ ಮತ್ತು ಪಿಡಿಓಅವರ ನಿರ್ಲಕ್ಷ್ಯದಿಂದ ನಮಗೆ ಕೂಲಿ ಹಣ ಪಾವತಿಯಾಗಿಲ್ಲ.
ವಿಚಾರಿಸಿದಾಗ 60 ಜನ ಕೂಲಿಕಾರ್ಮಿಕರು ಕೆಲಸ ಮಾಡಿದ್ದು, 40 ಜನರಿಗೆ ಮಾತ್ರ ಎನ್.ಎಂ.ಆರ್. ಸೇವ್ ಮಾಡಿ ಅದರಲ್ಲಿ ಕೆಲವರಿಗೆ ದಿನಕ್ಕೆ 175 ರೂಪಾಯಿಯಂತೆ ಮತ್ತು ಇನ್ನು ಕೆಲವರಿಗೆ 220 ರೂಪಾಯಿ ಕೂಲಿ ಹಣ ಜಮಾ ಮಾಡಿರುತ್ತಾರೆ.ಅಧಿಕಾರಿಗಳ ತಾರತಮ್ಯದಿಂದ ಕೂಲಿ ಕಾರ್ಮಿಕರಿಗೆ ಹಣ ಪಾವತಿಯಾಗದೇ ಇರುವುದರಿಂದ ಕೂಲಿಕಾರ್ಮಿಕರಿಗೆ ತೀವ್ರ ತೊಂದರೆಯಾಗುತ್ತಿದೆ.ಕೂಡಲೇ ಕ್ರಮಕ್ಕೆ ಮುಂದಾಗಬೇಕೆಂದು ತಾ.ಪಂ. ಅಧಿಕಾರಿಗಳಿಗೆ ಒತ್ತಾಯಿಸಿದರು.
ಅಂಬರೀಶ, ರಮೇಶ, ರುಕ್ಕಪ್ಪ ದಂಡಿನ್, ಬಸಪ್ಪ ಚಲವಾದಿ, ಶಂಕ್ರಪ್ಪ,ಶೀಲಪ್ಪ, ಮಲ್ಲಪ್ಪ, ತಿಪ್ಪವ್ವ, ಯಮನವ್ವ, ಶಾಂತಮ್ಮ, ಯಲ್ಲವ್ವ,ಬಸಮ್ಮ ಸೇರಿ ಇತರರು ಈ ಸಂದರ್ಭದಲ್ಲಿ ಇದ್ದರು.

