ಜನವಿರೋಧಿ ವಿದ್ಯುತ್ ದರ ಏರಿಕೆ : ಎಸ್.ಯು.ಸಿ.ಐ. ಖಂಡನೆ
ಲಿಂಗಸುಗೂರು : ರಾಜ್ಯದಲ್ಲಿ ಏಪ್ರಿಲ್ 1 ರಿಂದ ಜಾರಿಗೆ ಬರುವಂತೆ ವಿದ್ಯುತ್ ದರ ಏರಿಕೆ ಮಾಡಿರುವ ರಾಜ್ಯ ಸರಕಾರದ ತೀರ್ಮಾನವನ್ನು ಸೋಷಿಯಲಿಸ್ಟ್ ಯೂನಿಟಿ ಸೆಂಟರ್ ಆಫ್ ಇಂಡಿಯಾ (ಎಸ್.ಯು.ಸಿ.ಐ) ಕಮ್ಯುನಿಷ್ಟ್ ಸಂಘಟನೆ ಖಂಡಿಸಿದೆ.
ಸಹಾಯಕ ಆಯುಕ್ತರ ಕಚೇರಿ ಅಧಿಕಾರಿ ಮೂಲಕ ಮುಖ್ಯಮಂತ್ರಿಗಳಿಗೆ ಮನವಿ ಸಲ್ಲಿಸಿದ ಅವರು, ದೇಶದಲ್ಲಿ ಕೋವಿಡ್ ಮಹಾಮಾರಿ ವ್ಯಾಪಿಸಿ ಅಪಾರ ಪ್ರಮಾಣದ ಸಾವು ನೋವುಗಳಾಗುತ್ತಿದ್ದರೂ ಕೇಂದ್ರ ಮತ್ತು ರಾಜ್ಯ ಸರಕಾರಗಳು ಒಂದೆಡೆ ಪೆಟ್ರೋಲ್-ಡೀಸೆಲ್ ಇಂಧನ ಬೆಲೆಯನ್ನು ನಿರಂತರವಾಗಿ ಹೆಚ್ಚಿಸುತ್ತಿರುವುದು ಜನರನ್ನು ಸಂಕಷ್ಟಕ್ಕೆ ದೂಡಿದೆ. ಕಳೆದ ವರ್ಷ ನವೆಂಬರ್‍ನಲ್ಲಿ ಪ್ರತಿ ಯೂನಿಟ್‍ಗೆ 40 ಪೈಸೆಯಷ್ಟು ದರ ಹೆಚ್ಚಿಸಿದ್ದಲ್ಲದೇ ಈಗ ಪುನಃ 30 ಪೈಸೆಯಂತೆ ಏರಿಕೆ ಮಾಡಿರುವುದು ಜನಸಾಮಾನ್ಯರಿಗೆ ಗಾಯದ ಮೇಲೆ ಬರೆ ಎಳೆದಂತಾಗಿದೆ.
ಕೋವಿಡ್ ಪರಿಹಾರದ ಹೆಸರಿನಲ್ಲಿ ಒಂದು ಕೈಗೆ ಪುಡಿಗಾಸು ನೀಡಿ ಇನ್ನೊಂದು ಕೈಯಿಂದ ಈ ರೀತಿಯಾಗಿ ವಿದ್ಯುತ್, ಪೆಟ್ರೋಲ್ ದರ ಹೆಚ್ಚಳ ಮಾಡುವ ಮೂಲಕ ಸುಲಿಗೆಗೆ ಇಳಿದಿರುವ ಸರಕಾರಗಳ ಕ್ರಮ ಖಂಡನೀಯ. ಇದು ಜನತೆಗೆ ಮಾಡುತ್ತಿರುವ ಮಹಾ ದ್ರೋಹದ ಕಾರ್ಯವಾಗಿದೆ. ಜನರ ಜೇಬಿನಿಂದ ಲೂಟಿ ಮಾಡುತ್ತಿರುವ ಸರಕಾರ ಖಾಸಗಿ ಕುಳಗಳ ಜೇಬು ತುಂಬಲು ಹೊರಟಿರುವುದು ದುರಂತವೇ ಸರಿ. ಕೂಡಲೇ ಸರಕಾರ ಪುನರ್ ಪರಿಶೀಲನೆ ಮಾಡಿ ಹೆಚ್ಚಳ ಮಾಡಿರುವ ದರವನ್ನು ಕಡಿತಗೊಳಿಸಬೇಕೆಂದು ಆಗ್ರಹಿಸಿದರು.
ಸಂಘಟನೆಯ ತಾಲೂಕಿ ಅದ್ಯಕ್ಷ ಶರಣಪ್ಪ ಉದ್ಬಾಳ, ತಿರುಪತಿ ಗೋನವಾರ, ಬಾಲಾಜಿ ಸಿಂಗ್, ಚೆನ್ನಪ್ಪ ತೆಗ್ಗಿನಮನಿ ಸೇರಿ ಇತರರು ಈ ಸಂದರ್ಭದಲ್ಲಿ ಇದ್ದರು.

